ಸೂಳೆಕೆರೆ ಕೋಡಿ ಬೀಳಲು ಕ್ಷಣಗಣನೆ

| Published : Oct 29 2025, 01:00 AM IST

ಸಾರಾಂಶ

ಚನ್ನಗಿರಿ ತಾಲೂಕಿನ ಇತಿಹಾಸ ಪ್ರಸಿದ್ಧ, ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆಯಾದ ಸೂಳೆಕೆರೆ ಭರ್ತಿಯಾಗಿದ್ದು, ಕೋಡಿ ಬೀಳಲು ಕೇವಲ 3 ಇಂಚಿನಷ್ಟು ನೀರು ಸಂಗ್ರಹ ಬಾಕಿಯಿದೆ.

- ಭದ್ರಾನಾಲೆ, ಹಿರೇಹಳ್ಳ, ಹರಿದ್ರಾವತಿ ಹಳ್ಳಗಳಿಂದ ಕೆರೆಗೆ ನೀರು

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಇತಿಹಾಸ ಪ್ರಸಿದ್ಧ, ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆಯಾದ ಸೂಳೆಕೆರೆ ಭರ್ತಿಯಾಗಿದ್ದು, ಕೋಡಿ ಬೀಳಲು ಕೇವಲ 3 ಇಂಚಿನಷ್ಟು ನೀರು ಸಂಗ್ರಹ ಬಾಕಿಯಿದೆ.

27 ಅಡಿ ಆಳವಿರುವ ಈ ಕೆರೆ 43 ಕಿ.ಮೀ. ಸುತ್ತಳತೆಯಲ್ಲಿ ಹರಡಿಕೊಂಡಿದ್ದು, 2.61 ಟಿ.ಎಂ.ಸಿ. ನೀರು ಸಂಗ್ರಹವಿದೆ. ಈ ಸೂಳೆಕೆರೆ ತುಂಬಿ ಕೊಳ್ಳಲು ಕೆರೆಯ ಪಕ್ಕದಲ್ಲಿಯೇ ಹಾದುಹೋಗಿರುವ ಭದ್ರಾನಾಲೆ ಮತ್ತು ಹಿರೇಹಳ್ಳ, ಹರಿದ್ರಾವತಿ ಹಳ್ಳಗಳಿಂದ ನೀರು ಕೆರೆಗೆ ಹರಿದುಬರುತ್ತಿದೆ, ಸಧ್ಯಕ್ಕೆ ಭದ್ರಾ ನಾಲೆಯಿಂದ ಬರುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ.

ಸೂಳೆಕೆರೆಯು ಮಾನವಶಕ್ತಿ ಮೂಲಕವಾಗಿ 12ನೇ ಶತಮಾನದಲ್ಲಿ ಶಾಂತವ್ವ ಎಂಬ ಶರಣೆ ಕಟ್ಟಿಸಿದ ಕೆರೆ ಎಂದು ಜನಪದಿಯ ಕಥೆಗಳು ಹೇಳುತ್ತವೆ. ಈ ಕೆರೆಯಲ್ಲಿ ಸಿದ್ದನ ನಾಲೆ ಮತ್ತು ಬಸವನ ನಾಲೆ ಎಂಬ ಎರಡು ತೂಬುಗಳಿವೆ. ಈ ತೂಬುಗಳ ಮೂಲಕ ಸುಮಾರು 180 ಗ್ರಾಮಗಳ 2891 ಹೆಕ್ಟೇರ್‌ಗೂ ಅಧಿಕ ಭೂ ಪ್ರದೇಶಕ್ಕೆ ನೀರುಣಿಸುತ್ತಿದೆ. ರೈತರಿಗೆ ಈ ಕೆರೆ ವರದಾನವಾಗಿದ್ದರೆ ನೂರಾರು ಸಂಖ್ಯೆಯ ಮೀನುಗಾರ ಕುಟುಂಬಗಳಿಗೂ ಜೀವನೋಪಾಯಕ್ಕೆ ಮಾರ್ಗವಾಗಿದೆ.

ಈ ಕೆರೆಯು ಜನತೆಗೆ ಬಹುಪಯೋಗಿಯಾಗಿದೆ. ಕೆರೆಯಿಂಧ ಚನ್ನಗಿರಿ, ಮಲ್ಲಾಡಿಹಳ್ಳಿ, ಚಿತ್ರದುರ್ಗ, ಹೊಳಲ್ಕೆರೆ, ಸಿರಿಗೆರೆ, ಜಗಳೂರು, ಬಸವಾಪಟ್ಟಣ, ಸಂತೆಬೆನ್ನೂರು ಊರುಗಳ ಸರಣಿಗಳಲ್ಲಿ ಬರುವ ನೂರಾರು ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಪ್ರತಿದಿನವು 0.76 ಟಿ.ಎಂ.ಸಿ ನೀರು ಕೆರೆಯಿಂದ ಹೊರಹೋಗುತ್ತಿದೆ. ಪ್ರತಿದಿನವು ಕುಡಿಯುವ ನೀರಿಗಾಗಿ ಕೆರೆಯಿಂದ ಬಿಡುಗಡೆ ಮಾಡುತ್ತಿರುವ ನೀರನ್ನು ತುಂಬಿಸಿಕೊಳ್ಳಲು ಭದ್ರಾನಾಲೆಯಿಂದ ನೀರನ್ನು ಹರಿಸಿಕೊಂಡು ಕೆರೆ ನೀರಿನ ಸಮತೋಲನ ಕಾಪಾಡಿಕೊಳ್ಳಲಾಗುತ್ತಿದೆ.

- - -

-28ಕೆಸಿಎನ್‌ಜಿ2, 3.ಜೆಪಿಜಿ: ಸಂಪೂರ್ಣ ಭರ್ತಿಯಾಗಿರುವ ಸೂಳೆಕೆರೆ ವಿಹಂಗಮ ನೋಟ.

-28ಕೆಸಿಎನ್‌ಜಿ4: ಸೂಳೆಕೆರೆ ಕೋಡಿ ಬೀಳುವ ಜಾಗ ತುಂಬಿಕೊಂಡಿರುವುದು.