ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ರೈತರಿಗೆ ಕಿರುಕುಳ ಖಂಡಿಸಿ ತಾಲೂಕು ರೈತಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾ ಬೃಹತ್ ಪ್ರತಿಭಟನೆ ನಡೆಸಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸೇರಿದ ರೈತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರುದ್ಧ ಧಿಕ್ಕಾರದ ಘೋಷಣೆ ಧರಣಿ ಆರಂಭಿಸಿದರು.
ರೈತಸಂಘದ ಮುಖಂಡ ಕೆ.ಆರ್.ಜಯರಾಂ ಮಾತನಾಡಿ, ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಳದಿಂದ ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ರೈತರ ಪಾಲಿಗೆ ಸರ್ಕಾರ ಸತ್ತು ಹೋಗಿದೆ ಎಂದು ಕಿಡಿಕಾರಿದರು.ತಮ್ಮ ಭೂ ದಾಖಲೆ ಸರಿಪಡಿಸಿಕೊಳ್ಳಲು ರೈತ ಸಮುದಾಯ ನಿತ್ಯ ತಾಲೂಕು ಕಚೇರಿಗೆ ಅಲೆದರೂ ರೈತರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಸರ್ಕಾರ ಜನರಿಗೆ ನೀಡುತ್ತಿರುವ ಬಿಟ್ಟಿ ಭಾಗ್ಯಗಳ ಮಾದರಿಯಲ್ಲಿ ರೈತರಿಗೆ ಚಪ್ಪಲಿ ಭಾಗ್ಯ ಯೋಜನೆ ರೂಪಿಸಲಿ ಎಂದು ಕಿಡಿಕಾರಿದರು.
ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಮಾತನಾಡಿ, ತಾಲೂಕಿನಲ್ಲಿ ಭೂ ಮಾಫಿಯಾ ಸಕ್ರಿಯ ಸರ್ಕಾರಿ ಭೂಮಿಯನ್ನು ಲಪಟಾಯಿಸುತ್ತಿದೆ. ಸರ್ಕಾರಿ ಆಸ್ತಿ ಸಂರಕ್ಷಣೆ ಮಾಡದ ಅಧಿಕಾರಿಗಳು ಭೂ ಮಾಫಿಯಾ ಜೊತೆ ಸಾಮೀಲಾಗಿ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡುತ್ತಿದ್ದಾರೆ ಎಂದು ದೂರಿದರು.ಪಟ್ಟಣದ ಎಸಿಎಂಸಿ ಸೇರಿದ ಜಾಗವನ್ನು ಅಕ್ರಮವಾಗಿ ಖಾತೆ ಮಾಡಲಾಗಿದೆ. ಸರ್ಕಾರಿ ಅಸ್ತಿಗೆ ರಕ್ಷಣೆ ಇಲ್ಲದಂತಾಗಿದೆ. ಕಿಕ್ಕೇರಿ ಹೋಬಳಿಯ ಮಾರ್ಗೋನಹಳ್ಳಿ ಎಲ್ಲೆಯ ಗೋಮಾಳದಲ್ಲಿ ಅನುಭವದಲ್ಲಿರುವ ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸಲಾಗಿದೆ. ಸರ್ಕಾರ ಕೂಡಲೇ ಗೋಮಾಳ ವಶಕ್ಕೆ ಪಡೆದು ಹಾಲಿ ಅನುಭವದಲ್ಲಿರುವ ರೈತರಿಗೆ ಖಾತೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಆಸ್ತಿಗಳು ಪ್ರಭಾವಿಗಳ ಹೆಸರಿಗೆ ಖಾತೆಯಾಗುತ್ತಿದ್ದು, ಕಂದಾಯ ಮಂತ್ರಿಗಳು ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು. ಸರ್ಕಾರಿ ಆಸ್ತಿಗಳ ಉಳಿವಿಗಾಗಿ ರೈತರೇ ಉಳುಮೆ ಮಾಡುವಂತೆ ಅಂದೋಲನ ಸಂಘಟಿಸುವುದಾಗಿ ಎಚ್ಚರಿಸಿದರು.ತಾಲೂಕಿನ ಹೇಮಾವತಿ ಜಲಾಶಯದ ಅಧುನೀಕರಣ ಕಾಮಗಾರಿಯಲ್ಲಿ ಸುಮಾರು 500 ಕೋಟಿ ರು.ಗಳಷ್ಟು ಅವ್ಯವಹಾರ ನಡೆದಿದ್ದು, ದಾಖಲೆಗಳನ್ನು ನೀಡಿದರೂ ಕ್ರಮ ವಹಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್ಐಟಿ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಮುಚ್ಚಿರುವ ರಸ್ತೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಮರುವನಹಳ್ಳಿ ಶಂಕರ್, ಯೋಗೇಶ್, ಜಿಪಂ ಮಾಜಿ ಸದಸ್ಯ ಡಾ.ಕೃಷ್ಣಮೂರ್ತಿ, ಬೂಕನಕೆರೆ ನಾಗರಾಜು, ಆನೆಗೊಳ ಮಂಜಪ್ಪ, ನಾರಾಯಣಸ್ವಾಮಿ, ಮುದ್ದುಕುಮಾರ್, ಕರೋಟಿ ತಮ್ಮಯ್ಯ, ನಗರೂರು ಕುಮಾರ್, ಕೃಷ್ಣೇಗೌಡ, ಕೃಷ್ಣಾಪುರ ರಾಜಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಲತಾ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಇದೇ ವೇಳೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಸರ್ವೆ ಇಲಾಖೆ ಅಧಿಕಾರಿ ಸಿದ್ದಯ್ಯ ಸ್ಥಳದಲ್ಲಿದ್ದು ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿ ಮನವಿ ಪತ್ರ ಸ್ವೀಕರಿಸಿದರು.