ಉಡುಪಿಯಲ್ಲಿ ಸಾಕ್ಷ್ಯ ಸಿಗದಂತೆ ಭ್ರಷ್ಟಾಚಾರ ನಡೆಯುತ್ತಿದೆ: ರಾಜ್ಯ ಉಪಲೋಕಾಯುಕ್ತರಿಗೆ ದೂರು

| Published : Feb 06 2024, 01:33 AM IST

ಉಡುಪಿಯಲ್ಲಿ ಸಾಕ್ಷ್ಯ ಸಿಗದಂತೆ ಭ್ರಷ್ಟಾಚಾರ ನಡೆಯುತ್ತಿದೆ: ರಾಜ್ಯ ಉಪಲೋಕಾಯುಕ್ತರಿಗೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಉಪಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಅವರು ಸೋಮವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ, ಸಾರ್ವಜನಿಕ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರ ಎಂಬ ಬಗ್ಗೆ ವಕೀಲರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ರೆನೊಲ್ಡ್ ಪ್ರವೀಣ್ ಕುಮಾರ್, ನ್ಯಾಯವಾದಿ ಶ್ರೀಧರ ಭಟ್ ಮುಂತಾದವರು ಜಿಲ್ಲೆಯ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಉಪಲೋಕಾಯುಕ್ತರ ಗಮನ ಸಳೆದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲೆಯ ಉಪನೋಂದಣಿ ಕಚೇರಿ, ನಗರಾಭಿವೃದ್ಧಿ ಪ್ರಾಧಿಕಾರ, ತಾಲೂಕು ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಆದರೆ ಈ ಬಗ್ಗೆ ದೂರು ನೀಡುವುದಕ್ಕೆ ಲೋಕಾಯುಕ್ತ ಅಧಿಕಾರಿಗಳು ಸಾಕ್ಷ್ಯ ತನ್ನಿ ಎನ್ನುತ್ತಾರೆ. ಈ ಭ್ರಷ್ಟಾಚಾರ ಯಾವುದೇ ಸಾಕ್ಷ್ಯಾಧಾರಗಳು ಸಿಗದಂತೆ ಬಹಳ ಬುದ್ದಿವಂತಿಕೆಯಿಂದ ನಡೆಯುತ್ತಿದೆ ಎಂದು ಉಡುಪಿ ವಕೀಲರು ಉಪಲೋಕಾಯುಕ್ತರಿಗೆ ದೂರಿದ್ದಾರೆ.

ಉಪಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಅವರು ಸೋಮವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ, ಸಾರ್ವಜನಿಕ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರ ಎಂಬ ಬಗ್ಗೆ ವಕೀಲರೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ರೆನೊಲ್ಡ್ ಪ್ರವೀಣ್ ಕುಮಾರ್, ನ್ಯಾಯವಾದಿ ಶ್ರೀಧರ ಭಟ್ ಮುಂತಾದವರು ಜಿಲ್ಲೆಯ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಉಪಲೋಕಾಯುಕ್ತರ ಗಮನ ಸಳೆದರು.

ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲು ಹೋದರೆ ನೀವೇ ಸಾಕ್ಷ್ಯ ತನ್ನಿ, ವಿಡಿಯೋ ಮಾಡಿ ತನ್ನಿ ಎನ್ನುತ್ತಾರೆ, ಸಾರ್ವಜನಿಕರಿಗೆ ಈ ರೀತಿ ಭ್ರಷ್ಟಾಚಾರದ ವಿಡಿಯೋ ಮಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಸಿದರು.

ಇದಕ್ಕೆ ಉತ್ತರಿಸಿದ ಜಸ್ಟೀಸ್ ಫಣೀಂದ್ರ ಅವರು ತಮಗೆ ಇದುವರೆಗೆ ಉಡುಪಿಯಿಂದ ಇಂತಹ ದೂರು ಬಂದಿಲ್ಲ, ಅಂತಹ ಘಟನೆಗಳು ನಡೆದಿದ್ದರೆ ನೇರವಾಗಿ ನನಗೆ ದೂರು ನೀಡಿ ಎಂದರು.

ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಧೀಶ ಶಾಂತವೀರ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಎಸ್. ಶರ್ಮಿಳಾ, ರಾಜ್ಯ ಲೋಕಾಯುಕ್ತ ಉಪನಿಬಂಧಕ ಚೆನ್ನಕೇಶವ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಉಪ ಲೋಕಾಯುಕ್ತರ ಹಠಾತ್ ಭೇಟಿ

ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಭಾನುವಾರ ಉಡುಪಿ ಜಿಲ್ಲಾ ಆಸ್ಪತ್ರೆ, ರಾಜ್ಯ ಮಹಿಳಾ ನಿಲಯ, ವಿದ್ಯಾರ್ಥಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಅಲ್ಲಿನ ಮೂಲ ಸೌಕರ್ಯ, ಪೌಷ್ಟಿಕ ಆಹಾರ, ಸ್ವಚ್ಛತೆ, ವೈದ್ಯಕೀಯ ಚಿಕಿತ್ಸೆ, ಮಕ್ಕಳ ಶಿಕ್ಷಣ ಸೇರಿದಂತೆ ಮತ್ತಿತರ ಸೌಲಭ್ಯಗಳ ಕುರಿತು ಪರಿಶೀಲಿಸಿದರು.

ಜಿಲ್ಲಾ ಆಸ್ಪತ್ರೆಯ ಸರ್ಜಿಕಲ್, ಪುರುಷರ ಹಾಗೂ ಮಹಿಳಾ ವಾರ್ಡ್ ಮಕ್ಕಳ ವಾರ್ಡ್, ತುರ್ತು ಚಿಕಿತ್ಸಾ ಘಟಕ, ಔಷಧ ವಿತರಣ ಕೇಂದ್ರ ದೂರು ಪೆಟ್ಟಿಗೆಗಳಲ್ಲಿ ನೀಡಿದ ದೂರುಗಳನ್ನು ಸಹ ಪರಿಶೀಲಿಸಿದರು. ರೋಗಿಗಳಿಂದ ಚಿಕಿತ್ಸೆ, ಊಟದ ವ್ಯವಸ್ಥೆ, ಔಷಧಗಳ ನೀಡುವಿಕೆ ಬಗ್ಗೆ ಮಾಹಿತಿ ಪಡೆದರು.ಜಿಲ್ಲಾ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿಸಲು, ಹೊಸದಾಗಿ ನ್ಯೂರೋಲಾಜಿ, ನೆಫ್ರೋಲಾಜಿ, ಕಾರ್ಡಿಲಾಜಿ ವಿಭಾಗಗಳನ್ನು ತೆರೆಯಲು ಮನವಿ ಪತ್ರವನ್ನು ನೀಡಿದರೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.

ಮಕ್ಕಳೊಂದಿಗೆ ಸಮಾಲೋಚಿಸಿದ ಉಪಲೋಕಾಯುಕ್ತರು ಅವರಿಗೆ ಸರಿಯಾದ ಪೌಷ್ಟಿಕ ಆಹಾರ, ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ, ಹಾಸಿಗೆ - ಹೊದಿಕೆ, ಸ್ವಚ್ಛ ವಾತಾವರಣ ನಿರ್ಮಿಸುವ ಜೊತೆಗೆ ಅವರ ಶಿಕ್ಷಣಕ್ಕೆ ಅನುಕೂಲವಾಗುವ ಗ್ರಂಥಾಲಯ, ಕಂಪ್ಯೂಟರ್ ಹಾಗೂ ಉನ್ನತ ಜ್ಞಾನಾರ್ಜನೆಗಾಗಿ ಸ್ಪರ್ಧಾತ್ಮಕ, ನಾಗರಿಕ ಸೇವಾ ಪರೀಕ್ಷೆ ಎದುರಿಸಲು ಮಾಸಿಕ ವಿಶೇಷ ಉಪನ್ಯಾಸ, ಪುಸ್ತಕ ಗಳ ವ್ಯವಸ್ಥೆ ಕಲ್ಪಿಸುವ ಕುರಿತು ಮಾಹಿತಿ ಪಡೆದು, ಸೂಕ್ತ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಜಿಪಂ ಸಿಇಒ ಪ್ರತೀಕ್ ಬಾಯಲ್, ಲೋಕಾಯುಕ್ತ ಮಂಗಳೂರು ವಿಭಾಗದ ಅಧೀಕ್ಷಕ ಸಿ.ಎ. ಸೈಮನ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ರಾಜ್ಯ ಲೋಕಾಯುಕ್ತ ಉಪನಿಬಂಧಕ ಎಂ.ವಿ.ಚೆನ್ನಕೇಶವ ರೆಡ್ಡಿ, ಕರ್ನಾಟಕ ಲೋಕಾಯುಕ್ತ ಉಪನಿಬಂಧಕ ರಂಗೇಗೌಡ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.