ಪಟ್ಟಣದ ಆರಾಧದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವವು ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಸವೇಶ್ವರ ಜಾತ್ರಾ ಉತ್ಸವ ಸಮಿತಿ, ಶ್ರೀಬಸವೇಶ್ವರ ಸೇವಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆ.31 ರಿಂದ ಸೆ.4 ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಜಾತ್ರೆಯನ್ನು ಬರದ ಮಧ್ಯೆಯೂ ಜನರು ಭಕ್ತಭಾವದೊಂದಿಗೆ ಸಂಭ್ರಮಿಸಲು ಎದುರು ನೋಡುತ್ತಿದ್ದಾರೆ. ಭಗವಂತ ಉತ್ತಮ ಮಳೆ-ಬೆಳೆ ದಯಪಾಲಿಸಲಿ ಎಂಬ ಆಶಾಭಾವನೆ ಭಕ್ತಗಣ ಹೊಂದಿದೆ.

ಬಸವರಾಜ ನಂದಿಹಾಳ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಆರಾಧದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವವು ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಸವೇಶ್ವರ ಜಾತ್ರಾ ಉತ್ಸವ ಸಮಿತಿ, ಶ್ರೀಬಸವೇಶ್ವರ ಸೇವಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆ.31 ರಿಂದ ಸೆ.4 ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಜಾತ್ರೆಯನ್ನು ಬರದ ಮಧ್ಯೆಯೂ ಜನರು ಭಕ್ತಭಾವದೊಂದಿಗೆ ಸಂಭ್ರಮಿಸಲು ಎದುರು ನೋಡುತ್ತಿದ್ದಾರೆ. ಭಗವಂತ ಉತ್ತಮ ಮಳೆ-ಬೆಳೆ ದಯಪಾಲಿಸಲಿ ಎಂಬ ಆಶಾಭಾವನೆ ಭಕ್ತಗಣ ಹೊಂದಿದೆ.ತಾಳಿಕೋಟಿಯ ಭಾರತ ಮಂಟಪದ ಕೆಲಸಗಾರರು ರಸ್ತೆಯ ಮಧ್ಯಭಾಗದಲ್ಲಿ, ಎರಡು ರಸ್ತೆ ದಂಡೆಯವರೆಗೂ ಆಕರ್ಷಕ ವಿದ್ಯುತ್ ದೀಪಾಲಂಕಾರ, ಭವ್ಯ ದೀಪಾಲಂಕಾರ, ಸ್ವಾಗತ ಕಮಾನು, ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆ ಸುತ್ತಲೂ ಆಕರ್ಷಕ ದೀಪಾಲಂಕಾರ ಕಾರ್ಯ ಮಾಡಿರುವುದು ಈ ಜಾತ್ರೆಯಲ್ಲಿ ವಿಶೇಷ ಗಮನ ಸೆಳೆಯುತ್ತಿದೆ. ಕೆಲವೆಡೆ ಜಾತ್ರೆಯ ಸ್ವಾಗತದ ಪ್ಲೆಕ್ಸ್ ರಾರಾಜಿಸುತ್ತಿವೆ.ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ದೇವಸ್ಥಾನದ ಒಳಗೆ ಚೆಂಡುಹೂವಿನಿಂದ, ಪಲ್ಲಕ್ಕಿ ಕಟ್ಟೆಯನ್ನು ಹೂವಿನಿಂದ ಆಕರ್ಷಕವಾಗಿ ಅಲಂಕಾರ ಮಾಡಿರುವುದು ಭಕ್ತಗಣವನ್ನು ಆಕರ್ಷಿಸುತ್ತಿದೆ. ಸೆಲ್ಫಿ ಫೋಟೋ ತೆಗೆದುಕೊಳ್ಳಲು ತುಂಬಾ ಆಕರ್ಷಣೀಯವಾಗಿದೆ.ಶ್ರಾವಣ ಮಾಸದ ಆರಂಭಗೊಂಡ ದಿನದಿಂದಲೂ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದಲ್ಲಿ ಪ್ರತಿದಿನ ಬಳಗ್ಗೆ ರುದ್ರಾಭಿಷೇಕ ಜರುಗುತ್ತಿದೆ. ಬಸವಬೆಳವಿಯ ಶರಣಬಸವ ಸ್ವಾಮೀಜಿಯವರಿಂದ ಸಂಜೆ ನಂದೀಶ್ವರ ರಂಗಮಂದಿರದಲ್ಲಿ ಪ್ರತಿನಿತ್ಯ ಸಂಜೆ 6.30 ಗಂಟೆಗೆ ಶರಣರ ಜೀವನ ಪಥ ಕುರಿತು ಪ್ರವಚನ ಜರುಗುತ್ತಿದೆ.ರಾಜ್ಯದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜನ್ಮಸ್ಥಳ ಬಸವನಬಾಗೇವಾಡಿ ಬಸವೇಶ್ವರ ಜಾತ್ರೆಗೆ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರು, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಲಿದ್ದಾರೆ.ಮುದ್ದೇಬಿಹಾಳ ರಸ್ತೆಯಲ್ಲಿರುವ ಕಾಳಹಸ್ತೇಶ್ವರಮಠದ ಜಮೀನಿನಲ್ಲಿ ವಿವಿಧ ತೂಗುವ ತೊಟ್ಟಿಲು ಜಾತ್ರೆಗೆ ಆಗಮಿಸುವ ಜನರನ್ನು ಮನರಂಜಿಸಲು ಸಿದ್ದಗೊಂಡು ನಿಂತಿವೆ. ಇದೇ ಮಾರ್ಗದಲ್ಲಿ ಒಂದು ಬದಿ ಬಳೆ, ಸ್ಟೇಷನರಿ, ಗೊಂಬೆ, ವಿವಿಧ ಮಳಿಗೆ ಹಾಕಲು ಅವಕಾಶ ಕಲ್ಪಿಸಿದ್ದರಿಂದ ವಿವಿಧೆಡೆಗಳಿಂದ ಆಗಮಿಸಿದ್ದ ವ್ಯಾಪಾರಿಗಳು ಮಳಿಗೆ ಹಾಕುತ್ತಿದ್ದಾರೆ.

ಐತಿಹಾಸಿಕ ಜಾತ್ರೆಗೆ ಭರದ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಸಂಪ್ರದಾಯದಂತೆ ಧಾರ್ಮಿಕ ಕಾರ್ಯಕ್ರಮ, ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಲಿವೆ. ಐದು ದಿನಗಳ ಕಾಲ ನಡೆಯಲಿರುವ ಜಾತ್ರೆಗೆ ಎಲ್ಲರ ಸಹಕಾರ ಮುಖ್ಯವಾಗಿದೆ.

- ಈರಣ್ಣ ಪಟ್ಟಣಶೆಟ್ಟಿ, ಶ್ರೀಕಾಂತ ಕೊಟ್ರಶೆಟ್ಟಿ ಜಾತ್ರೆಯ ಮುಖಂಡರು.ಬಸವೇಶ್ವರ ದೇವಸ್ಥಾನದಲ್ಲಿ ನಿರಂತರ ಭಕ್ತರಿಗೆ ದೇವಸ್ಥಾನ ಪಕ್ಕದಲ್ಲಿರುವ ಅಕ್ಕನಾಗಮ್ಮ ಸರ್ಕಾರಿ ಪಪೂ ಕಾಲೇಜಿನ ಆವರಣದಲ್ಲಿ ಜಾತ್ರೆಗೆ ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗುವುದು. ಜಾತ್ರೆಗೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಪ್ರಾಧಿಕಾರದಿಂದ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಸಂಪ್ರದಾಯದಂತೆ ಪಲ್ಲಕ್ಕಿ ಉತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾಧಿಕಾರದಿಂದ ಜರುಗಲಿವೆ. ಉಳಿದಂತೆ ಜಾತ್ರಾ ಉತ್ಸವ ಸಮಿತಿಯವರು ವಿವಿಧ ಕಾರ್ಯಕ್ರಮ ಆಯೋಜನೆ ಮಾಡುತ್ತಾರೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಎಲ್ಲರೂ ಭಕ್ತಿಭಾವದೊಂದಿಗೆ ಜಾತ್ರೆ ಯಶಸ್ವಿಗೊಳಿಸಬೇಕು.

-ಗುರುನಾಥ ದಡ್ಡೆ, ವಿಜಯಪುರ ಕಂದಾಯ ಉಪವಿಭಾಗಾಧಿಕಾರಿ, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರಿ ಆಯುಕ್ತರು.