ಹತ್ತಿ ಬೀಜೋತ್ಪಾದನೆ ರೈತರಿಗೆ ಸಂಘಟಕರ, ಕಂಪನಿಗಳಿಂದ ಮೋಸ

| Published : Jul 18 2025, 12:55 AM IST

ಹತ್ತಿ ಬೀಜೋತ್ಪಾದನೆ ರೈತರಿಗೆ ಸಂಘಟಕರ, ಕಂಪನಿಗಳಿಂದ ಮೋಸ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ಹತ್ತಿ ಬೀಜೋತ್ಪಾದನಾ ಕಂಪನಿಗಳ ಮಾಲೀಕರು, ಸಂಘಟಕರು ಹಾಗೂ ಮೇಲ್ವಿಚಾರಕರಿಂದ ಹತ್ತಿ ಬೀಜೋತ್ಪಾದನಾ ಮಾಡುವ ರೈತರಿಗೆ ಮೋಸವಾಗುತ್ತಿದೆ.

ಕನಕಗಿರಿ:

ಹತ್ತಿ ಬೀಜೋತ್ಪಾದನೆ ರೈತರಿಗೆ ಮೋಸ ಮಾಡಲು ಮುಂದಾಗಿದ್ದ ಖಾಸಗಿ ಕಂಪನಿಗಳು ಹಾಗೂ ಸಂಘಟಕರಿಗೆ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದರೂ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಆಗ್ರಹಿಸಿ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಗುರುವಾರ ಹುಲಿಹೈದರ್‌ ಗ್ರಾಮದಲ್ಲಿ ಮನವಿ ಸಲ್ಲಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಮಾತನಾಡಿ, ಜಿಲ್ಲೆಯಲ್ಲಿ ಹತ್ತಿ ಬೀಜೋತ್ಪಾದನಾ ಕಂಪನಿಗಳ ಮಾಲೀಕರು, ಸಂಘಟಕರು ಹಾಗೂ ಮೇಲ್ವಿಚಾರಕರಿಂದ ಹತ್ತಿ ಬೀಜೋತ್ಪಾದನಾ ಮಾಡುವ ರೈತರಿಗೆ ಮೋಸವಾಗುತ್ತಿದೆ. ಜಿಲ್ಲಾಧಿಕಾರಿ ಹಾಗೂ ಕೃಷಿ ನಿರ್ದೇಶಕರು ಜಂಟಿಯಾಗಿ ಜೂ. ೩೦ರಂದು ಸಭೆ ನಡೆಸಿ, ಸಂಪೂರ್ಣವಾಗಿ ಬೆಳೆದ ಹತ್ತಿ ಬೀಜೋತ್ಪಾದನೆ ಖರೀದಿಸಲು ಸೂಚಿಸಲಾಗಿತ್ತು. ರೈತರು ಬೆಳೆದ ಬೀಜವನ್ನು ಖರೀದಿಸದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದೆಂದು ತಿಳಿಸಿದ್ದರು. ಆದರೆ, ಕಂಪನಿ ಮತ್ತು ಸಂಘಟಕರು ಸಿರಿವಾರ ಮತ್ತು ಹುಲಿಹೈದರ ಸೀಮಾ ವ್ಯಾಪ್ತಿಯ ೩೫ ಎಕರೆ ಪ್ರದೇಶದಲ್ಲಿ ಬೆಳೆದ ಹತ್ತಿ ಬೆಳೆಯನ್ನು ಬೀಜ ಸರಿಯಿಲ್ಲ ಎಂದು ರೈತರಿಗೆ ತಿಳಿಸಿ ನಾಶಪಡಿಸಿದ್ದಾರೆ. ಅದಕ್ಕಾಗಿ ಜಿಲ್ಲಾಧಿಕಾರಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇನ್ನೂ ತಾಲೂಕು ವ್ಯಾಪ್ತಿಯ ಲಾಯದುಣಸಿ, ಬಸರಿಹಾಳ, ಗೌರಿಪುರ, ರಾಂಪುರ, ಕರಡೋಣ, ಸಿರಿವಾರ ಸೇರಿ ಒಟ್ಟು ೧೩ ಕೆರೆಗಳಿಗೆ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ನೀರು ತುಂಬಿಸುವ ಯೋಜನೆ ಪ್ರಕ್ರಿಯೆ ಪ್ರಾರಂಭವಾಗದೇ ಇರುವುದು ಈ ಭಾಗದ ರೈತರ ದುರ್ದೈವವಾಗಿದೆ. ಕೆರೆಗಳು ತುಂಬಿದಾಗ ಮಾತ್ರ ರೈತರು ನೀರಾವರಿ ಕೃಷಿಗೆ ಸಹಕಾರಿಯಾಗಲಿದೆ. ಆದ್ದರಿಂದ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ತಾಲೂಕಿನ ಎಲ್ಲ ಕೆರೆ ತುಂಬಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಹುಲಿಹೈದರ್ ಹೋಬಳಿ ಘಟಕದ ಅಧ್ಯಕ್ಷ ಸಣ್ಣ ಶೇಖರಪ್ಪ ಗದ್ದಿ, ಪದಾಧಿಕಾರಿಗಳಾದ ಹನುಮಂತಪ್ಪ ಬೇವಿನಗಿಡ ಇತರರಿದ್ದರು.