ಸಾರಾಂಶ
ಮೈಸೂರು : ಮೈಸೂರಿನಲ್ಲಿ ನಿರ್ಮಿಸಲಾಗುತ್ತಿರುವ ಕಾಸ್ಮಾಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರ, ಅತ್ಯಾಧುನಿಕ ತಾರಾಲಯದ ಕಾಮಗಾರಿಯು 2025ರ ಸೆಪ್ಟೆಂಬರ್ ನಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ತಿಳಿಸಿದರು.
ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕಾಸ್ಮಾಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರ, ಅತ್ಯಾಧುನಿಕ ತಾರಾಲಯದ ಕಾಮಗಾರಿ ವೀಕ್ಷಿಸಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಸ್ಮಾಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರ ಮೂಲಕ ಕರ್ನಾಟಕವು ವಿಜ್ಞಾನ ಶಿಕ್ಷಣ ವ್ಯವಸ್ಥೆಯಲ್ಲಿ ದೇಶದ ನಾಯಕತ್ವ ವಹಿಸಲಿದೆ. ಇದು ಭಾರತದ ಪ್ರಮುಖ ಯೋಜನೆಗಳಲ್ಲೊಂದು. ಲಡಾಕ್ ಹಾಗೂ ಕೊಡೈಕೆನಾಲ್ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವೀಕ್ಷಣಾಲಯದಲ್ಲಿರುವಂತೆ ರಾತ್ರಿ ಹಾಗೂ ಬೆಳಗಿನ ಆಕಾಶದ ಚಿತ್ರಣವನ್ನು ಇಲ್ಲಿ ಕಾಣಬಹುದು ಎಂದು ಅವರು ಹೇಳಿದರು.
ಆಧುನಿಕ ತಂತ್ರಜ್ಞಾನ ಬಳಸಿ ತಾರಾಮಂಡಲವನ್ನು ಎಲ್ಇಆಡಿ ಡೋಮ್ ಮೂಲಕ ಜನರು ವೀಕ್ಷಿಸಬಹುದು. 8ಕೆ ರೆಸಲ್ಯೂಶನ್ ಹೊಂದಿರುವ ಅತ್ಯಾಧುನಿಕ 15 ಮೀಟರ್ ಎಲ್ಇ ಡಿ ಗುಮ್ಮಟದ ಈ ತಾರಾಲಯವು, ವಿಶ್ವದ ಮೊದಲ ಗುಮ್ಮಟ ತಾರಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಯುರೋಪ್ ನಲ್ಲಿ ಇದೇ ರೀತಿಯ ಎರಡು ಕಾಮಗಾರಿ ನಡೆಯುತ್ತಿದ್ದು, ಅದಕ್ಕಿಂತ ಮೊದಲು ನಮ್ಮ ಕಾಮಗಾರಿ ಮುಕ್ತಾಯವಾಗುವ ವಿಶ್ವಾಸವಿದೆ. ಸಂಸದರ ನಿಧಿಯಿಂದ 5 ಕೋಟಿ ರೂ. ನೀಡಿದ್ದು, ಮುಂದೆ ಮತ್ತಷ್ಟು ಸಹಾಯ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ತಾರಾಲಯವು ಪ್ಲೇಬ್ಯಾಕ್ ಎಂಜಿನ್ ಹೊಂದಿರಲಿದೆ. ಅನನ್ಯ ನೈಜ ಸಮಯದ ತಾರಾಲಯವು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಶಿಕ್ಷಣ ಮತ್ತು ತರಬೇತಿಗೆ ಸಹಕಾರಿಯಾಗಲಿದೆ. ಖಗೋಳವಿಜ್ಞಾನದ ವ್ಯವಸ್ಥಿತ ದಾಖಲಾತಿಯೊಂದಿಗೆ ದತ್ತಾಂಶ, ಕೋಡಿಂಗ್, ಪ್ರಾಯೋಗಿಕ ಅನುಭವವನ್ನು ಸಂಸ್ಕರಿಸುವ ಕುರಿತು ತರಬೇತಿ ಇಲ್ಲಿ ನೀಡಲಾಗುವುದು ಎಂದು ಅವರು ಹೇಳಿದರು.
ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಯ ದೊಡ್ಡ ಯೋಜನೆ ಇದಾಗಿದ್ದು, 90 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈಗಾಗಲೇ ತಾರಾಮಂಡಲು ಹಾಗೂ ವಿಜ್ಞಾನದ ಬಗ್ಗೆ ಮಕ್ಕಳಿಗೆ ಕನ್ನಡದಲ್ಲಿ ಮಾಹಿತಿ ನೀಡುವ ಶಿಕ್ಷಕರ ತಂಡವು ಜಿಲ್ಲೆಯಲ್ಲಿ ಇದೆ. ಈ ಕೇಂದ್ರದಲ್ಲಿ ತರಬೇತಿ ಕಾರ್ಯಾಗಾರ, ಖಗೋಳ ವಿಜ್ಞಾನದ ಕಾರ್ಯಾಗಾರ ನಡೆಯಲಿದ್ದು, ಮಕ್ಕಳಿಗೆ ಕನ್ನಡ ಮತ್ತು ಆಂಗ್ಲ ಭಾಷೆ ಎರಡರಲ್ಲೂ ಮಾಹಿತಿ ನೀಡಲಾಗುವುದು ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಯ ನಿರ್ದೇಶಕಿ ಪ್ರೊ. ಅನ್ನಪೂರ್ಣಿ ಸುಬ್ರಹ್ಮಣಿ, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ಮೊದಲಾದವರು ಇದ್ದರು.