ನಿರೀಕ್ಷೆಯಂತೆ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಆಭ್ಯರ್ಥಿ ಸಲೀಂ ಅಹ್ಮದ್ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್‌:

ನಿರೀಕ್ಷೆಯಂತೆ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಆಭ್ಯರ್ಥಿ ಸಲೀಂ ಅಹ್ಮದ್ ಆಯ್ಕೆಯಾಗಿದ್ದಾರೆ.

ಚಿಂತಕರ ಚಾವಡಿ, ಹಿರಿಯ ಮನೆ ಎನಿಸಿಕೊಂಡಿರುವ ಶತಮಾನದ ಇತಿಹಾಸವಿರುವ ವಿಧಾನ ಪರಿಷತ್ತಿನ 32ನೇ ಸಭಾಪತಿಯಾಗಿ ಸಲೀಂ ಅಹಮದ್‌ ಚುನಾಯಿತರಾದರು.

ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಬಲವಂತವಾಗಿ ರಾಜೀನಾಮೆ ಪಡೆದುಕೊಂಡಿರುವುದನ್ನು ಉಲ್ಲೇಖಿಸಿ ಧಿಕ್ಕಾರದ ಘೋಷಣೆ ಕೂಗಿದರು. ಕೆಲವರು ಮಾತನಾಡಲು ಅವಕಾಶ ನೀಡುವಂತೆ ಕೋರಿದರು. ಆದರೆ ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಬೇರೆ ಕಲಾಪಕ್ಕೆ ಅವಕಾಶ ನೀಡದೆ ಚುನಾವಣಾ ಪ್ರಕ್ರಿಯೆ ಆರಂಭಿಸಿದರು‌.

ಕಾಂಗ್ರೆಸ್ ಆಭ್ಯರ್ಥಿ ಸಲೀಂ ಅಹಮದ್‌ ಪರ ಐದು ಪ್ರಸ್ತಾವನೆ ಹಾಗೂ ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿಯ ಪಿ.ಎಚ್‌.ಪೂಜಾರ್‌ ಅವರ ಪರ ಎರಡು ಪ್ರಸ್ತಾವನೆಗಳು ಸಲ್ಲಿಕೆಯಾದವು. ಸಲೀಂ ಅಹಮದ್‌ ಅವರ ಪರ 38 ಮತಗಳು ಬಂದರೆ ಮೈತ್ರಿ ಕೂಟದ ಅಭ್ಯರ್ಥಿ ಪಿ.ಎಚ್‌.ಪೂಜಾರ್‌ ಅವರಿಗೆ 30 ಮತಗಳು ಬಂದವು. ಸಲೀಂ ಅಹ್ಮದ್ ಅವರು ನೂತನ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆಂದು ಪುಟ್ಟಣ್ಣ ಘೋಷಿಸಿದರು ನಂತರ ಆಡಳಿತ ಮತ್ತು ಪ್ರತಿಪಕ್ಷ ನಾಯಕರು ಹಾಗೂ ಸದಸ್ಯರು ಸಲೀಂ ಅಹಮದ್‌ ಅವರನ್ನು ಸಭಾಪತಿ ಪೀಠಕ್ಕೆ ಕರೆತಂದು ಅಭಿನಂದನೆ ಸಲ್ಲಿಸಿದರು.

ನೂತನ ಸಭಾಪತಿ ಅವರನ್ನು ಅಭಿನಂದಿಸಿ ಮಾತನಾಡಿದ ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ, ಸಲೀಂ ಅಹ್ಮದ್ ಅವರು ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ತತ್ವ ಸಿದ್ದಾಂತಗಳಿಗೆ ಮಾರುಹೋದವರು. ಹಂತ-ಹಂತವಾಗಿ ಕಾಂಗ್ರೆಸ್ ನೀಡಿದ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ಸಭಾಪತಿಯಾಗಿ ಆಯ್ಕೆಯಾಗಿರುವುದು ಸಂತೋಷ ತಂದಿದೆ. ಸದನದಲ್ಲಿ ರಾಜಕೀಯಕ್ಕಿಂತ ಹೆಚ್ಚಾಗಿ ಸಾರ್ವಜನಿಕ ಮಹತ್ವದ ವಿಷಯಗಳ ಬಗ್ಗೆ ಹೆಚ್ಚು ಚರ್ಚೆ ನಡೆಯಬೇಕು ಎಂದರು.

ಪಕ್ಷಾತೀತವಾಗಿ ಕೆಲಸ ಮಾಡಲಿ:

ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಲೀಂ ಅಹ್ಮದ್ ಅವರೊಂದಿನ ನಮ್ಮ ಸ್ನೇಹ ನಾಲ್ಕು ದಶಕದ ಹಳೆಯದು. ವೈಯಕ್ತಿಕವಾಗಿ ನಾವು ಸ್ನೇಹಿತರು. ಆದರೆ, ರಾಜಕೀಯವಾಗಿ‌ ಬೇರೆ ಬೇರೆ ಸಿದ್ದಾಂತದಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ. ಸಭಾಪತಿಯಾದವರು ಜಾತ್ಯತೀತ ಮಾತ್ರವಲ್ಲ, ಪಕ್ಷಾತೀತವಾಗಿ ಕೆಲಸ ಮಾಡಬೇಕಾಗುತ್ತದೆ ಎಂದರು.

ಸಭಾಪತಿ ಸ್ಥಾನಕ್ಕೆ ನಾವು ಅಭ್ಯರ್ಥಿ ಕಣಕ್ಕಿಳಿಸುವ ಉದ್ದೇಶ ಇರಲಿಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದಿತ್ತು. ನಾಮಪತ್ರ ಸಲ್ಲಿಕೆ ಮೊದಲೇ ನಮ್ಮ ಜೊತೆ ಚರ್ಚಿಸಿದ್ದರೆ ಎಲ್ಲ ಸದಸ್ಯರ ಜೊತೆ ಚರ್ಚಿಸಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಬಹುದಿತ್ತು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಮಾತನಾಡಿ, ನೂತನ ಸಭಾಪತಿ ಸಲೀಂ ಅಹಮದ್‌ ಅವರಿಂದ ಆಡಳಿತ ಮತ್ತು ಪ್ರತಿಪಕ್ಷಗಳಿಗೆ ನ್ಯಾಯ ಒದಗಿಸುವ ವಿಶ್ವಾಸವಿದೆ. ಮೇಲ್ಮನೆಯಲ್ಲಿ ನಡೆಯುವ ಚರ್ಚೆಗಳ ಗುಣಮಟ್ಟ ಇನ್ನಷ್ಟು ಹೆಚ್ಚಾಗಬೇಕು. ಸಮಾಜಕ್ಕೆ ನ್ಯಾಯಕೊಡುವ ಕೆಲಸ ಸದನದಿಂದ ಆಗಬೇಕು ಎಂದರು.

ಸಚಿವ ಬಸವರಾಜ ರಾಯರೆಡ್ಡಿ, ಕಾಂಗ್ರೆಸ್ಸಿನ ಬಿ.ಕೆ.ಹರಿಪ್ರಸಾದ್‌, ಪುಟ್ಟಣ್ಣ, ಎಸ್‌.ರವಿ, ಉಮಾಶ್ರೀ, ನಾಗರಾಜ ಯಾದವ್‌, ಮಂಜುನಾಥ್‌ ಭಂಡಾರಿ, ಐವನ್‌ ಡಿಸೋಜಾ, ಬಿಜೆಪಿಯ ಸಿ.ಟಿ.ರವಿ, ಎಸ್‌.ವಿ.ಸಂಕನೂರು, ಜೆಡಿಎಸ್‌ನ ಎಸ್‌.ಎಲ್‌.ಬೋಜೇಗೌಡ, ಟಿ.ಎ.ಶರವಣ ಸಭಾಪತಿ ಅವರನ್ನು ಅಭಿನಂದಿಸಿದರು.ವಿಧಾನಸಭೆ 18ನೇ ಸ್ಪೀಕರ್‌ ಆಗಿ ಜಿ.ಎಸ್‌.ಪಾಟೀಲ್‌ ಅವಿರೋಧ ಆಯ್ಕೆ:

ಬಿಜೆಪಿ ಚುನಾವಣಾ ಬಹಿಷ್ಕಾರ ನಡುವೆ ಗುರುಪಾದಗೌಡ ಸಂಗನಗೌಡ ಪಾಟೀಲ್‌ (ಜಿ.ಎಸ್‌.ಪಾಟೀಲ್‌) ಅವರನ್ನು ಕರ್ನಾಟಕ ವಿಧಾನಸಭೆಗೆ 18ನೇ ಸಭಾಧ್ಯಕ್ಷರಾಗಿ ಶುಕ್ರವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಹಂಗಾಮಿ ಸಭಾಧ್ಯಕ್ಷ ಟಿ.ಬಿ.ಜಯಚಂದ್ರ ಅವರು ಬೆಳಗ್ಗೆ ಕಲಾಪ ಆರಂಭಿಸಿದರು. ಈ ವೇಳೆ ಡಿ.ಕೆ.ಶಿವಕುಮಾರ್‌ ಅವರು ಸಚಿವ ಸಂಪುಟ ಸಹೋದ್ಯೋಗಿಗಳನ್ನು ಸದನಕ್ಕೆ ಪರಿಚಯಿಸಿದರು. ಇದಾದ ಬಳಿಕ ಧ್ವನಿ ಮತದ ಮೂಲಕ ಜಿ.ಎಸ್‌.ಪಾಟೀಲ್‌ ರನ್ನು ಸಭಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಚುನಾವಣೆ ಬಹಿಷ್ಕರಿಸಿ ಹೊರಗೆ ಉಳಿದಿದ್ದ ಬಿಜೆಪಿ ಶಾಸಕರು ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಸದನಕ್ಕೆ ಆಗಮಿಸಿದರು.ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು ಅವರು ನೂತನ ಸಭಾಧ್ಯಕ್ಷ ಜಿ.ಎಸ್‌.ಪಾಟೀಲ್‌ ಅವರನ್ನು ಸಭಾಧ್ಯಕ್ಷರ ಪೀಠದ ಬಳಿಗೆ ಕರೆತಂದು ಕೂರಿಸಿದರು. ಹಂಗಾಮಿ ಸಭಾಧ್ಯಕ್ಷ ಜಯಚಂದ್ರ ಅವರು ನೂತನ ಸಭಾಧ್ಯಕ್ಷ ಜಿ.ಎಸ್‌.ಪಾಟೀಲ್‌ ಅವರಿಗೆ ಹಸ್ತಲಾಘವ ನೀಡಿ ಶುಭ ಹಾರೈಸಿ ಪೀಠದಿಂದ ನಿರ್ಗಮಿಸಿದರು.ಬಳಿಕ ನೂತನ ಸಭಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಶಿವಕುಮಾರ್‌, ನೀವು ಬಹಳ ವರ್ಷಗಳಿಂದ ನಮ್ಮ ಜೊತೆ ರಾಜಕಾರಣದಲ್ಲಿ ಇದ್ದೀರಿ. ನಿಮ್ಮದು ಬಹುದೊಡ್ಡ ಕೃಷಿ ಕುಟುಂಬ. ನಿಮ್ಮ ಕುಟುಂಬವನ್ನು ನಾನು ಬಲ್ಲೆ. ನಿಮ್ಮ ಇಡೀ ಕುಟುಂಬ ಸಮಾಜಕ್ಕೆ ಸೇವೆ ಸಲ್ಲಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.ನಮ್ಮ ಪಕ್ಷ ನಿಮ್ಮನ್ನು ಸ್ಪೀಕರ್ ಸ್ಥಾನದಲ್ಲಿ ಕೂರಿಸಲಿಲ್ಲ, ಕೇವಲ ಅಭ್ಯರ್ಥಿಯನ್ನಾಗಿ ಘೋಷಿಸಿತು. ಆ ಸ್ಥಾನಕ್ಕೆ ಅಗೌರವ ನೀಡುವುದು ನಮ್ಮ ಚಿಂತನೆಯಲ್ಲ. ವಿರೋಧ ಪಕ್ಷದವರು ಅವರದೇ ಆದ ರೀತಿಯಲ್ಲಿ ತಗಾದೆ ಹುಡುಕಿದ್ದಾರೆ. ವಿರೋಧ ಪಕ್ಷದವರು ನಿಮ್ಮ ಆಯ್ಕೆ ವೇಳೆ ಬರದೇ ಇರುವುದು ಅವರ ರಾಜಕೀಯ ನಿಲುವು. ಆದರೂ ಈ ಮೂಲಕ ನಿಮ್ಮ ಆಯ್ಕೆಗೆ ಸಹಕರಿಸಿದ್ದಾರೆ. ಅವರ ಪರವಾಗಿಯೂ ನಿಮಗೆ ಅಭಿನಂದನೆ ಸಲ್ಲಿಸುವೆ. ನೀವು ಆ ಸ್ಥಾನದಲ್ಲಿ ಕೂತು ನ್ಯಾಯ ನೀಡಿ. ನೀವು ಕೇವಲ ನಮ್ಮನ್ನು ಮಾತ್ರವಲ್ಲ, ವಿರೋಧ ಪಕ್ಷದವರ ಧ್ವನಿಯನ್ನೂ ಆಲಿಸಿ. ಎತ್ತರದ ಸ್ಥಾನದಲ್ಲಿರುವ ನೀವು ಇನ್ನಷ್ಟು ಎತ್ತರಕ್ಕೆ ಬೆಳೆಯಿರಿ ಎಂದು ಶುಭ ಹಾರೈಸಿದರು.ಸದನದ ಪಾವಿತ್ರ್ಯತೆ ಕಾಪಾಡಿ:ವಿರೋಧ ಪಕ್ಷದ ನಾಯಕ ಅಶೋಕ್‌ ಮಾತನಾಡಿ, ಈ ಪೀಠದ ಗೌರವ ಕಾಪಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ. ಪೀಠ ಮುಖ್ಯ. ನೀವು ಚುನಾವಣೆಗಳಲ್ಲಿ ನೋವು-ನಲಿವು ಎರಡೂ ಉಂಡಿದ್ದೀರಿ. ವಿಧಾನ ಪರಿಷತ್ತಿನಲ್ಲಿ ಉತ್ತರ ಕರ್ನಾಟಕ ಭಾಗದವರ ಸಭಾಪತಿ ಸ್ಥಾನ ಹೋಯಿತು. ಅದೇ ಭಾಗದ ನೀವು ಇಲ್ಲಿ ಸಭಾಧ್ಯಕ್ಷರಾಗಿದ್ದೀರಿ. ಈ ಸದನದ ಪಾವಿತ್ರ್ಯತೆ ಕಾಪಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.ಸದನದ ಗೌರವ, ಮೌಲ್ಯಗಳನ್ನು ಎತ್ತಿ ಹಿಡಿಯಿರಿ. ನ್ಯಾಯದ ಪರ, ಪೀಠ ಪರ ನಿಲ್ಲಿ. ಪಕ್ಷದ ದನಿಯಾಗದೆ, ಕರ್ನಾಟಕ ದನಿಯಾಗಿ. ಎಲ್ಲರಿಗೂ ಸಮಾನ ಅವಕಾಶ ನೀಡಿ. ಈಗ ನೀವು ಪಕ್ಷದ ವ್ಯಕ್ತಿಯಲ್ಲ, ಇದು ಪಕ್ಷದ ಹುದ್ದೆಯಲ್ಲ. ಇದು ಸಾಂವಿಧಾನಿಕ ಹುದ್ದೆ. ಯಾವುದೇ ಒತ್ತಡಕ್ಕೆ ಒಳಗಾಗದೆ ಕೆಲಸ ಮಾಡಿ. ಸದನ ನಡೆಯುವಾಗ ಅಧಿಕಾರಿಗಳು ಕೂರುವಂತೆ ನೋಡಿಕೊಳ್ಳಿ ಎಂದು ಹೇಳಿದರು.ಉಪಮುಖ್ಯಮಂತ್ರಿ ಡಾ। ಜಿ.ಪರಮೇಶ್ವರ್‌ ಮಾತನಾಡಿ, ಸಭಾಧ್ಯಕ್ಷರ ಆಯ್ಕೆಯಲ್ಲಿ ವಿರೋಧ ಪಕ್ಷದ ನಾಯಕರು ಭಾಗವಹಿಸಬೇಕಿತ್ತು. ರಾಜಕೀಯ ಬೇರೆ. ಭಾಗವಹಿಸಿದ್ದರೆ ಗೌರವ ಮತ್ತಷ್ಟು ಹೆಚ್ಚಾಗುತ್ತಿತ್ತು. ಇದೊಂದು ಐತಿಹಾಸಿಕ ಸದನ. ಈ ಸದನದ ಗೌರವ ಕಾಪಾಡಬೇಕು. ಚರ್ಚೆಗೆ ಎಲ್ಲರಿಗೂ ಮುಕ್ತ ಅವಕಾಶ ಕೊಡಿ ಎಂದು ನೂತನ ಸಭಾಧ್ಯಕ್ಷರಿಗೆ ಶುಭ ಹಾರೈಸಿದರು.ವಿಪಕ್ಷಗಳಿಗೆ ಹೆಚ್ಚಿನ ಅವಕಾಶ ಕೊಡಿ:ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಸದನದಲ್ಲಿ ವಿರೋಧ ಪಕ್ಷಗಳಿಗೆ ಮುಕ್ತ ಅವಕಾಶ ನೀಡಬೇಕು. ಪಕ್ಷಪಾತ ಇಲ್ಲದೆ ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳಬೇಕು. ರೈತರು, ಮಹಿಳೆಯರು, ಕೂಲಿ ಕಾರ್ಮಿಕರು, ನೊಂದವರ ಪರ ಸದನ ನಡೆಸಿ. ಈ ಪೀಠ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ವಿರೋಧ ಪಕ್ಷಗಳಿಗೆ ಚರ್ಚೆಗೆ ಹೆಚ್ಚಿನ ಅವಕಾಶ ಕೊಡಿ ಎಂದು ನೂತನ ಸಭಾಧ್ಯಕ್ಷರಿಗೆ ಶುಭ ಕೋರಿದರು. ವಿರೋಧ ಪಕ್ಷಗಳ ಹಲವು ಶಾಸಕರು ಮಾತನಾಡಿದರು. ಕಾಂಗ್ರೆಸ್‌ ಪಕ್ಷದ ಹಲವು ಶಾಸಕರು ಹಾಗೂ ಸಚಿವರು ನೂತನ ಸಭಾಧ್ಯಕ್ಷರಿಗೆ ಶುಭ ಕೋರಿದರು.

ಕೃಷಿ ಕುಟುಂಬದ ಪಾಟೀಲ್ ಸ್ಪೀಕರ್‌:ವಿಧಾನಸಭೆ 18ನೇ ಸ್ಪೀಕರ್‌ ಆಗಿ ಆಯ್ಕೆಯಾಗಿರುವ ಜಿ.ಎಸ್‌.ಪಾಟೀಲ್‌ ಅವರು ಗದಗ ಜಿಲ್ಲೆ ರೋಣದ ದೊಡ್ಡ ಕೃಷಿ ಕುಟುಂಬದಲ್ಲಿ ಸಂಗನಗೌಡ ರುದ್ರಗೌಡ ಪಾಟೀಲ್ ಮತ್ತು ಬಸಮ್ಮ ಸಂಗನಗೌಡ ಪಾಟೀಲ್ ದಂಪತಿ ಪುತ್ರನಾಗಿ 1948ರ ಏ.10ರಂದು ಜನಿಸಿದ್ದಾರೆ. ಧಾರವಾಡದಲ್ಲಿ ಕಾಲೇಜು ಶಿಕ್ಷಣ ಪೂರೈಸಿದ್ದಾರೆ. ಉತ್ತಮ ಕ್ರೀಡಾಪಟುವಾಗಿರುವ ಜಿ.ಎಸ್‌.ಪಾಟೀಲ್‌ ಮೈಸೂರು ಪ್ರಾಂತ್ಯದ ರಾಜ್ಯ ಕ್ರಿಕೆಟ್‌ ತಂಡದಲ್ಲಿ ಆಡಿದ್ದಾರೆ. ಇವರು 8 ಬಾರಿ ರೋಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ 4 ಬಾರಿ ಜಯ ಗಳಿಸಿದ್ದಾರೆ. ಈ ಹಿಂದೆ ರಾಜ್ಯ ಉಗ್ರಾಣ ನಿಗಮ, ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ, ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ವಿಧಾನಸಭೆ ಸ್ಪೀಕರ್‌ ಆಗಿ ಆಯ್ಕೆಯಾಗಿದ್ದಾರೆ.