ಮಾರಿಕಾಂಬಾ ದೇವಿ ಜಾತ್ರೆಯ ಸಂಭ್ರಮಕ್ಕೆ ಕ್ಷಣಗಣನೆ

| Published : Mar 18 2024, 01:46 AM IST

ಸಾರಾಂಶ

ಜಾತ್ರಾ ಪೇಟೆಯಲ್ಲಿ ವಹಿವಾಟು ನಡೆಸುವ ಅಂಗಡಿಗಳಿಗಾಗಿ ದೇವಾಲಯದಿಂದ ನೀಡುವ ಜಾತ್ರಾ ಗದ್ದುಗೆಯ ಪರಿಸರದ ಪ್ಲಾಟುಗಳ ಹರಾಜು ಮುಕ್ತಾಯವಾಗಿದೆ.

ಶಿರಸಿ: ಮಾ. ೧೯ರಿಂದ ೨೭ರ ವರೆಗೆ ನಡೆಯಲಿರುವ ೯ ದಿನಗಳ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆಯ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.ಮಾರಿಕಾಂಬಾ ದೇವಾಲಯದ ಎದುರು ಶ್ರೀದೇವಿಯ ರಥದ ನಿರ್ಮಾಣವು ಪ್ರಮುಖ ಹಂತ ತಲುಪಿದೆ. ರಥದ ಪ್ರಮುಖ ಭಾಗವಾದ ಕಲಶ ಕಂಬ ಜೋಡಣೆ ಕಾರ್ಯ ಭಾನುವಾರ ನಡೆಯಿತು. ರಥದ ತಳಹದಿಯಲ್ಲಿ ಗಾಲಿ ಜೋಡಣೆ, ಮರದ ತೊಲೆ, ಹಲಗೆಗಳ ಜೋಡಣೆಯ ಕೆಲಸ ನಡೆದಿದ್ದು, ತಲೆತಲಾಂತದಿಂದ ವಂಶಪಾರಂಪರ್ಯವಾಗಿ ಶ್ರೀದೇವಿಯ ರಥ ನಿರ್ಮಾಣ ಕಾರ್ಯ ನಿರ್ವಹಿಸುವ ಬಂಡಲದ ಮರಾಠಿ ಕುಟುಂಬದವರು ತಮ್ಮ ಸೇವಾ ಕೈಂಕರ್ಯದಲ್ಲಿ ತೊಡಗಿದ್ದಾರೆ. ರಥದ ತಳ ಭಾಗದ ಜೋಡಣೆ, ಶ್ರೀದೇವಿಯ ರಥಾರೋಹಣ ಹಾಗೂ ರಥೋತ್ಸವದಲ್ಲಿ ಶ್ರೀದೇವಿಯ ಪ್ರತಿಷ್ಠಾಪಿತಳಾಗಿ ಜಾತ್ರಾ ಗದ್ದುಗೆಗೆ ಸಾಗಲು ಅಗತ್ಯ ಅಟ್ಟಣಿಗೆ ನಿರ್ಮಾಣ ನಡೆಸಲಾಗುತ್ತಿದೆ.

ಮಾ. ೧೯ರಂದು ನಿಗದಿತ ಮುಹೂರ್ತದಲ್ಲಿ ಕಲಶ ಪ್ರತಿಷ್ಠಾಪನೆ, ನಂತರ ಬಣ್ಣಬಣ್ಣದ ಪತಾಕೆಗಳನ್ನು ಜೋಡಿಸಿ ಅಲಂಕರಣ ಕಾರ್ಯ ಪೂರ್ಣಗೊಳಿಸಲಾಗುತ್ತದೆ.

ಜಾತ್ರಾ ಪೇಟೆಯಲ್ಲಿ ವಹಿವಾಟು ನಡೆಸುವ ಅಂಗಡಿಗಳಿಗಾಗಿ ದೇವಾಲಯದಿಂದ ನೀಡುವ ಜಾತ್ರಾ ಗದ್ದುಗೆಯ ಪರಿಸರದ ಪ್ಲಾಟುಗಳ ಹರಾಜು ಮುಕ್ತಾಯವಾಗಿದೆ. ನಗರಸಭೆಯಿಂದ ನೀಡುವ ನಗರದ ಪ್ರಮುಖ ರಸ್ತೆಗಳಲ್ಲಿನ ಸ್ಥಳಗಳಲ್ಲಿನ ಹರಾಜು ಪ್ರಕ್ರಿಯೆಯು ಭಾನುವಾರ ಮುಕ್ತಾಯಗೊಂಡಿದೆ.

ಜಾತ್ರಾ ಪೇಟೆಯಲ್ಲಿ ಈಗಾಗಲೇ ವ್ಯವಹಾರ ನಡೆಸಲು ಖರೀದಿಸಿರುವ ಪ್ಲಾಟ್‌ಗಳಲ್ಲಿ ಜಾತ್ರಾ ವಹಿವಾಟಿನ ಅಂಗಡಿಗಳ ಮತ್ತು ಅಮ್ಯೂಸ್‌ಮೆಂಟ್‌ಗಳ ಜೋಡಣೆಯ ಕೆಲಸ ಭರದಿಂದ ಸಾಗಿದೆ. ದಿನದಿಂದ ದಿನಕ್ಕೆ ಜಾತ್ರಾ ಪೇಟೆಯಲ್ಲಿ ಕಾರ್ಯಗಳು ಹೆಚ್ಚೆಚ್ಚು ಚುರುಕಿನಿಂದ ನಡೆಯುತ್ತಿದ್ದು, ವಿವಿಧ ಅಂಗಡಿ, ಮಳಿಗೆಗಳಿಂದ ಕೂಡಿದ ಕಣ್ಸೆಳೆಯುವ ಪೇಟೆಯು ರೂಪುಗೊಳ್ಳುತ್ತಿದೆ.

ಜಾತ್ರಾ ಗದ್ದುಗೆಯ ಬಳಿಯೂ ಭಕ್ತರಿಗೆ ಶ್ರೀದೇವಿಯ ದರ್ಶನಕ್ಕೆ ಸಾಗುವ ಸಂಚಾರ ಮಾರ್ಗ ಸುಗಮಗೊಳಿಸಲು ಬಾಬದಾರ ಪ್ರಮುಖರು ಇನ್ನಷ್ಟು ಸರಳ ವ್ಯವಸ್ಥೆ ಕೈಗೊಳ್ಳುತ್ತಿದ್ದಾರೆ. ಈ ವರ್ಷ ಜಾತ್ರಾ ಗದ್ದುಗೆಯಲ್ಲಿ ಶ್ರೀದೇವಿಯ ದರ್ಶನಕ್ಕೆ ಪ್ರವೇಶಿಸುವ ಕೊನೆಯ ದ್ವಾರದಲ್ಲಿ ರ‍್ಯಾಂಪ್ ನಿರ್ಮಿಸಲಾಗುತ್ತಿದೆ.

ಅದೇ ರೀತಿ ಶ್ರೀದೇವಿಯ ದರ್ಶನ ಮಾಡಿ ಹೊರ ಸಾಗುವ ಬಾಗಿಲಿನಲ್ಲಿಯೂ ರ‍್ಯಾಂಪ್ ಮತ್ತು ಗ್ರಿಲ್ ಅಳವಡಿಸಲಾಗಿದೆ. ಯಾವುದೇ ಕಾರಣಕ್ಕೂ ಯಾರಿಗೂ ಯಾವುದೇ ತೊಂದರೆ ಆಗದಂತೆ ಕಾಳಜಿವಹಿಸಿ, ಹೊಸ ಹೊಸ ಮಾರ್ಪಾಟು ಮಾಡಲಾಗುತ್ತಿದೆ. ಇದರಿಂದ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಶ್ರೀದೇವಿಯ ದರ್ಶನಕ್ಕೆ ಅನುಕೂಲ ಆಗುವಂತೆ ವಿನ್ಯಾಸ ಮಾಡಲಾಗುತ್ತಿದೆ.

ಜಾತ್ರಾ ಮಂಟಪದ ಸಿದ್ಧತೆ ಮುಕ್ತಾಯದ ಹಂತ ತಲುಪಿದ್ದು, ರಾಜೇಶ ರಾವ್ ಮಾಲಕತ್ವದ ಉಡುಪಿಯ ಮಂಜುನಾಥ ಎಲೆಕ್ರ್ಟ್ರಿಕಲ್ಸ್ ಸರ್ವಿಸಸ್ ಬೆಳಕು ಮತ್ತು ಮುಖಮಂಟಪದ ನಿರ್ಮಾಣ, ಅಲಂಕರಣ ನಡೆಸುತ್ತಿದ್ದು, ನಿರ್ಮಾಣ ಕಾರ್ಯವು ಅಂತಿಮ ಹಂತ ತಲುಪಿದೆ.

ಇನ್ನೆರಡು ದಿನಗಳಲ್ಲಿ ಜಾತ್ರಾ ಚಪ್ಪರ, ಮಂಟಪದ ತಯಾರಿಯು ಪೂರ್ಣಗೊಂಡು ಜಾತ್ರೆಯ ವೈಭವಕ್ಕೆ ಸಜ್ಜಾಗಲಿದೆ.

ಮಾ.೧೯ರ ರಾತ್ರಿ ನಿಗದಿತ ಮುಹೂರ್ತದಲ್ಲಿ ಜಾತ್ರಾ ಕಲ್ಯಾಣ ಪ್ರತಿಷ್ಠೆಯ ಮಂಗಲೋತ್ಸವದಲ್ಲಿ ಶ್ರೀದೇವಿಯು ಪೂಜಿತಗೊಂಡು ಮಾ. ೨೦ರಂದು ಬೆಳಗ್ಗೆ ರಥಾರೋಹಣ ಮಾಡಿ, ಭಕ್ತಸಾಗರದ ಉಪಸ್ಥಿತಿಯಲ್ಲಿ ರಥೋತ್ಸವದ ಮೂಲಕ ಬಿಡ್ಕಿಬೈಲು ತಲುಪಿ, ಜಾತ್ರಾ ಗದ್ದುಗೆಯಲ್ಲಿ ವಿರಾಜಮಾನಳಾಗಿ, ಭಕ್ತರನ್ನು ಹರಸುವ ಘಳಿಗೆಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿರುವ ಭಕ್ತವೃಂದಕ್ಕೆ ಮಾ. ೨೧ರಿಂದ ಶ್ರೀದೇವಿಯ ದರ್ಶನ, ಹರಕೆ, ಇತ್ಯಾದಿ ಸೇವೆಗಳ ಸೌಲಭ್ಯ ಸುಲಭವಾಗಿಸಲು ವೇಗವಾಗಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ.