ಕೋಟ್ಪಾ ದಾಳಿ : ೨೯೬೦ ರೂ. ದಂಡ ವಸೂಲಿ

| Published : Mar 21 2024, 01:05 AM IST

ಸಾರಾಂಶ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಚಾಮರಾಜನಗರ ಪಟ್ಟಣದ ಪಚ್ಚಪ್ಪ ವೃತ್ತದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮೂಲಕ ಗುಂಡ್ಲುಪೇಟೆ ವೃತ್ತದವರೆಗೆ ಕೋಟ್ಪಾ ಕಾರ್ಯಚರಣೆ ನಡೆಸಿ ೨೭ ಪ್ರಕರಣಗಳಿಗೆ ೨೯೬೦ ರೂ. ದಂಡ ವಿಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಚಾಮರಾಜನಗರ ಪಟ್ಟಣದ ಪಚ್ಚಪ್ಪ ವೃತ್ತದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮೂಲಕ ಗುಂಡ್ಲುಪೇಟೆ ವೃತ್ತದವರೆಗೆ ಕೋಟ್ಪಾ ಕಾರ್ಯಚರಣೆ ನಡೆಸಿ ೨೭ ಪ್ರಕರಣಗಳಿಗೆ ೨೯೬೦ ರೂ. ದಂಡ ವಿಧಿಸಲಾಗಿದೆ.

ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಜಿಲ್ಲಾ ಕೋಟ್ಪಾ ತನಿಖಾ ತಂಡದ ಸಹಯೋಗದೊಂದಿಗೆ ದಾಳಿ ನಡೆಸಲಾಯಿತು.

ದಾಳಿಯ ವೇಳೆ ನಿಯಮ ಉಲ್ಲಂಘನೆ ಮಾಡಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳು, ಕೋಟ್ಪಾ ಸೆಕ್ಷನ್-೪ ಎಚ್ಚರಿಕೆ ನಾಮಫಲಕವನ್ನು ಪ್ರದರ್ಶಿಸದ ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್‌ಗಳು, ಟೀ ಸ್ಟಾಲ್‌ಗಳು, ಚಿಲ್ಲರೆ ಅಂಗಡಿಗಳು ಹಾಗೂ ಇತರೆ ಅಂಗಡಿಗಳು, ಕೋಟ್ಪಾ ಸೆಕ್ಷನ್-೬(ಎ) ನಾಮಫಲಕವನ್ನು ಪ್ರದರ್ಶಿಸದ ತಂಬಾಕು ಮಾರಾಟವಿರುವ ಅಂಗಡಿಗಳು, ಶಿಕ್ಷಣ ಸಂಸ್ಥೆಯ ೧೦೦ ಗಜಗಳ ಅಂತರದ ಒಳಗೆ ತಂಬಾಕು ಪದಾರ್ಥಗಳನ್ನು ಮಾರಾಟ ಮತ್ತು ಸೇವನೆಗೆ ಉತ್ತೇಜನ ನೀಡುವ ಅಂಗಡಿಗಳಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು. ಕರಪತ್ರ ವಿತರಿಸಿ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಮತ್ತು ತಂಬಾಕು ನಿಯಂತ್ರಣ ಕಾಯ್ದೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ, ಡಿಡಿಪಿಐ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಗಿರಿಧರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ನವೀನ್‌ಕುಮಾರ್, ಮಧುಶಂಕರ್, ದಯಾನಂದ್, ಭಾಸ್ಕರ್, ನಾರಾಯಣ್, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರ ಪ್ರಶಾಂತ್ ಹಾಗೂ ಸಮಾಜ ಕಾರ್ಯಕರ್ತವೀರಣ್ಣ, ಕಾರ್ಮಿಕ, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ದಾಳಿಯ ವೇಳೆ ಹಾಜರಿದ್ದರು. ಜಿಲ್ಲೆಯಲ್ಲಿರುವ ಎಲ್ಲಾ ಸಾರ್ವಜನಿಕ ಸ್ಥಳದ ಮಾಲೀಕರು, ಮುಖ್ಯಸ್ಥರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.