ಸಾರಾಂಶ
ಕ್ಲಬ್‌ನಲ್ಲಿ ರಾಷ್ಟ್ರಮಟ್ಟದ ಗುಣಮಟ್ಟದ ಟೇಬಲ್ ಟೆನ್ನಿಸ್ ಅಂಕಣಗಳಿದ್ದು ರಾಜ್ಯ, ರಾಷ್ಟ್ರಮಟ್ಟದ ಟಿಟಿ ಪಂದ್ಯಗಳು ಜರುಗಿವೆ. ಜತೆಗೆ ಸ್ನೂಕರ್, ಬಿಲಿಯಾರ್ಡ್ಸ್ ಹಾಗೂ ಜಿಮ್ ಸಹ ಕ್ಲಬ್ ಒಳಗೊಂಡಿದೆ.
ಧಾರವಾಡ:
ಇಲ್ಲಿಯ ಕೋರ್ಟ್ ವೃತ್ತದ ಬಳಿ ಇರುವ ಕಾಸ್ಮಸ್ ಕ್ಲಬ್ ನೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಡಿ. 29ರ ಬೆಳಗ್ಗೆ 10ಕ್ಕೆ ಜೆಎಸ್ಸೆಸ್ ಸಂಸ್ಥೆಯ ಸನ್ನಿಧಿ ಸಭಾಂಗಣದಲ್ಲಿ ಶತಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ನಿತಿನ್ ಟಗರಪುರ ಹೇಳಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬರೀ ಮನರಂಜನೆ ಮಾತ್ರವಲ್ಲದೇ, ಸಾಮಾಜಿಕ ಮತ್ತು ಕ್ರೀಡಾ ತಾಣವಾಗಿರುವ ಕಾಸ್ಮಸ್ ಕ್ಲಬ್ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಅರವಿಂದ ಬೆಲ್ಲದ ಭಾಗವಹಿಸುತ್ತಿದ್ದು, ತಾವು ಅಧ್ಯಕ್ಷತೆ ವಹಿಸಲಿದ್ದೇವೆ. ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ರಾವ್ ಬಹೂದ್ಧೂರ್ ಗೋಪಾಲ ಅನಂತಗಿರಿ ಪ್ರೇರಣೆಯಿಂದ ಕ್ಲಬ್ 1924ರಲ್ಲಿ ಆರಂಭವಾಯಿತು. ಪ್ರಸ್ತುತ 123 ಸದಸ್ಯರು ಇದ್ದು, ಅವರು ಸೇರಿದಂತೆ ಕುಟುಂಬದ ಸದಸ್ಯರು ಕ್ಲಬ್ ಆವರಣದಲ್ಲಿ ಕ್ರೀಡಾ ಸಂಕಿರ್ಣದ ಲಾಭ ಪಡೆಯುತ್ತಿದ್ದಾರೆ ಎಂದರು.
ಕ್ಲಬ್‌ನಲ್ಲಿ ರಾಷ್ಟ್ರಮಟ್ಟದ ಗುಣಮಟ್ಟದ ಟೇಬಲ್ ಟೆನ್ನಿಸ್ ಅಂಕಣಗಳಿದ್ದು ರಾಜ್ಯ, ರಾಷ್ಟ್ರಮಟ್ಟದ ಟಿಟಿ ಪಂದ್ಯಗಳು ಜರುಗಿವೆ. ಜತೆಗೆ ಸ್ನೂಕರ್, ಬಿಲಿಯಾರ್ಡ್ಸ್ ಹಾಗೂ ಜಿಮ್ ಸಹ ಕ್ಲಬ್ ಒಳಗೊಂಡಿದೆ. ನಿತ್ಯ ಹತ್ತಾರು ವಿದ್ಯಾರ್ಥಿಗಳು, ಸದಸ್ಯರು ಈ ಕ್ರೀಡಾ ಸಂಕೀರ್ಣದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದು ಅನೇಕ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.ಶತಮಾನೋತ್ಸವ ಸವಿನೆನಪಿಗಾಗಿ ಶತಮಾನೋತ್ಸವ ಕಟ್ಟಡ ನಿರ್ಮಿಸಿದ್ದು, ನವೆಂಬರ್ ತಿಂಗಳಲ್ಲಿ ರಾಜ್ಯಮಟ್ಟದ ಟಿಟಿ ಪಂದ್ಯಾವಳಿ ಸಹ ಆಯೋಜಿಸಲಾಗಿತ್ತು. ಬರುವ ದಿನಗಳಲ್ಲಿ ಕ್ಲಬ್‌ನ ಕ್ರೀಡಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವ ಚಿಂತನೆ ಇದೆ ಎಂದು ಅಧ್ಯಕ್ಷ ಟಗರಪುರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಉಪಾಧ್ಯಕ್ಷ ಎಂ.ಎಂ. ಹಿರೇಮಠ, ಕಾರ್ಯದರ್ಶಿ ಅಶೋಕ ಹಿರೇಮಠ, ಜಂಟಿ ಕಾರ್ಯದರ್ಶಿ ಎಸ್.ಎಂ. ರುದ್ರಸ್ವಾಮಿ, ಖಜಾಂಚಿ ಎಸ್.ಬಿ. ಕಿತ್ತೂರ ಹಾಗೂ ಕಾಕಾ ಸದಸ್ಯರಾದ ವಿಜಯ ಸುಣಗಾರ, ಬಿ.ಎನ್. ಜಮಖಂಡಿ, ಎಂ.ಎಸ್. ಹಾಲಭಾವಿ, ಸಿ.ಎಚ್. ಜೋಗಿಹಳ್ಳಿ ಹಾಗೂ ಎಚ್.ಎಫ್. ಹೆಬ್ಬಾಳ ಇದ್ದರು.