ಪ್ರತಿವರ್ಷದಂತೆ ಈ ವರ್ಷವೂ ಸ್ವರ್ಣವಲ್ಲೀ ಶ್ರೀಗಳು ನ. ೧ರಂದು ಈ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ನ. ೫ರಂದು ಸಮಾರೋಪದಲ್ಲಿ ರಾಮಚಂದ್ರಾಪುರ ಮಠದ ಶ್ರೀಗಳು ಸಾನ್ನಿಧ್ಯ ವಹಿಸುವರು.

ಶಂಕರ ಭಟ್ಟ ತಾರೀಮಕ್ಕಿ

ಯಲ್ಲಾಪುರ: ನಾಡಿನಲ್ಲಿಯೇ ಸುದೀರ್ಘ ೪೦ ವರ್ಷಗಳ ಕಾಲ ನಿರಂತರವಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತ ಬಂದಿರುವ, ನಮ್ಮ ಸಂಸ್ಕೃತಿಯ ಜೀವಾಳವಾದ ಕಲೆ, ಸಾಹಿತ್ಯ ಇವುಗಳ ಆರಾಧನೆ ನಡೆಸಿಕೊಂಡು ಬಂದ ಸಂಕಲ್ಪ ಸೇವಾ ಸಂಸ್ಥೆ ಬರುವ ನ. ೧ರಿಂದ ೫ರ ವರೆಗೆ ಪಟ್ಟಣದ ಗಾಂಧಿ ಕುಟೀರದಲ್ಲಿ "ಸಂಕಲ್ಪ ಉತ್ಸವ -೨೦೨೬ " ಆಯೋಜಿಸಿದೆ.

ಪ್ರತಿವರ್ಷದಂತೆ ಈ ವರ್ಷವೂ ಸ್ವರ್ಣವಲ್ಲೀ ಶ್ರೀಗಳು ನ. ೧ರಂದು ಈ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ನ. ೫ರಂದು ಸಮಾರೋಪದಲ್ಲಿ ರಾಮಚಂದ್ರಾಪುರ ಮಠದ ಶ್ರೀಗಳು ಸಾನ್ನಿಧ್ಯ ವಹಿಸುವರು. ಅಲ್ಲದೇ ಉಳಿದ ಮೂರು ದಿನ ಅನೇಕ ಯತಿಶ್ರೇಷ್ಠರು ಈ ವರ್ಷದ ಸಂಕಲ್ಪ ಉತ್ಸವದಲ್ಲಿ ಸಾನ್ನಿಧ್ಯ ವಹಿಸುವರು.ಸಂಕಲ್ಪ ಉತ್ಸವದಲ್ಲಿ ನಾಡಿನ ಯತಿವರೇಣ್ಯರು, ಮುಖ್ಯಮಂತ್ರಿಗಳು, ಮಂತ್ರಿಗಳು, ಸಿನಿಮಾ ನಟರು, ಶಾಸಕರು, ಸಾಹಿತ್ಯ ಕ್ಷೇತ್ರದ ಖ್ಯಾತನಾಮರು, ಮಾಧ್ಯಮ ಕ್ಷೇತ್ರದ ಹಿರಿಯ ಪತ್ರಕರ್ತರು, ಯಕ್ಷಗಾನ ಕಲಾವಿದರು ಹೀಗೆ ಎಲ್ಲ ಕ್ಷೇತ್ರದ ಸಾಧಕರನ್ನು ಕರೆಸಿ, ಸಂಕಲ್ಪ ಉತ್ಸವದ ಮೂಲಕ ಗುರುತಿಸಿ, ಗೌರವಿಸಿ, ಜಿಲ್ಲೆಗೆ ಒಂದು ಹೊಸತನವನ್ನು ಕಲ್ಪಿಸಿಕೊಡಲಾಗುತ್ತಿದೆ.

ನಾಲ್ಕು ದಶಕಗಳನ್ನು ಕಳೆದ ಈ ಸಂಸ್ಥೆಯ ಚಟುವಟಿಕೆಗಳು ಒಂದು ಐತಿಹಾಸಿಕವಾಗಿ ರೂಪುಗೊಳ್ಳುತ್ತಿದೆ. ಇಂತಹ ಸಂಸ್ಥೆಯ ಬೆಳವಣಿಗೆಯ ಜತೆ ಕಲೆ, ಕಲಾವಿದರನ್ನು ಬೆಳೆಸುವಲ್ಲಿ ಪ್ರಮೋದ ಹೆಗಡೆ ಅವರು ಮಹತ್ವದ ಕೊಡುಗೆಯನ್ನು ನೀಡುತ್ತಿದ್ದಾರೆ. ಈ ಪರಂಪರೆ ತನ್ನ ಕುಟುಂಬದಿಂದಲೇ ಮುಂದುವರಿಸುವ ಉತ್ಕಟ ಚಿಂತನೆಯನ್ನು ಹೊಂದಿರುವುದು ಮಹತ್ವದ್ದಾಗಿದೆ.

ಇಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಯಕ್ಷಗಾನ, ತಾಳಮದ್ದಳೆ, ಗಮಕ, ಉಪನ್ಯಾಸ, ಭಜನೆ, ಕೀರ್ತನೆ, ಭಗವದ್ಗೀತಾ ಪಠಣ ಈ ಎಲ್ಲ ಕಲೆಗಳ ಆರಾಧನಾ ಮಹೋತ್ಸವ ರಾಜ್ಯದಲ್ಲೇ ಸರ್ಕಾರದ ಬೆಂಬಲವಿಲ್ಲದೇ ನಡೆಸುತ್ತಿರುವುದು ಕೂಡ ಅತ್ಯಂತ ಗಮನೀಯ ಕಾರ್ಯವಾಗಿದೆ. ಯುವಜನಾಂಗ ಸಂಸ್ಕಾರದಿಂದ ವಿಮುಖವಾಗುತ್ತಿರುವ ಕಾಲಘಟ್ಟದಲ್ಲಿ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಮಹತ್ಕಾರ್ಯ ಮಾಡಲಾಗುತ್ತಿದೆ.

ಈ ಮೂಲಕ ರಾಜ್ಯವ್ಯಾಪಿ ತಲುಪಿಸುವ ಕಾರ್ಯ ಪ್ರಮೋದ ಹೆಗಡೆ ಮತ್ತು ಅವರ ತಂಡ ಅಭಿನಂದನೆಗೆ ಕಾರಣವಾಗಿದೆ. ಅವರು ಸಾಂಸ್ಕೃತಿಕ ರೂವಾರಿ ಎಂಬ ಖ್ಯಾತಿಯನ್ನು ಕೂಡ ಪಡೆದಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ನಿರೀಕ್ಷಿತ ಸಾಧನೆಯ ಫಲ ನೀಡದಿದ್ದರೂ ಸಂಘ- ಸಂಸ್ಥೆಗಳ, ಕಲಾಪೋಷಕರ ಸಹಕಾರದಲ್ಲಿ ಇಂತಹ ಉತ್ಸವ ನಡೆಸುತ್ತಿರುವುದು ಮಾದರಿಯಾಗಿದೆ.

ಎಲ್ಲಿಯೇ ಹೋದರೂ ಈ ವರ್ಷದ ಸಂಕಲ್ಪ ಉತ್ಸವ ಯಾವಾಗ? ಯಾರು ಬರುತ್ತಾರೆ? ಎಂಬ ಪ್ರಶ್ನೆ, ಚರ್ಚೆ; ಜನರಿಗೆ ತಿಳಿದುಕೊಳ್ಳುವ ತವಕ. ಇಷ್ಟೊಂದು ಸುದೀರ್ಘ ವರ್ಷಗಳ ಕಾಲ ಉತ್ಸವವನ್ನು ನಡೆಸಿಕೊಂಡು ಬಂದ ಪ್ರಮೋದ ಹೆಗಡೆ ಅವರು ತಮ್ಮ ವಯಸ್ಸು, ಅನಾರೋಗ್ಯದ ನಡುವೆ ಈ ಜವಾಬ್ದಾರಿಯನ್ನು ಮಕ್ಕಳಾದ ಪ್ರಸಾದ ಮತ್ತು ಪ್ರಶಾಂತ ಅವರ ಮುಡಿಗೇರಿಸಿದ್ದಾರೆ. ಅವರು ಮಾರ್ಗದರ್ಶನ ನೀಡುತ್ತಿದ್ದಾರೆ.

ಸಂಕಲ್ಪದ ತಂಡವನ್ನೇ ಕಟ್ಟಿ ಬೆಳೆಸಿದ್ದಾರೆ. ಸದಾ ಅಧ್ಯಯನಶೀಲರಾದ ಪ್ರಮೋದ ಹೆಗಡೆ ಅವರು ನಲವತ್ತು ಸಾವಿರ ಪುಸ್ತಕ ಸಂಗ್ರಹಿಸಿ ಮೌನ ಗ್ರಂಥಾಲಯ ಸ್ಥಾಪಿಸಿ, ಶಾಲೆಯೊಂದಕ್ಕೆ ಪುಸ್ತಕ ದಾನ ಮಾಡಿ, ಪುನಃ "ಮೌನ ಗ್ರಂಥಾಲಯ " ಮರುಸ್ಥಾಪಿಸಿ ಇಂದು ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಮೌಲಿಕ ಗ್ರಂಥಗಳನ್ನು ಸಂಗ್ರಹಿಸಿದ್ದಾರೆ.