ಅಬ್ಬೆತುಮಕೂರು ಶ್ರೀವಿಶ್ವಾರಾಧ್ಯರ ಜಾತ್ರೆಗೆ ಕ್ಷಣಗಣನೆ

| Published : Mar 03 2025, 01:46 AM IST

ಸಾರಾಂಶ

Countdown to Abbethamkur Srivishwaradhya Jatra

- ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀಕ್ಷೇತ್ರ ಅಬ್ಬೆತುಮಕೂರಿನ ಶ್ರೀವಿಶ್ವಾರಾಧ್ಯರು

- ಸಾಧು-ಸಂತರ ಸಮಾಗಮ : ಮಾನವ ಧರ್ಮ ಸಮಾವೇಶ

----

ಕನ್ನಡಪ್ರಭ ವಾರ್ತೆ ಯಾದಗಿರಿ

ಕರ್ನಾಟಕ ಮಾತ್ರವಲ್ಲ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ಲಕ್ಷಾಂತರ ಭಕ್ತರ ಆರಾಧ್ಯ ದೈವ ವಿಶ್ವಾರಾಧ್ಯರ ಜಾತ್ರೆಗಾಗಿ ಅಬ್ಬೆತುಮಕೂರು ಸಕಲ ವ್ಯವಸ್ಥೆಯೊಂದಿಗೆ ಸಜ್ಜುಗೊಂಡಿದೆಯೆಂದು ಮಠದ ವಕ್ತಾರ ಡಾ. ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.

ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ಸ್ವತಃ ಎಲ್ಲ ಸಿದ್ಧತೆಗಳ ಬಗ್ಗೆ ಸೂಕ್ತ ನಿಗಾವಹಿಸುತ್ತಿದ್ದು, ಅವರ ಮಾರ್ಗದರ್ಶನದಲ್ಲಿ ಅನೇಕ ಸೇವಾಧಾರಿಗಳು ನಿರಂತರ ಸಿದ್ಧತೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಾತ್ರೆ ಕ್ಷಣಗಣನೆಯಲ್ಲಿದ್ದು, ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದು, ಕುಶಲಕರ್ಮಿಗಳು, ತಂತ್ರಜ್ಞರು ಅಳಿದುಳಿದ ಕೆಲಸಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ಶ್ರೀಮಠದ ಆವರಣದಲ್ಲಿ ವಿವಿಧ ಬಗೆಯ ತಿಂಡಿ-ತಿನಿಸುಗಳ ಮತ್ತು ಫಳಾರ ಅಂಗಡಿ-ಮುಂಗಟ್ಟುಗಳನ್ನು ವ್ಯಾಪಾರಸ್ಥರು ಹಾಕಿಕೊಳ್ಳುತ್ತಿದ್ದಾರೆ. ಮಕ್ಕಳ ಆಟಿಕೆಗಳ ವ್ಯಾಪಾರಿಗಳು ಆಗಮಿಸಿ, ಬಿಡಾರ ಹೂಡುತ್ತಿದ್ದಾರೆ. ಹೋಟೆಲ್‌ಗಳು ಆರಂಭಗೊಂಡಿದ್ದು, ಬಿಸಿ ಬಿಸಿ ಬಜ್ಜಿ ಜನರನ್ನು ಆಕರ್ಷಿಸುತ್ತಿದೆ.

ವಿಶ್ವಾರಾಧ್ಯರ ಗರ್ಭಗುಡಿ, ದೇವಾಲಯ, ಶಿವನಮೂರ್ತಿ, ಮಠದ ಆವರಣದ ತುಂಬಾ ಬಣ್ಣಬಣ್ಣದ ವಿದ್ಯುದ್ದೀಪ ಅಳವಡಿಸಲಾಗಿದ್ದು. ಸಂಜೆಯಾಗುತ್ತಲೆ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ರಥ ಸಾಗಿ ಬರುವ ದಾರಿಯನ್ನು ಸಮತಟ್ಟುಗೊಳಿಸಲಾಗಿದೆ. ಮಾನವ ಧರ್ಮ ಸಮಾವೇಶ ನಡೆಯುವ ವೇದಿಕೆಯನ್ನು ಸುಸಜ್ಜಿತವಾಗಿ ಸಿದ್ಧಪಡಿಸಲಾಗಿದ್ದು, ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಎಲ್ಇಡಿ ಪರದೆ ಅಳವಡಿಸಲಾಗಿದೆ.

ಸಾಧು-ಸಂತರ ಸಮಾಗಮ ಜಾತ್ರೆಯ ವಿಶೇಷವಾಗಿದ್ದು, ಈಗಾಗಲೇ ನಾಡಿನ ಮೂಲೆ-ಮೂಲೆಗಳಿಂದ ಸಾಧು-ಸಂತರು ಆಗಮಿಸಿ, ಸಾಧು ಕಟ್ಟೆಯ ಹತ್ತಿರ ಬೀಡು ಬಿಟ್ಟಿದ್ದಾರೆ. ಜಾತ್ರೆಯ ಮುನ್ನಾದಿನ ಈ ಎಲ್ಲ ಸಾಧು-ಸಂತರಿಗೆ ಕಾವಿ ಕಂಪನಿಗಳನ್ನು ನೀಡಿ ಗೌರವಿಸಲಾಗುತ್ತದೆ.

ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಗ್ನಿ ಶಾಮಕ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆರೋಗ್ಯ ಇಲಾಖೆಯವರು ತಮ್ಮ ಆರೋಗ್ಯ ಘಟಕವನ್ನು ಸ್ಥಾಪಿಸಿದ್ದು, ಭಕ್ತಾದಿಗಳ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದಾರೆ.

ವಿಶ್ವಾರಾಧ್ಯ ಶಿಕ್ಷಣ ಸಂಸ್ಥೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ದಾಸೋಹ ಮಹಾಮನೆ. ದೇವಸ್ಥಾನದ ಆವರಣದ ಬಳಿ ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಮಂಗಳವಾರ ಸಂಜೆ 6:30ಕ್ಕೆ ಶ್ರೀವಿಶ್ವಾರಾಧ್ಯರ ರಥೋತ್ಸವ ಜರುಗಿದ ನಂತರ ರಾತ್ರಿ 8ಕ್ಕೆ ಮಾನವ ಧರ್ಮ ಸಮಾವೇಶಕ್ಕೆ ಪೂಜ್ಯರು, ಗಣ್ಯರು ಆಗಮಿಸಲಿದ್ದಾರೆ. ರಾಜ್ಯ ಮಟ್ಟದ ಅತ್ಯುತ್ತಮ ಜಿಲ್ಲಾ ಚುನಾವಣಾ ಅಧಿಕಾರಿ ಪ್ರಶಸ್ತಿ ಪಡೆದ ಯಾದಗಿರಿಯ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಅವರನ್ನು ಮಾನವ ಧರ್ಮ ಸಮಾವೇಶದಲ್ಲಿ ವಿಶೇಷವಾಗಿ ಸತ್ಕರಿಸಲಾಗುವುದು.

===ಬಾಕ್ಸ್‌===

ಸ್ವಾಮೀಜಿಗಳ ದಂಡು

ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು, ಡಾ. ಕರಿವೃಷಭ ರಾಜದೇಶಿಕೇಂದ್ರ ಸ್ವಾಮಿಗಳು ನೊಣವಿನಕೆರೆ, ಹಾರಕೂಡದ ಡಾ. ಚನ್ನವೀರ ಶೀವಾಚಾರ್ಯರು, ಡಾ. ಶಿವಾನಂದ ಮಹಾಸ್ವಾಮಿಗಳು ಸೊನ್ನ, ಶಹಾಪುರ ಕುಂಬಾರಗೇರಿ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯರು, ಸಿದ್ಧರಾಮಪುರದ ಗೋಲಪಲ್ಲಿಯ ವರದಾನೇಶ್ವರ ಸ್ವಾಮಿಗಳು, ಬಸವಕಲ್ಯಾಣದ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ನಿಲೋಗಲ್ ಅಭಿನವ ರೇಣುಕಾ ಶಾಂತಮಲ್ಲ ಶಿವಾಚಾರ್ಯರು, ನೇರಡಗಂನ ಪಂಚಮ ಸಿದ್ದಲಿಂಗ ಮಹಾಸ್ವಾಮಿ, ನಾಗಣಸೂರನ ಶ್ರೀಕಂಠ ಶಿವಾಚಾರ್ಯರು, ಶ್ರೀಕಾರ್ತಿಕೇಶ್ವರ ಶಿವಾಚಾರ್ಯರು ಮಳಖೇಡ, ಗುಂಡಗುರ್ತಿಯ ರುದ್ರಮುನಿ ಶಿವಾಚಾರ್ಯರು, ಮುನಿಂದ್ರ ಸ್ವಾಮೀಜಿ ಹಲಕರ್ಟಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೆಡಗಿಮದ್ರಾ, ಶಿವಮೂರ್ತಿ ಸ್ವಾಮೀಜಿ ದೇವಾಪೂರ, ಕೊಟ್ಟೂರೇಶ್ವರ ಶಿವಾಚಾರ್ಯರು ಎಲ್ಹೇರಿ, ತೋನಸನ ಹಳ್ಳಿಯ ಮಲ್ಲಣ್ಣಪ್ಪ ಶರಣರು ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.

===ಬಾಕ್ಸ್‌:2====

ಸಮಾವೇಶಕ್ಕೆ ಆಗಮಿಸುವ ಗಣ್ಯರು:

ಸಚಿವ ಶರಣಬಸಪ್ಪ ದರ್ಶನಾಪುರ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಸಚಿವ ಪ್ರಿಯಾಂಕ ಖರ್ಗೆ, ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯಸಿಂಗ್, ಸಂಸದ ಜಿ. ಕುಮಾರ ನಾಯಕ ರಾಧಾ ಕೃಷ್ಣನ್, ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು, ಶರಣಗೌಡ ಕಂದಕೂರು, ಕರೆಮ್ಮ, ಬಸನಗೌಡ ದದ್ದಲ್, ಬಸವರಾಜ ಮತ್ತಿಮೂಡ, ಅಲ್ಲಮಪ್ರಭು ಪಾಟೀಲ್, ಎಂ.ವೈ. ಪಾಟೀಲ್, ವಿರೋಧ ಪಕ್ಷದ ಸದಸ್ಯ ಬಿ.ಜಿ. ಪಾಟೀಲ್, ನಗರಸಭೆಯ ಅಧ್ಯಕ್ಷೆ ಲಲಿತಾ ಅನಪೂರ, ಮಾಜಿ ಶಾಸಕರಾದ ರಾಜೂಗೌಡ, ಸಿದ್ದರಾಮ ಮೇತ್ರೆ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಗುರು ಪಾಟೀಲ್ ಶಿರವಾಳ, ಲಿಂಗಾರೆಡ್ಡಿ ಭಾಷರೆಡ್ಡಿ, ರಾಚಣ್ಣಗೌಡ ಮುದ್ನಾಳ, ಮಹೇಶ ರೆಡ್ಡಿ ಮುದ್ನಾಳ, ಸಿದ್ದಣ್ಣ ಗೌಡ ಕಾಡಂನೋರ, ಚಂದ್ರಶೇಖರ ಸಾಹು ಆರಬೋಳ, ಹಣಮಂತ ಗೌಡ ಹೀರೆಗೌಡ್ರು, ಬಸ್ಸು ಗೌಡ ಬಿಳ್ಹಾರ ಪಾಲ್ಗೊಳ್ಳುವರು.

* ರಸಮಂಜರಿ ಕಾರ್ಯಕ್ರಮ: ಬೆಂಗಳೂರಿನ ಜೀ ಕನ್ನಡ ಸರಿಗಮ ಖ್ಯಾತಿಯ ಅಶ್ವಿನ ಶರ್ಮ ಹಾಗೂ ಸರಿಗಮ ಖ್ಯಾತಿಯ ಕಲಾವಿದರ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಅಬ್ಬೆತುಮಕೂರು ವಿಶ್ವಾರಾಧ್ಯರ ಜಾತ್ರೆಗಾಗಿ ಸಂಪೂರ್ಣ ಸಿದ್ಧಗೊಂಡಿದ್ದು, ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ.

===ಬಾಕ್ಸ್‌:3===ಮುದ್ನಾಳ ಮಾರ್ಗ ಬಳಸಿ

ಯಾದಗಿರಿ ನಗರದ ಭೀಮಾ ಮೇಲು ಸೇತುವೆ ದುರಸ್ತಿ ಕಾರ್ಯ ನಡೆದಿರುವುದುರಿಂದ ನಗರದಿಂದ ಶಹಾಪುರ ಮತ್ತು ಸುರಪುರದ ಕಡೆಗೆ ತೆರಳುವ ಎಲ್ಲಾ ವಾಹನಗಳನ್ನು ಡಾನ್ ಬಾಸ್ಕೋ ಶಾಲೆಯ ಮುಂಭಾಗದ ರಸ್ತೆ ಮುಖಾಂತರ ತೆರಳುತ್ತಿರುವ ಹಿನ್ನಲೆಯಲ್ಲಿ ಹೆಚ್ಚಿನ ವಾಹನ ದಟ್ಟನೆ ಉಂಟಾಗುತ್ತಿದೆ. ಕಲಬುರಗಿ, ಶಹಾಬಾದ, ಸೇಡಂ ಮುಂತಾದ ಕಡೆಗಳಿಂದ ಜಾತ್ರೆಗೆ ಆಗಮಿಸುವವರು. ಮುದ್ನಾಳ ಮಾರ್ಗದ ಕಡೆಗೆ ಬರಲು ತಿಳಿಸಿದೆ.

-

2ವೈಡಿಆರ್‌7: ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರಿನ ಆರಾಧ್ಯ ದೈವ ವಿಶ್ವರಾಧ್ಯರ ಜಾತ್ರೆ ಹಿನ್ನೆಲೆ ನಡೆಯುತ್ತಿರುವ ಸಕಲ ಸಿದ್ಧತೆಗಳನ್ನು ಪರಿಶೀಲಿಸುತ್ತಿರುವ ಪೀಠಾಧಿಪತಿ ಶ್ರೀ ಡಾ. ಗಂಗಾಧರ ಮಹಾಸ್ವಾಮಿಗಳು.

-

2ವೈಡಿಆರ್‌8 : ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರಿನ ಆರಾಧ್ಯ ದೈವ ವಿಶ್ವರಾಧ್ಯರ ಜಾತ್ರೆ ಹಿನ್ನೆಲೆ, ಆಗಮಿಸುವ ಲಕ್ಷಾಂತರ ಭಕ್ತರಿಗಾಗಿ ದಾಸೋಹದ ಸಿದ್ಧತೆ.