ಸಾರಾಂಶ
ಕಲಬುರಗಿ: ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತೊಗೆಯಬೇಕಾದರೆ ಜನ ಬದಲಾಗಬೇಕಿದೆ. ಜನ ಬದಲಾಗದ ಹೊರತು ಇದರ ನಿರ್ಮೂಲನೆ ಅಸಾಧ್ಯ ಎಂದು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅಭಿಪ್ರಾಯಪಟ್ಟರು.ಶುಕ್ರವಾರ ಕಲಬುರಗಿ ನಗರದ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತು ಕಲಬುರಗಿ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿ-ಸಿಬ್ಬಂದಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಸ್ತುತ ಶಾಸಕಾಂಗ, ಕಾರ್ಯಾಂಗ ನಿಶಕ್ತವಾಗಿದೆ. ನ್ಯಾಯಾಂಗ, ಪತ್ರಿಕಾ ರಂಗದ ಮೇಲೆ ಜನರ ಅಲ್ಪಸ್ವಲ್ಪ ವಿಶ್ವಾಸ ಉಳಿದುಕೊಂಡಿದೆ. ಇತ್ತೀಚೆಗೆ ಸರ್ಕಾರದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಮಾಧ್ಯಮ ಅಂಗವು ನಿಶಕ್ತವಾಗಿದೆ ಎಂದು ಬೇಸರದಿಂದ ನುಡಿದರು.ಕತ್ತಿಗಿಂತ ಲೇಖನಿ ಹರಿತವಾಗಿದೆ. ಪತ್ರರ್ಕತರು ಸಮಾಜ ತಿದ್ದುವ ಕೆಲಸ ಮಾಡಬೇಕಿದೆ. ಭ್ರಷ್ಟಾಚಾರ ವಿರುದ್ಧ ಜನರ ಧ್ವನಿಗೆ ಬಲ ನೀಡಬೇಕಿದೆ. ಸ್ವಾತಂತ್ರ್ಯ ಬಂದು 78 ವರ್ಷವಾದರು ಇನ್ನು ನಮ್ಮ ಹಕ್ಕಿಗಾಗಿ ಹೋರಾಟ ಮಾಡುವ ತಾಪತ್ರಯ ತಪ್ಪಿಲ್ಲ ಎಂದರು.ಬಹಳಷ್ಟು ಕಡೆ ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ ಸಾಮಾನ್ಯ ಹೆರಿಗೆ ಪರಿಸ್ಥಿಯಲ್ಲಿಯೂ ಸೀಸರಿನ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಮಾತ್ರೆ, ಔಷಧಿ ಇಲ್ಲದಿದ್ದರೆ ಹೊರಗಡೆಯಿಂದ ಖರೀದಿಸಿ ರೋಗಿಗೆ ನೀಡಲು ಪ್ರತಿ ತಿಂಗಳಿಗೆ 25 ಸಾವಿರ ರು. ಸರ್ಕಾರ ನೀಡುತ್ತಿದ್ದರು, ವೈದ್ಯರು ಅನಾವಶ್ಯಕ ರೋಗಿಗಳಿಗೆ ಚೀಟಿ ಬರೆದು ಹೊರಗಡೆಯಿಂದ ಮಾತ್ರ, ಇಂಜೆಕ್ಷನ್ ತರಿಸಿಕೊಳ್ಳುತ್ತಿರುವುದು ದುರಾದೃಷ್ಟಕರ ಎಂದರು.
ಜಿಲ್ಲೆಯ ಪ್ರತಿ ಆಸ್ಪತ್ರೆಗೆ ಸುತ್ತೋಲೆ ಹೊರಡಿಸುವಂತೆ ಡಿಎಚ್ಓ ಡಾ.ಶರಣಬಸಪ್ಪ ಖ್ಯಾತನಾಳ ಅವರಿಗೆ ಉಪ ಲೋಕಾಯುಕ್ತರು ಸೂಚನೆ ನೀಡಿದರು.ಸುಳ್ಳು ಕೇಸ್ ದಾಖಲಿಸಿದರೆ ಜೈಲು ಶಿಕ್ಷೆ: ರಾಜ್ಯದ ಲೋಕಾಯುಕ್ತ ಸಂಸ್ಥೆಯಲ್ಲಿ ಸುಮಾರು 20 ಸಾವಿರ ಪ್ರಕರಣಗಳು ಬಾಕಿ ಇವೆ. ಇದರಲ್ಲಿ ಸರಿ ಸುಮಾರು 7 ಸಾವಿರ ಪ್ರಕರಣಗಳು ಅಧಿಕಾರಿ-ಸಿಬ್ಬಂದಿಗಳ ಮೇಲೆ ದುರುದ್ದೇಶವಾಗಿ ಸುಳ್ಳು ಪ್ರಕರಣ ದಾಖಲಿಸಿ ನೌಕರರ ನೈತಿಕತೆಗೆ ಕುಂದು ತರುವ ಕೆಲಸ ಕೆಲವರು ಮಾಡುತ್ತಿದ್ದಾರೆ. ಸುಳ್ಳು ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಅದರ ಸುತ್ತನೆ ನಾವು ಸುತ್ತುತ್ತಿರುವುದರಿಂದ ಅನ್ಯಾಯಕ್ಕೊಳಗಾದ ನಿಜವಾದ ಸಂತ್ರಸ್ತರ ಪ್ರಕರಣಗಳನ್ನು ನಿಯಮಿತವಾಗಿ ವಿಚಾರಣೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ಮುಂದೆ ಸರ್ಕಾರಿ ನೌಕರರ ಮೇಲೆ ಯಾರೇ ಸುಳ್ಳು ಪ್ರಕರಣ ದಾಖಲಿಸಿದ್ದಲ್ಲಿ ಅಂತಹ ದೂರುದಾರರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪೊಲೀಸರೆ ಪುಢಾರಿ ಮುಂದೆ ತಲೆ ತಗ್ಗಸಬೇಡಿ:ಆಂತರಿಕ ಶತ್ರುಗಳನ್ನು ಮಟ್ಟ ಹಾಕಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಇಂದು ಪುಡಾರಿ ನಾಯಕರ ಮುಂದೆ ನಮ್ಮ ಪೊಲೀಸರು ತಲೆ ತಗ್ಗಿಸಿ ನಿಲ್ಲುತ್ತಿರುವುದು ತುಂಬಾ ನೋವು ತಂದಿದೆ ಎಂದ ಅವರು, ಪೊಲೀಸರೆ ನೀವು ತಲೆ ತಗ್ಗಿಸಿದರೆ ಅದು ಭಾರತ ಮಾತೆ, ತಲೆಯ ಮೇಲೆ ಟೊಪ್ಪಿಗೆ ಮೇಲೆ ಹಾಕಿಕೊಂಡಿರುವ ರಾಷ್ಟ್ರ ಲಾಂಛನ ತಲೆ ತಗ್ಗಿಸಿದಂತಾಗುತ್ತದೆ. ಹೀಗಾಗಿ ಪಾರದರ್ಶಕವಾಗಿ ಕೆಲಸ ಮಾಡಿ ಯಾವುದೇ ಕಾರಣಕ್ಕೂ ಯಾರಿಗೂ ತಲೆ ತಗ್ಗಿಸಿಬೇಡಿ ಎಂದು ಪೊಲೀಸರಿಗೆ ಕಿವಿಮಾತು ಹೇಳಿದರು. ಪ್ರಭಾರಿ ಕಲಬುರಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎ.ವಿ.ಶ್ರೀನಾಥ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಜಿಪಂ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್, ಡಿ.ಸಿ.ಎಫ್. ಸುಮಿತ್ ಪಾಟೀಲ, ಲೋಕಾಯುಕ್ತ ಅಪರ ನಿಬಂಧಕ ಜೆ.ವಿ.ವಿಜಯಾನಂದ, ಗಿರೀಶ ಭಟ್ ಕೆ., ಅರವಿಂದ ಎನ್.ವಿ., ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ, ಕಲಬುರಗಿ ಲೋಕಾಯುಕ್ತ ಎಸ್.ಪಿ. ಬಿ.ಕೆ.ಉಮೇಶ ಮತ್ತಿತರರಿದ್ದರು.