ಸಾರಾಂಶ
ಎಸ್.ಎಂ. ಸೈಯದ್
ಗಜೇಂದ್ರಗಡ: ಪಟ್ಟಣದ ಪುರಸಭೆ ಸದಸ್ಯರ ಅಧಿಕಾರ ಅವಧಿ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಕೊನೆಗೊಳ್ಳಲಿದ್ದು, ದಿನಗಣನೆ ಆರಂಭವಾಗಿದೆ. ಕೆಲವು ಸದಸ್ಯರು ಈಗಾಗಲೇ ಮುಂಬರುವ ಪುರಸಭೆ ಚುನಾವಣೆಯ ಲೆಕ್ಕಾಚಾರದಲ್ಲಿ ಮಗ್ನವಾಗಿದ್ದರೆ, ಇನ್ನೂ ಕೆಲವು ಸದಸ್ಯರು ತಮಗೆ ಇನ್ನೂ ೧೬ ತಿಂಗಳು ಅಧಿಕಾರ ಅವಧಿ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಎಲ್ಲರ ಚಿತ್ತ ಈಗ ಪುರಸಭೆಯತ್ತ ನೆಟ್ಟಿದೆ.ಗಜೇಂದ್ರಗಡ ಪುರಸಭೆಗೆ ೨೦೧೮ರ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಪ್ರಕಟವಾಗಿದ್ದ ಫಲಿತಾಂಶದಲ್ಲಿ ಬಿಜೆಪಿ ಬೆಂಬಲಿತ ೧೮ ಹಾಗೂ ಕಾಂಗ್ರೆಸ್ ಬೆಂಬಲಿತ ೫ ಸದಸ್ಯರು ಗೆಲುವು ಸಾಧಿಸಿದ್ದರು. ಆದರೆ ಫಲಿತಾಂಶ ಪ್ರಕಟವಾದ ಅಂದಾಜು ೨ ವರ್ಷದ ಬಳಿಕ ಸದಸ್ಯರು ಪುರಸಭೆ ಅಧಿಕಾರ ಹಿಡಿದಿದ್ದರು. ಇತ್ತ ೨ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ ವಿಳಂಬವಾಗಿದ್ದರಿಂದ ಅವಧಿ ವಿಸ್ತರಿಸಬೇಕು ಎಂದು ಕೆಲವು ಸದಸ್ಯರು ನ್ಯಾಯಾಲಯದ ಕದ ತಟ್ಟಿದ್ದು, ಅರ್ಜಿ ವಿಚಾರಣೆ ಹಂತದಲ್ಲಿದೆ.
ಪುರಸಭೆಯಲ್ಲಿ ಕಾಂಗ್ರೆಸ್ ಮೇಲುಗೈ: ರೋಣ ಮತಕ್ಷೇತ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಗಜೇಂದ್ರಗಡ ಪ್ರಮುಖ ಪಟ್ಟಣವಾಗಿದೆ. ಪಟ್ಟಣದಲ್ಲಿನ ರಾಜಕೀಯ ಲೆಕ್ಕಾಚಾರ ಭಾಗಶಃ ಸುತ್ತಲಿನ ಗ್ರಾಮಗಳ ಮೇಲೆ ಪ್ರಭಾವ ಬೀರುತ್ತಾ ಬಂದಿದೆ. ಹೀಗಾಗಿ ರೋಣ ವಿಧಾನಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಲು ಗಜೇಂದ್ರಗಡದ ಮತದಾರರ ಕೇಂದ್ರೀಕರಿಸಿ ನಡೆಯುವ ರಾಜಕೀಯ ತಂತ್ರಗಾರಿಕೆ ಮುಖ್ಯ ಎಂಬ ವಿಶ್ಲೇಷಣೆಗಳಿವೆ. ಪಟ್ಟಣಕ್ಕೆ ಎರಡೂ ಪಕ್ಷಗಳು ಪ್ರಾಮುಖ್ಯ ನೀಡಿದ್ದು, ಇಲ್ಲಿನ ತಂತ್ರಗಾರಿಕೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗುತ್ತಾರೆ ಎಂಬ ಚರ್ಚೆಗಳಿವೆ. ಪುರಸಭೆ ಎರಡನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಪುರಸಭೆಯ ೭ ಸದಸ್ಯರು ಕಾಂಗ್ರೆಸ್‌ಗೆ ಜೈ ಎಂದಿದ್ದಾರೆ. ಹೀಗಾಗಿ ಮುಂಬರುವ ಜಿಪಂ, ತಾಪಂ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯ ಪಾತ್ರ ವಹಿಸುವ ಪುರಸಭೆ ಚುನಾವಣೆಯು ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಸವಾಲಾಗಿ ತೆಗೆದುಕೊಳ್ಳಲಿವೆ.ಸವಾಲಾದ ಪುರಸಭೆ ಚುನಾವಣೆ: ಪಟ್ಟಣದ ಪುರಸಭೆಯಲ್ಲಿ ಸದಸ್ಯರ ಬಲ ಹೆಚ್ಚಿಸಿಕೊಂಡಿರುವ ಕಾಂಗ್ರೆಸ್ ಮುಂದಿನ ಪುರಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳ ಮೂಲಕ ಮತ್ತೆ ಅಧಿಕಾರ ಗದ್ದುಗೆ ಹಿಡಿಯಲು ಕಾಂಗ್ರೆಸ್ ಮುಖಂಡರು ಈಗಾಗಲೇ ರಣತಂತ್ರ ಹೆಣೆಯಲು ಆರಂಭಿಸಿದ್ದಾರೆ. ಆದರೆ ಕಾಂಗ್ರೆಸ್ ಸವಾಲು ಸ್ವೀಕರಿಸಿರುವ ಬಿಜೆಪಿ ಸಹ ಪುರಸಭೆ ಮತ್ತೊಮ್ಮೆ ಅಧಿಕಾರ ಗದ್ದುಗೆ ಹಿಡಿಯಲು ಪ್ರತಿತಂತ್ರ ಹೆಣೆಯುತ್ತಿದೆ. ಕಾಂಗ್ರೆಸ್‌ಗೆ ಜೈ ಎಂದವರಿಗೆ ಮುಂದಿನ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗುತ್ತಾ? ಪುರಸಭೆಯಲ್ಲಿ ೫ ಸದಸ್ಯರ ಗಡಿಯನ್ನು ಕಾಂಗ್ರೆಸ್ ದಾಟುತ್ತಾ? ಅಥವಾ ಬಿಜೆಪಿ ೧೮ ಸ್ಥಾನಗಳನ್ನು ಉಳಿಸಿಕೊಳ್ಳುತ್ತಾ? ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿವೆ.
ಪಟ್ಟಣಕ್ಕೆ ಆಗಮಿಸುವ ಜನತೆಗೆ ಸ್ವಾಗತ ಕಮಾನು ನಿರ್ಮಾಣದ ಬೇಡಿಕೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಅಮೃತ್-೨.೦ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ. ಪುರಸಭೆ ಆವರಣದಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಮೂರ್ತಿಗಳ ಪ್ರತಿಷ್ಠಾಪನೆ ಸೇರಿ ಅನೇಕ ಜನಸ್ನೇಹಿ ಕಾರ್ಯಕ್ರಮಗಳ ಬಗ್ಗೆ ಠರಾವು ಕೈಗೊಳ್ಳಲಾಗಿತ್ತು. ಈ ತನ್ಮಧ್ಯೆ ಕೆಲವು ಅಭಿವೃದ್ಧಿ ಕಾರ್ಯಗಳ ಜತೆಗೆ ನೂರಾರು ಮನೆರಹಿತರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಆಗಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿವೆ.ಬಲವಾದ ನಗರಸಭೆ ಕೂಗು: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಕೆಲವು ವಾರ್ಡ್‌ಗಳಲ್ಲಿ ೧೪೦೦ಕ್ಕೂ ಅಧಿಕ ಮತದಾರರು ಇದ್ದಾರೆ. ವಾರ್ಡ್ ದೊಡ್ಡದಿದೆ. ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂಬ ಸದಸ್ಯರ ಬಹು ವರ್ಷದ ಅಳಲಾಗಿದ್ದು, ಗಜೇಂದ್ರಗಡ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಿದರೆ ಸರ್ಕಾರದಿಂದ ಹೆಚ್ಚಿನ ಅನುದಾನ ಬರಲಿದೆ. ಪರಿಣಾಮ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲ ಆಗಲಿದೆ ಎಂಬ ಕೂಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪುರಸಭೆ ನಗರಸಭೆಯಾಗಿ ಮಾರ್ಪಡಿಸಲು ಅವಶ್ಯಕ ತಿದ್ದುಪಡಿಗಳನ್ನು ಆಡಳಿತ ತರಲು ಮುಂದಾಗುತ್ತಾ ಎಂಬ ಚರ್ಚೆಗಳಿವೆ.ಪಟ್ಟಣದ ಪುರಸಭೆ ೨ನೇ ಅವಧಿಗೆ ಮೀಸಲಾತಿ ವಿಳಂಬದ ೧೬ ತಿಂಗಳ ಅವಧಿ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಸದಸ್ಯರಿದ್ದಾರೆ. ಒಂದು ವೇಳೆ ಅವಧಿ ಮುಂದುವರಿದರೆ ಸುಭಾಸ ಮ್ಯಾಗೇರಿ ಪುರಸಭೆ ಅಧ್ಯಕ್ಷರಾಗಿ ಮುಂದುವರಿಯುತ್ತಾರಾ ಎಂಬ ಪ್ರಶ್ನೆ ಏಳಲಿದೆ. ಬೇರೆ ಸದಸ್ಯರಿಗೆ ಅಧ್ಯಕ್ಷ ಗಾದಿ ನೀಡಿ ಅಧಿಕಾರ ಹಂಚಿಕೆಗೆ ಕಾಂಗ್ರೆಸ್ ಮುಂದಾದರೆ ೧೬ ತಿಂಗಳ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಸುಭಾಸ ಮ್ಯಾಗೇರಿ ಒಪ್ಪುತ್ತಾರಾ? ಅಥವಾ ಉದ್ಭವಿಸಬಹುದಾದ ರಾಜಕೀಯ ಸನ್ನಿವೇಶದ ಲಾಭವನ್ನು ಬಿಜೆಪಿ ಪಡೆಯಲು ಮುಂದಾಗುತ್ತಾ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))