ಶ್ರೀ ಕನಕಾಚಲಪತಿ ರಥೋತ್ಸವಕ್ಕೆ ಕ್ಷಣಗಣನೆ

| Published : Apr 01 2024, 12:45 AM IST

ಶ್ರೀ ಕನಕಾಚಲಪತಿ ರಥೋತ್ಸವಕ್ಕೆ ಕ್ಷಣಗಣನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಡವರ ತಿರುಪತಿ, ಐತಿಹಾಸಿಕ, ಪೌರಾಣಿಕ ಹಿನ್ನೆಲೆಯುಳ್ಳ ಹಾಗೂ ಚಕ್ರವರ್ತಿ ಅಶೋಕನ ಆಳ್ವಿಕೆಯಲ್ಲಿ ದಕ್ಷಿಣ ಭಾರತದ ರಾಜಧಾನಿಯಾಗಿದ್ದ ಕನಕಗಿರಿ (ಸುವರ್ಣಗಿರಿ)ಯ ಆರಾಧ್ಯ ದೈವನಾದ ಲಕ್ಷ್ಮೀ ನರಸಿಂಹಸ್ವಾಮಿ ದೇವರ ಜಾತ್ರೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.

ಇಂದು ಸಾಯಂಕಾಲ ರಥೋತ್ಸವ, ಒಂಭತ್ತು ದಿನಗಳಿಂದ ನಡೆಯುತ್ತಿರುವ ಉತ್ಸವ

ಪಾದಯಾತ್ರೆ ಮೂಲಕ ಆಗಮಿಸಿದ ಭಕ್ತರು, ದಾಸೋಹ, ಸ್ನಾನಕ್ಕೆ ವ್ಯವಸ್ಥೆಎಂ. ಪ್ರಹ್ಲಾದ್

ಕನ್ನಡಪ್ರಭ ವಾರ್ತೆ ಕನಕಗಿರಿ

ಬಡವರ ತಿರುಪತಿ, ಐತಿಹಾಸಿಕ, ಪೌರಾಣಿಕ ಹಿನ್ನೆಲೆಯುಳ್ಳ ಹಾಗೂ ಚಕ್ರವರ್ತಿ ಅಶೋಕನ ಆಳ್ವಿಕೆಯಲ್ಲಿ ದಕ್ಷಿಣ ಭಾರತದ ರಾಜಧಾನಿಯಾಗಿದ್ದ ಕನಕಗಿರಿ (ಸುವರ್ಣಗಿರಿ)ಯ ಆರಾಧ್ಯ ದೈವನಾದ ಲಕ್ಷ್ಮೀ ನರಸಿಂಹಸ್ವಾಮಿ ದೇವರ ಜಾತ್ರೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಏ. ೧ರಂದು ಸಾಯಂಕಾಲ ಮೂಲಾನಕ್ಷತ್ರದಲ್ಲಿ ರಥೋತ್ಸವ ಆರಂಭವಾಗಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಜಾತ್ರಾ ಪ್ರಯುಕ್ತ ಕಳೆದ ಒಂಬತ್ತು ದಿನಗಳಿಂದಲೂ ಒಂದೊಂದು ಉತ್ಸವಗಳು ನಡೆದಿವೆ. ದೇಗುಲದ ಗೋಪುರಗಳಿಗೆ, ಮಧ್ಯ ಮಂಟಪ, ದೇಗುಲದ ಸುತ್ತ ಮುತ್ತ ಒಳ ಹಾಗೂ ಒಳ ಆವರಣದ ಕಟ್ಟಡ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿವೆ. ಬಸ್ ನಿಲ್ದಾಣದಿಂದ ದೇಗುಲಕ್ಕೆ ಬರುವ ಮುಖ್ಯದ್ವಾರ ಹಾಗೂ ರಾಜಬೀದಿಯುದ್ದಕ್ಕೂ ಇರುವ ವಿವಿಧ ದೇಗುಲಗಳೂ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿವೆ.

ಸಚ್ಚಿದಾನಂದ ಅವಧೂತರ ಮಠದಲ್ಲಿ ಜಾತ್ರಾ ದಾಸೋಹ ಸಮಿತಿಯಿಂದ ಎರಡು ದಿನಗಳ ದಾಸೋಹಕ್ಕೆ ದಾಸಪ್ಪನವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಜಾತ್ರೆಗೆ ಬಂದ ಭಕ್ತರು ಹುಗ್ಗಿ, ಬದನೆಕಾಯಿ ಪಲ್ಯ ಹಾಗೂ ಅನ್ನ-ಸಾಂಬರ್ ಸೇವಿಸಿದರು. ದಾಸೋಹಕ್ಕೆ ಭಕ್ತರಿಂದ ರೊಟ್ಟಿ, ದವಸ-ಧಾನ್ಯ ಹರಿದು ಬಂದಿದೆ. ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹೀಗಾಗಿ ಪಪಂ ಹಾಗೂ ತಾಪಂ ವತಿಯಿಂದ ಭಕ್ತರ ಸ್ನಾನಕ್ಕೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ.

ಭಕ್ತರ ಪಾದಯಾತ್ರೆ:

ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಕುಡದರಹಾಳು, ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆದಾಪುರ, ಬಾಗಲಕೋಟೆ ಜಿಲ್ಲೆಯ ಹುನುಗುಂದ, ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಇಬ್ರಾಹಿಂಪುರ, ಕನಕಗಿರಿ ತಾಲೂಕು ವ್ಯಾಪ್ತಿಯ ಸುತ್ತ-ಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದ್ದಾರೆ. ಇನ್ನೂ ಕುಕನೂರು ತಾಲೂಕಿನ ಇಟಗಿ ಗ್ರಾಮದ ಭಕ್ತರು ಚಕ್ಕಡಿಯೊಂದಿಗೆ ಜಾತ್ರೆಗೆ ಬಂದಿರುವುದು ವಿಶೇಷ.

ಹರಕೆ ಹೊತ್ತ ಭಕ್ತರು ದೀಡ್‌ ನಮಸ್ಕಾರ, ಚಿನ್ನ, ಬೆಳ್ಳಿ, ಕಾಣಿಕೆ ಹಾಗೂ ಮುಡುಪನ್ನು ದೇವಸ್ಥಾನ ಹುಂಡಿಯಲ್ಲಿ ಹಾಕಿ ಭಕ್ತಿ ಸಮರ್ಪಿಸಿದರು. ಧ್ವಜ, ಹೂವಿನಹಾರ, ತಳಿರು ತೋರಣಗಳಿಂದ ರಥವು ಅಲಂಕೃತಗೊಂಡಿದೆ.

ಪೊಲೀಸ್ ಬಂದೋಬಸ್ತ್:

ಜಾತ್ರಾ ಪ್ರಯುಕ್ತ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದೆ. ಹೆಚ್ಚುವರಿ ಗೃಹ ರಕ್ಷಕ ಸಿಬ್ಬಂದಿಯನ್ನೂ ಸಹ ಕರ್ತವ್ಯಕ್ಕೆ ನಿಯೋಜಿಸಿಕೊಂಡಿದೆ. ನಗರದೆಲ್ಲೆಡೆ ಸಿಸಿ ಕ್ಯಾಮೆರಾಗಳಿದ್ದು, ಸರಗಳ್ಳರ ಮೇಲೂ ಇಲಾಖೆ ನಿಗಾವಹಿಸಿದೆ.

ಬಾಳೆಹಣ್ಣು ಬದಲು ಉತ್ತತ್ತಿ ಎಸೆಯಿರಿ:

ರಥಕ್ಕೆ ಬಾಳೆಹಣ್ಣು ಎಸೆಯುವುದರಿಂದ ನೊಣಗಳು ಹೆಚ್ಚಾಗಲಿವೆ. ದುರ್ವಾಸನೆ ಬೀರಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವುದರಿಂದ ಬಾಳೆಹಣ್ಣು ಬದಲಾಗಿ ಉತ್ತತ್ತಿ ಎಸೆಯುವುದು ಒಳ್ಳೆಯದು. ವಯೋವೃದ್ಧರು ಕಾಲು ಜಾರಿ ಬಿದ್ದ ಘಟನೆಗಳು ಹಿಂದೆ ನಡೆದಿವೆ. ಅದಕ್ಕಾಗಿ ಭಕ್ತರು ಬಾಳೆಹಣ್ಣನ್ನು ಬಿಟ್ಟು ಉತ್ತತ್ತಿ ಎಸೆಯುವಂತೆ ತಹಸೀಲ್ದಾರ್ ವಿಶ್ವನಾಥ ಮುರುಡಿ ಮನವಿ ಮಾಡಿದ್ದಾರೆ.

ಸರಾಗವಾಗಿ ಸಾಗುತ್ತಾ ರಥ?:

ನೂರಾರು ವರ್ಷಗಳ ಇತಿಹಾಸವಿರುವ ರಥಕ್ಕೆ ದತ್ತಿ ಇಲಾಖೆ ೨೦೧೯ರಲ್ಲಿ ಆಧುನಿಕ ಸ್ಪರ್ಶ ನೀಡಿದೆ. ಹೈಡ್ರೋಲಿಕ್ ಬ್ರೆಕ್, ಸ್ಟೇರಿಂಗ್ ಹಾಗೂ ಆರು ಕಟ್ಟಿಗೆ ಗಾಲಿಗಳನ್ನು (ಚಕ್ರ) ನಿರ್ಮಿಸಿದೆ. ೨೦೨೧ರಲ್ಲಿ ರಥ ಸಲಿಸಾಗಿ ಒಂದೇ ದಿನಕ್ಕೆ ತಲುಪಿತ್ತು. ೨೦೨೨ರಲ್ಲಿ ರಥಬೀದಿಯಲ್ಲಿ ಸಿಲುಕಿ ಎರಡನೇ ದಿನಕ್ಕೆ ತನ್ನ ಸ್ಥಾನ ತಲುಪಿತ್ತು. ೨೦೨೩ರಲ್ಲಿ ರಥ ಮುಂದೆ ಸಾಗದಿದ್ದಾಗ ಕತ್ತಲಲ್ಲಿ ಟ್ರ್ಯಾಕ್ಟರ್‌ಗಳಿಂದ ಎಳೆದು ತರಲಾಗಿತ್ತು. ಈ ವರ್ಷ ನಗರೋತ್ಥಾನ ಯೋಜನೆಯಡಿ ₹೨.೨ ಕೋಟಿ ವೆಚ್ಚದಲ್ಲಿ ರಸ್ತೆಗೆ ಡಾಂಬರೀಕರಣ ಮಾಡಲಾಗಿದ್ದು, ರಥ ಸರಾಗವಾಗಿ ಸಾಗಲಿ, ಈ ಬಾರಿಯೂ ಒಂದೇ ದಿನಕ್ಕೆ ತೇರು ಹೋಗಿ ಬರಲಿ ಎಂಬುದು ಭಕ್ತರ ಪ್ರಾರ್ಥನೆಯಾಗಿದೆ.