ಸಾರಾಂಶ
ರಾಮಮೂರ್ತಿ ನವಲಿ
ಗಂಗಾವತಿ: ತೀವ್ರ ಕುತೂಹಲ ಕೆರಳಿಸಿರುವ ಇಲ್ಲಿಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಆ. 26ರಂದು ಜರುಗಲಿದ್ದು, ಇನ್ನು ಕೇವಲ ಒಂದೇ ದಿನ ಬಾಕಿ ಇದೆ. ಬಿಜೆಪಿ ಸದಸ್ಯರು ಹಾಗೂ ಬೆಂಬಲಿತ ಸದಸ್ಯರು ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ.ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಅ), ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲು ನಿಗದಿಯಾಗಿದೆ. ಪ್ರಸ್ತುತ ನಗರಸಭೆ ಒಟ್ಟು 35 ಸದಸ್ಯರ ಸಂಖ್ಯೆ ಇದ್ದು, ಅದರಲ್ಲಿ ಬಿಜೆಪಿ 14, ಜೆಡಿಎಸ್ 2, ಪಕ್ಷೇತರ 2, ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದ 10 ಸದಸ್ಯರು ಸೇರಿದಂತೆ 28 ಸದಸ್ಯರ ಬಲ ಹೊಂದಿದೆ.
ಕೇವಲ 7 ಸದಸ್ಯರನ್ನು ಉಳಿಸಿಕೊಂಡಿರುವ ಕಾಂಗ್ರೆಸ್ ಮೌನ ವಹಿಸಿದೆ.ಬೆಂಗಳೂರಿನಲ್ಲಿ ಠಿಕಾಣಿ: ಕಳೆದ ಒಂದು ವಾರದಿಂದ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ವಲಸೆ ಸದಸ್ಯರು ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಖಾಸಗಿ ವಸತಿಗೃಹದಲ್ಲಿ ತಂಗಿರುವ ಸದಸ್ಯರು, ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಮುಸುಕಿನ ಗುದ್ದಾಟ: ಹಿಂದುಳಿದ ವರ್ಗಗಳ (ಅ) ಮೀಸಲಾತಿ ಆಗಿದ್ದರಿಂದ ಮೂಲ ಬಿಜೆಪಿಯವರಾದ ನೀಲಕಂಠ ಕಟ್ಟಿಮನಿ, ಅಜಯ್ ಬಿಚ್ಚಾಲಿ ಮತ್ತು ಪರಶುರಾಮ ಮಡ್ಡೇರ್ ಆಕಾಂಕ್ಷಿಗಳಾಗಿದ್ದಾರೆ.ಕಾಂಗ್ರೆಸ್‌ನಿಂದ ವಲಸೆ ಬಂದ ಅಲ್ಪಸಂಖ್ಯಾತರಾದ ಮೌಲಾಸಾಬ, ಮುಸ್ತಾಕಲಿ, ಉಸ್ಮಾನ್ ಬಿಚ್ಚಗತ್ತಿ ಆಕಾಂಕ್ಷಿಗಳಾಗಿದ್ದು, ಅದರಿಂದ ಬಿಜೆಪಿ ಮೂಲ ಮತ್ತು ವಲಸೆ ಸದಸ್ಯರ ಮಧ್ಯೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ.
ಬೆಂಗಳೂರಿನಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗ ಸದಸ್ಯರು ತಂಗಿದ್ದಾರೆ. ಅ. 26ರಂದು ನಡೆಯುವ ಚುನಾವಣೆಗೆ ಎಲ್ಲರೂ ಆಗಮಿಸಲಿದ್ದಾರೆ. ಇನ್ನೂ ಒಂದು ದಿನ ಚುನಾವಣೆಗೆ ಬಾಕಿ ಇದ್ದು, ಯಾವ ತಿರುವು ಪಡೆಯುತ್ತಿದೆ ಎನ್ನುವುದನ್ನು ಕಾದು ನೋಡಬೇಕು.ನಾನು ಮೂಲ ಬಿಜೆಪಿ ಸದಸ್ಯನಾಗಿದ್ದು, ಪ್ರಥಮ ಬಾರಿಗೆ ನಗರಸಭೆಗೆ ನಮಗೆ ಅವಕಾಶ ಸಿಕ್ಕಿದೆ. ನನ್ನನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಶಾಸಕರಿಗೆ, ಮಾಜಿ ಶಾಸಕರಿಗೆ ಮತ್ತು ಬಿಜೆಪಿ ಮುಖಂಡರಿಗೆ ಮನವಿ ಮಾಡಿದ್ದೇನೆ ಎಂದು ಆಕಾಂಕ್ಷಿ, ಬಿಜೆಪಿ ಸದಸ್ಯ ಅಜಯ್ ಬಿಚ್ಚಾಲಿ ಹೇಳಿದರು.ಈ ಬಾರಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡುವಂತೆ ಶಾಸಕರಿಗೆ, ಮಾಜಿ ಶಾಸಕರು ಸೇರಿದಂತೆ ಬಿಜೆಪಿ ವರಿಷ್ಠರಿಗೆ ಕೋರಿದ್ದೇನೆ. ಕಾಂಗ್ರೆಸ್ ಬಿಟ್ಟು ಶಾಸಕರನ್ನು ಬೆಂಬಲಿಸಿ ಬಂದಿದ್ದು, ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯ ಮೌಲಾಸಾಬ ಹೇಳಿದರು.