ಪಿಯುಸಿ ನಂತರ ಕೋರ್ಸ್ ಗಳ ಆಯ್ಕೆಯಲ್ಲಿ ಜಾಣ್ಮೆ ವಹಿಸಿ:ಹರೀಶ್‌ ಗೌಡ

| Published : Jul 03 2024, 12:21 AM IST

ಪಿಯುಸಿ ನಂತರ ಕೋರ್ಸ್ ಗಳ ಆಯ್ಕೆಯಲ್ಲಿ ಜಾಣ್ಮೆ ವಹಿಸಿ:ಹರೀಶ್‌ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಬಿ.ಎಸ್ಸಿ ಹಾಗೂ ಎಂ.ಎಸ್ಸಿ ಮಾಡಿದವರಿಗೆ ಸಂಶೋಧನೆಯಲ್ಲಿ ಹೆಚ್ಚು ಅವಕಾಶ ಇವೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿನಿಯರು ಪಿಯುಸಿ ನಂತರ ಕೋರ್ಸ್ ಗಳ ಆಯ್ಕೆಯಲ್ಲಿ ಜಾಣ್ಮೆ ವಹಿಸಬೇಕು. ನಿಮ್ಮ ಹಿರಿಯ ಸಹಪಾಠಿಗಳ ಮಾರ್ಗದರ್ಶನ ಪಡೆದುಕೊಳ್ಳಿ ಎಂದು ಶಾಸಕ ಕೆ. ಹರೀಶ್‌ ಗೌಡ ಸಲಹೆ ನೀಡಿದರು.

ನಗರದ ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ 2024– 25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಚಟುವಟಿಕೆಗಳಿಗೆ ಚಾಲನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಂಜಿನಿಯರಿಂಗ್, ಕಂಪ್ಯೂಟರ್ವಿಜ್ಞಾನ ಕೋರ್ಸ್‌ ಕಲಿಕೆಗೆ ಆದ್ಯತೆ ನೀಡದೇ ಉತ್ತಮ ಅವಕಾಶ ಇರುವ ಬೇರೆ ಬೇರೆ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದರು.

ಬಿ.ಎಸ್ಸಿ ಹಾಗೂ ಎಂ.ಎಸ್ಸಿ ಮಾಡಿದವರಿಗೆ ಸಂಶೋಧನೆಯಲ್ಲಿ ಹೆಚ್ಚು ಅವಕಾಶ ಇವೆ. ಅದರಲ್ಲೂ ರಸಾಯನ ವಿಜ್ಞಾನದಲ್ಲಿ ಅಧ್ಯಯನ ಮಾಡಿದವರು ವಿಜ್ಞಾನಿಗಳಾಗಬಹುದು ಎಂದು ಅವರು ಹೇಳಿದರು.

ವಿದ್ಯೆ- ಬುದ್ಧಿ ಎರಡೂ ಹೆಣ್ಣು ಮಕ್ಕಳಿಗೆ ಹೆಚ್ಚು. ಈ ಕಾಲೇಜಿಗೆ ಬರುವವರಲ್ಲಿ ಹೆಚ್ಚಿನವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳು. ಓದಿಗೆ ಆದ್ಯತೆ ನೀಡಿದರೆ ನಿಮ್ಮ ಭವಿಷ್ಯ ಉಜ್ವಲ ಆಗಿರಲಿದೆ.ಈ ಕಾಲೇಜಿನ ವಿದ್ಯಾರ್ಥಿನಿ ಶ್ರೇಯಾ ಸಾಧನೆ ಇತರರಿಗೆ ಮಾದರಿ ಆಗಲಿ. ಅವರಷ್ಟೇ ಏಕಾಗ್ರತೆಯಿಂದ ಅಧ್ಯಯನ ಮಾಡಿದಲ್ಲಿ ನಿಮಗೂ ಈ ಸಾಧನೆ ಸಾಧ್ಯ. ಏಕಾಗ್ರತೆಯಿಂದ ಶಿಕ್ಷಣ ಮುಗಿಸಿ ಉತ್ತಮ ಬದುಕು ಕಟ್ಟಿಕೊಳ್ಳಿ ಎಂದು ಅವರು ಸಲಹೆ ನೀಡಿದರು.

ಮಹಾರಾಣಿ ಪದವಿ ಕಾಲೇಜಿನಲ್ಲಿ ಪ್ರತಿ ವರ್ಷ 14 ಸಾವಿರ ವಿದ್ಯಾರ್ಥಿನಿಯರು ಪ್ರವೇಶ ಪಡೆಯುತ್ತಿದ್ದಾರೆ. ಅವರಲ್ಲಿ ಕೇವಲ 350 ವಿದ್ಯಾರ್ಥಿನಿಯರಿಗೆ ಮಾತ್ರ ಹಾಸ್ಟೆಲ್ ಸೌಲಭ್ಯ ಇತ್ತು. ಈಗ ಹೊಸ ಕಟ್ಟಡ ನಿರ್ಮಾಣಕ್ಕೆ ₹171 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡಿದ್ದು, ಇದರಿಂದ 3 ಸಾವಿರ ವಿದ್ಯಾರ್ಥಿನಿಯರಿಗೆ ಅನುಕೂಲ ಆಗಲಿದೆ. ಬಿಸಿಎಂ ವಿದ್ಯಾರ್ಥಿನಿಲಯಕ್ಕೂ ಪ್ರಯತ್ನ ನಡೆದಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಕಳೆದ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 594 ಅಂಕದೊಂದಿಗೆ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಶ್ರೇಯಾ ಗಣೇಶ್‌ ಅಯ್ಯರ್‌ ಅವರಿಗೆ ಲ್ಯಾಪ್ ಟಾಪ್‌ ನೀಡಿ ಸನ್ಮಾನಿಸಲಾಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮರಿಸ್ವಾಮಿ, ಕಾಲೇಜಿನ ಪ್ರಾಂಶುಪಾಲ ಪಿ. ಸೋಮಣ್ಣ, ಪ್ರೌಢಶಾಲೆ ವಿಭಾಗದ ಉಪ ಪ್ರಾಂಶುಪಾಲೆ ತಿರುಮಲಾಂಬ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೀವ್‌ ಮೊದಲಾದವರು ಇದ್ದರು.