ಸಾರಾಂಶ
ಪ್ರಕಾಶ ಗುದ್ನೇಪ್ಪನವರ
ಕನ್ನಡಪ್ರಭ ವಾರ್ತೆ ಶಹಾಪುರವಾಣಿಜ್ಯ ಬೆಳೆ, ಬಿಳಿ ಬಂಗಾರವೆಂದು ಖ್ಯಾತಿ ಪಡೆದಿರುವ ಹತ್ತಿ ಬೆಳೆಗೆ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಆರಂಭದ ಅವಶ್ಯವಾಗಿದೆ. ಅತೀವೃಷ್ಟಿಯಿಂದ ಸಂಕಷ್ಟದಲ್ಲಿರುವ ಅನ್ನದಾತರ ಅಳಿದುಳಿದ ಹತ್ತಿ ಬೆಳೆಗೆ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಆಸರೆಯಾಗಬಹುದು ಎಂಬುದು ಮಹದಾಸೆ.
2025 -26 ನೇ ಸಾಲಿನ ಪ್ರಸಕ್ತ ಪೂರ್ವ ಮುಂಗಾರು ಹಾಗೂ ಮುಂಗಾರು ಬೆಳೆಗಳು ವರುಣಾರ್ಭಟಕ್ಕೆ ಸಿಕ್ಕು ನಲುಗಿ ಹೋಗಿವೆ. ಹೆಚ್ಚಿನ ತೇವಾಂಶದಿಂದ ಸಂಪೂರ್ಣ ನಾಶಡ್ಗಿದೆ. ಅಳಿದುಳಿದ ಹತ್ತಿ ಬೆಳೆಯು ಇಳುವರಿಯಲ್ಲಿ ಕುಂಠಿತಗೊಂಡಿದ್ದು, ರೈತರನ್ನು ಮತ್ತಷ್ಟೂ ಸಂಕಷ್ಟಕ್ಕೆ ತಳ್ಳಿದಂತಾಗಿದೆ.ಇತ್ತ, ಹತ್ತಿ ಬಿಡಿಸಲು ಕೂಲಿ ಕಾರ್ಮಿಕರ ಕೊರತೆಯೂ ಎದ್ದು ಕಾಣುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ದುಡಿಯುವ ಕೂಲಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದ್ದು, ಪರಸ್ಥಳದ ಕಾರ್ಮಿಕರ ಮೊರೆ ಹೋಗಿ ಹೆಚ್ಚಿನ ವೇತನ ನೀಡುವ ಅನಿವಾರ್ಯತೆ ಎದುರಾಗಿದೆ. 1 ಕೆಜಿ ಹತ್ತಿ ಬಿಡಿಸಲು 8 ರಿಂದ ಹತ್ತು ರು.ಗಳ ಕೇಳುವ ಕೂಲಿಯವರಿಗೆ ಬೆಳೆದ ಬೆಳೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ನೀಡಬೇಕಾದ ಅನಿವಾರ್ಯತೆ ರೈತರಿಗೆ ಬಂದೊದಗಿದಂತಾಗಿದೆ. ಇಂತಹದರಲ್ಲಿ ದೇವರು ವರ ನೀಡಿದರೂ ಪೂಜಾರಿ ನೀಡಲಿಲ್ಲ ಎಂಬಂತಾಗಿದೆ. ಇಷ್ಟೆಲ್ಲ ಸಂಕಷ್ಟದಲ್ಲಿರುವ ಅನ್ನದಾತರಿಗೆ ಅತೀ ಶೀಘ್ರವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಆರಂಭವಾಗಬೇಕಾಗಿದೆ.
ಬೆಂಬಲ ಬೆಲೆ ಖರೀದಿ ಕೇಂದ್ರಗಳು ಎಂದರೆ ರೈತರಿಗೆ ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರವು ಕೃಷಿ ಉತ್ಪನ್ನಗಳನ್ನು ಖರೀದಿಸುವ ಕೇಂದ್ರಗಳಾಗಿವೆ. ಇವು ಮಾರುಕಟ್ಟೆಯ ಬೆಲೆ ಕುಸಿತದಿಂದ ರೈತರನ್ನು ರಕ್ಷಿಸುತ್ತವೆ ಮತ್ತು ಹಸಿರು ಕ್ರಾಂತಿಯ ಸಮಯದಲ್ಲಿ ಪರಿಚಯಿಸಲ್ಪಟ್ಟಿವೆ. ಜಿಲ್ಲೆಯಲ್ಲಿ ಬೆಳೆದ ಬೆಳೆಗಳನ್ನು ಈ ಕೇಂದ್ರಗಳ ಮೂಲಕ ಖರೀದಿಸಬೇಕಾಗುತ್ತದೆ. ಬೆಂಬಲ ಬೆಲೆ ಖರೀದಿ ಕೇಂದ್ರಗಳ ಉದ್ದೇಶ ರೈತರ ರಕ್ಷಣೆಯಾಗಿರುತ್ತದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರನ್ನು ರಕ್ಷಿಸುವುದು.ಆದರೆ, ರೈತರು ತಮ್ಮ ಮುಂದಿನ ಬೆಳೆ ಬಿತ್ತನೆ ಕಾರ್ಯ ಮಾಡಲು ಹಾಗೂ ಕೂಲಿಯವರ ವೇತನ ನೀಡುವ ಸಲುವಾಗಿ ಖಾಸಗಿ ಖರೀದಿದಾರರಿಗೆ ಕಡಿಮೆ ಬೆಲೆಗೆ ಮಾರಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಖರೀದಿದಾರರು ಕಡಿಮೆ ಬೆಲೆಗೆ ಕೊಂಡುಕೊಂಡು ಬೆಂಬಲ ಬೆಲೆಗೆ ಮಾರುವ ಉದಾಹರಣೆಗಳು ಕಾಣಸಿಗುತ್ತವೆ.
ಶಹಾಪುರ ತಾಲೂಕಿನಲ್ಲಿ ಒಟ್ಟು 21 ಹತ್ತಿ ಮಿಲ್‌ಗಳಿಂದ ಟೆಂಡರ್ ಬಂದಿದ್ದು, ಅವುಗಳೆಲ್ಲವೂ ಖರೀದಿ ಕೇಂದ್ರಗಳಾಗುತ್ತವೆ. ಸೆಪ್ಟೆಂಬರ್ ಒಂದರಿಂದಲೇ ರೈತರಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹತ್ತಿ ಬೆಳೆದ ರೈತರು ನೋಂದಣಿ ಪ್ರಕ್ರಿಯೆ ಮಾಡಿಕೊಂಡ ಬಳಿಕ ಅಕ್ಟೋಬರ್ 27 ಹಾಗೂ 28 ರಿಂದ ಸ್ಲಾಟ್ ಓಪನ್ ಆಗುತ್ತದೆ.ಕಿರಣ್ ಪುರೋಹಿತ, ಖರೀದಿ ಅಧಿಕಾರಿ, ಭಾರತೀಯ ಹತ್ತಿ ನಿಗಮ ನಿಯಮಿತ, ಶಹಾಪುರ.
ಸರ್ಕಾರ ನಿಗದಿ ಪಡಿಸಿರುವ ಎಂಎಸ್‌ಪಿ ಆಧಾರದ ಮೇಲೆ ಮಧ್ಯಮ ಎಳೆಯ ಹತ್ತಿಗೆ ₹ 7710 ಹಾಗೂ ಉದ್ದನೆಯ ಎಳೆಯ ಹತ್ತಿ ₹ 8110 ನೀಡಿ ಖರೀದಿಸಲಾಗುವುದು.ಸುಮಂಗಲಾ ಹೂಗಾರ ಕಾರ್ಯದರ್ಶಿ, ಎಪಿಎಂಸಿ, ಶಹಾಪುರ.
ರೈತರ ಹಿಂಗಾರು ಬಿತ್ತನೆ ಪೂರ್ವದಲ್ಲಿ ಖರೀದಿ ಕೇಂದ್ರ ಆರಂಭವಾದರೆ ಯೋಗ್ಯ. ಅಡಚಣೆ ಇಲ್ಲದ ವ್ಯಕ್ತಿಗಳಿಗೆ ಹಾಗೂ ಖಾಸಗಿ ಖರೀದಿದಾರರಿಗೆ ಅನುಕೂಲ ಮಾಡಿದಂತಾಗುವುದು.ಅಶೋಕರಾವ್ ಮಲ್ಲಾಬಾದಿ ಕಾರ್ಯದರ್ಶಿ, ಕೃಷ್ಣಾ ಅಚ್ಚುಕಟ್ಟು ಭೂಮಿ ಉಳಿಸಿ ಹೋರಾಟ ಸಮಿತಿ, ಶಹಾಪುರ.