ಸಾರಾಂಶ
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಮನಸ್ಸು ಮತ್ತು ಮನೆಯಿಂದಲೇ ಭ್ರಷ್ಟಾಚಾರ ಪ್ರಾರಂಭವಾಗುತ್ತದೆ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕೆ.ಬಸವರಾಜು ಹೇಳಿದರು.ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಆಂತರಿಕ ಭರವಸೆ ಕೋಶದ ಸಹಯೋಗದಲ್ಲಿ ಭ್ರಷ್ಟಾಚಾರ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದೇವೆ. ತಮ್ಮ ತಮ್ಮ ಮನೆಗಳಲ್ಲಿ ಮಕ್ಕಳು ಅಳುವಾಗ ಅಥವಾ ಏನಾದರೂ ಕೆಲಸ ಮಾಡಿಸಿಕೊಳ್ಳಲು ಸಿಹಿ ಆಮಿಷ ಒಡ್ಡಿ ನಮಗೆ ಬೇಕಾದಂತೆ ಮಾಡಿಸಿಕೊಳ್ಳುತ್ತೇವೆ. ಮಕ್ಕಳು ಅಪ್ಪ ಅಮ್ಮನಿಂದ ಲಂಚ ಪಡೆದರೆ ಪೋಷಕರು ಮಕ್ಕಳಿಗೆ ಲಂಚ ಕೊಡುತ್ತಾ ಮನೆಯಿಂದಲೇ ಭ್ರಷ್ಟಾಚಾರ ನಾಂದಿ ಹಾಡುತ್ತೇವೆ ಎಂದರು.ತನ್ನ ಸ್ವಾರ್ಥ ಸಾಧನೆಗಾಗಿ ಹಣ ಕೊಟ್ಟು ನಮ್ಮ ಕೆಲಸ ಮಾಡಿಸಿಕೊಳ್ಳಲು ಮುಂದಾಗುತ್ತೇವೆ. ಲಂಚ ಕೊಡಲು ನಾವೇ ತಯಾರಿ ಇರುವಾಗ ಲಂಚ ಪಡೆಯುವರು ನಮಗಿಂತ ಮುಂಚೂಣಿಯಲ್ಲಿ ಹಣ ಪಡೆಯಲು ತಯಾರಿ ಇರುತ್ತಾರೆ. ಅವಿದ್ಯಾವಂತರಿಗಿಂತ ವಿದ್ಯಾವಂತರೇ ಹೆಚ್ಚು ಭ್ರಷ್ಟಾಚಾರಿಗಳಾಗಿದ್ದಾರೆ. ಭ್ರಷ್ಟಾಚಾರ ತಡೆಗಟ್ಟಬೇಕಾದ ನಮ್ಮ ರಾಜಕಾರಣಿಗಳೇ ಭ್ರಷ್ಟರಾದರೇ ನಮ್ಮನ್ನು ರಕ್ಷಿಸುವರು ಯಾರು ಎಂದು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಯುವಜನರಾದ ನಾವು ಭ್ರಷ್ಟಾಚಾರದ ಬಗ್ಗೆ ಜಾಗೃತರಾಗಿ ಇತರರಿಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕಿ ಡಾ.ನಯನ ತಮ್ಮಯ್ಯ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಭ್ರಷ್ಟಾಚಾರದ ಬಗ್ಗೆ ಜಾಗೃತರಾಗಿ ಪ್ರಶ್ನೆ ಮಾಡುವುದನ್ನು ಕಲಿಯಬೇಕು. ಎಲ್ಲಿ ಭ್ರಷ್ಟಾಚಾರ ನಡೆಯುತ್ತದೆಯೋ ಅದನ್ನು ಅಲ್ಲಿಯೇ ಖಂಡಿಸಬೇಕು ಎಂದರು.ಎನ್‌ಎಸ್‌ಎಸ್ ಅಧಿಕಾರಿಗಳಾದ ವನಿತ್ ಕುಮಾರ್ ಎಂ.ಎನ್. ಮತ್ತು ರೀತಾ ಎನ್.ಪಿ. ಹಾಗೂ ಕಚೇರಿ ಸಿಬ್ಬಂದಿ ಚನ್ನನಾಯಕ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತನುಷಾ ಪ್ರಾರ್ಥಿಸಿದರು. ಧನ್ಯ ನಿರೂಪಿಸಿದರು. ಲಕ್ಷ್ಮೀ ಸ್ವಾಗತಿಸಿದರು. ತ್ರಿಶಾ ವಂದಿಸಿದರು.