ಸಾರಾಂಶ
ಅನಂತಕುಮಾರ್
ಕನ್ನಡಪ್ರಭ ವಾರ್ತೆ ಭದ್ರಾವತಿಈ ಭಾಗದ ಜೀವನಾಡಿ ಭದ್ರಾ ಜಲಾಶಯ ಈ ಬಾರಿ ನಿರೀಕ್ಷೆಗೂ ಮೀರಿ ಬಹುಬೇಗ ಭರ್ತಿಯಾಗುತ್ತಿದ್ದು, ಭದ್ರೆ ಮೈತುಂಬಿ ಹರಿಯುವುದನ್ನು ಕಣ್ಮುಂಬಿಕೊಳ್ಳಲು ಇಲ್ಲಿನ ಜನರು ಎದುರು ನೋಡುತ್ತಿದ್ದಾರೆ.
ಜಲಾಶಯದ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಭಾನುವಾರ ಬೆಳಗ್ಗೆ ಸುಮಾರು ೬ ಗಂಟೆ ವೇಳೆಗೆ ಜಲಾಶಯದ ನೀರಿನ ಮಟ್ಟ ೧೮೦.೭ ಅಡಿ ತಲುಪಿದೆ. ಗರಿಷ್ಠ ಮಟ್ಟ ೧೮೬ ಅಡಿ ಭರ್ತಿಯಾಗಲು ಕೇವಲ ೫.೩ ಅಡಿ ನೀರು ಬಾಕಿ ಇದ್ದು, ಶನಿವಾರ ೬೧.೮ ಟಿಎಂಸಿ ನೀರಿನ ಪ್ರಮಾಣ ಹೊಂದಿದ್ದ ಜಲಾಶಯ ಭಾನುವಾರ ೬೪.೮ ಟಿಎಂಸಿ ತಲುಪಿದೆ. ಕೇವಲ ೨ ದಿನಗಳಲ್ಲಿ ೭.೩ ಟಿಎಂಸಿ ನೀರು ಜಲಾಶಯಕ್ಕೆ ಬಂದು ಸೇರಿದೆ. ಮುಂದಿನ ೨ ದಿನಗಳಲ್ಲಿ ಸಂಪೂರ್ಣವಾಗಿ ಭರ್ತಿಯಾಗುವ ನಿರೀಕ್ಷೆ ಇದೆ. ಸದ್ಯ ಒಳ ಹರಿವು ೩೫,೫೫೭ ಕ್ಯೂಸೆಕ್ ಇದ್ದು, ಇನ್ನೂ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವ ನಿರೀಕ್ಷೆ ಇದೆ. ಈ ಬಾರಿ ಜಲಾಶಯ ಭರ್ತಿಯಾಗುವುದು ಬಹುತೇಕ ಖಚಿತವಾಗಿದೆ.೧೯೬೨-೬೩ರಲ್ಲಿ ನಿರ್ಮಾಣಗೊಂಡ ಜಲಾಶಯ ೩೩ ಬಾರಿ ಸಂಪೂರ್ಣವಾಗಿ ಭರ್ತಿಯಾಗಿದ್ದು, ಇದೀಗ ೩೪ನೇ ಬಾರಿಗೆ ಭರ್ತಿಯಾಗುತ್ತಿರುವುದು ಈ ಭಾಗದ ಜನರಲ್ಲಿ ಸಂತಸ ಮೂಡಿಸಿದೆ. ತಗ್ಗು ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆ:
ಈಗಾಗಲೇ ನದಿ ತೀರದ ಪ್ರದೇಶಗಳ ನಿವಾಸಿಗಳಿಗೆ ಯಾವುದೇ ಸಮಯದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆ ಇದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಹಲವಾರು ವರ್ಷಗಳಿಂದ ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ತಗ್ಗು ಪ್ರದೇಶಗಳು ಜಲಾಶಯದಿಂದ ನೀರು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಜಲಾವೃತಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶಗಳ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಗೊಳಿಸಲಾಗುತ್ತಿದೆ. ಈಗಾಗಲೇ ಕೆಲವು ಪ್ರದೇಶಗಳ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳಲಾಗಿದೆ.ಈ ನಡುವೆ ನಗರದ ಹೃದಯ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ನಿಲ್ದಾಣ ಸಮೀಪದಲ್ಲಿರುವ ಹೊಸ ಸೇತುವೆ ಪ್ರತಿ ವರ್ಷ ಮುಳುಗಡೆಯಾಗುತ್ತಿದ್ದು, ಈ ಸೇತುವೆ ಎತ್ತರಗೊಳಿಸುವ ಸಂಬಂಧ ಈಗಾಗಲೇ ಪ್ರಸ್ತಾವ ಸಹ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಸರ್ಕಾರದಿಂದ ಅನುಮೋದನೆ ಸಹ ಆಗಿದ್ದು, ಆದರೆ ಇನ್ನೂ ಕಾಮಗಾರಿ ಕೈಗೊಂಡಿಲ್ಲ. ಅಲ್ಲದೆ ನಗರ ಪ್ರದೇಶದಿಂದ ದೊಣಬಘಟ್ಟ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕವಲಗುಂದಿಯಲ್ಲಿರುವ ಸೇತುವೆ ಸಹ ಮುಳುಗಡೆಯಾಗುತ್ತಿದೆ. ಇದರಿಂದಾಗಿ ಪ್ರತಿ ವರ್ಷ ನೀರು ಬಿಟ್ಟ ಸಂದರ್ಭದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕಾಗಿದೆ. ಭರ್ತಿಯಾದರೂ ನೀಗದ ನೀರಿನ ಕೊರತೆ:
ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದರೂ ಸಹ ಇಂದಿಗೂ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಜಲಾನಯನ ವ್ಯಾಪ್ತಿಯ ಕೊನೆಯ ಭಾಗದ ರೈತರು ಇಂದಿಗೂ ನೀರಿಗಾಗಿ ಪರಿತಪಿಸುವಂತಾಗಿದೆ. ಕೃಷಿ, ಕೈಗಾರಿಕೆ ಚಟುವಟಿಕೆಗಳಿಗೆ ಹಾಗೂ ವಿದ್ಯುತ್ ಉತ್ಪಾದನೆಗೆ ಮತ್ತು ಕುಡಿಯುವ ನೀರಿಗಾಗಿ ಜಲಾಶಯ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಕಳೆದ ಸುಮಾರು ೨ ದಶಕಗಳಿಂದ ಜಲಾಶಯದಲ್ಲಿ ಪೂರ್ಣ ನೀರು ಸಂಗ್ರಹವಾದರೂ ಸಹ ನೀರಿನ ಕೊರತೆ ಕಂಡು ಬರುತ್ತಿದೆ.ಜಲಾಶಯ ನಿರ್ಮಾಣಗೊಂಡಾಗಿನಿಂದ ಇದುವರೆಗೂ ಹೂಳು ತೆಗೆಯದಿರುವುದು, ನಾಲೆಗಳಲ್ಲಿ ನೀರಿನ ಸೋರಿಕೆ, ಕಳಪೆ ಕಾಮಗಾರಿ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂಬುದು ರೈತರ ಅಂಬೋಣ.ಸರ್ಕಾರ ಗಮನ ಹರಿಸಲಿ:
ಜಲಾಶಯದ ನೀರು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಗಮನ ಹರಿಸಬೇಕಾಗಿದೆ. ಮೊದಲು ಜಲಾಶಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ಜಲಾಶಯದಲ್ಲಿನ ನೀರಿನ ಸೋರಿಕೆ ತಡೆಯುವುದು, ಹೂಳು ತೆಗೆಯುವುದು ಸೇರಿದಂತೆ ಇನ್ನಿತರ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ. ಆಕರ್ಷಕ ಪ್ರಾಕೃತಿಕ ತಾಣ:ಭದ್ರಾ ಜಲಾಶಯ ಕೇವಲ ಜಲಾಶಯವಾಗಿ ಉಳಿದಿಲ್ಲ. ಇದೊಂದು ಪಾರಂಪರಿಕ ತಾಣ, ಪ್ರಾಕೃತಿಕ ತಾಣವಾಗಿದೆ. ಪ್ರತಿ ವರ್ಷ ಸಾವಿರಾರು ಮಂದಿ ಜಲಾಶಯದ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ. ಮೂಲ ಸೌಕರ್ಯಗಳ ಜೊತೆಗೆ ಕೆಆರ್‌ಎಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ಸರ್ಕಾರಕ್ಕೆ ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತಿದ್ದು, ಗಮನ ಹರಿಸಬೇಕಾಗಿದೆ.