ವಿಶಾಲ ಮಂಟಪ ನಿರ್ಮಾಣ, ರಸ್ತೆಗೆ ಡಾಂಬರು, ಅಗತ್ಯ ಭದ್ರತಾ ವ್ಯವಸ್ಥೆ
ವಿಶೇಷ ವರದಿಕನ್ನಡಪ್ರಭ ವಾರ್ತೆ ಶಿರಸಿ
ನಗರದ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಫೆ.24ರಿಂದ ಆರಂಭಗೊಳ್ಳುವ ಜಾತ್ರೆಗಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.ಶಾಸಕ ಭೀಮಣ್ಣ ನಾಯ್ಕ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಮೊದಲ ಬಾರಿಗೆ ಜಾತ್ರೆಯ ಉಸ್ತುವಾರಿ ವಹಿಸಿಕೊಂಡಿದ್ದು, ಕಹಿ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಾರೆ.
ಆ ನಿಟ್ಟಿನಲ್ಲಿ ಜಾತ್ರೆಯ ತಯಾರಿಗಾಗಿ ಕಳೆದ ಒಂದು ತಿಂಗಳಿಂದ ಬಿಡುವಿಲ್ಲದೇ ಅವರು ತೊಡಗಿಸಿಕೊಂಡಿದ್ದಾರೆ. ಅಧಿಕಾರಿಗಳ ಜತೆಗೆ ನಗರದಲ್ಲಿ ಸಂಚರಿಸಿ, ಸರ್ಕಾರದಿಂದ ನೂರಾರು ಕೋಟಿ ರು. ಅನುದಾನ ತಂದು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದಾರೆ. ಜಿಲ್ಲಾಡಳಿತ, ಶ್ರೀ ಮಾರಿಕಾಂಬಾ ಟ್ರಸ್ಟ್‌ನ ಅಧ್ಯಕ್ಷರು, ಧರ್ಮದರ್ಶಿಗಳ ಸಹಕಾರ ಜತೆ ಸಭೆ, ಚರ್ಚೆ ನಡೆಸಿ ಅಗತ್ಯ ಸಿದ್ಧತೆಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ಅಗತ್ಯ ಭದ್ರತೆಗೂ ವ್ಯವಸ್ಥೆ ಮಾಡಲಾಗಿದೆ. ಈ ಸಲದ ಜಾತ್ರೆಯಲ್ಲಿ ಅತ್ಯಂತ ಉದ್ದ ಮತ್ತು ಅಗಲದಲ್ಲಿ ದೇವಿಯ ಮಂಟಪ ನಿರ್ಮಿಸಲಾಗಿದೆ. ಅಲ್ಲದೇ ರಥ ಎಳೆಯುವಾಗ ರಸ್ತೆಯಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನಗರದ ಎಲ್ಲ ಪ್ರಮುಖ ರಸ್ತೆಗಳಿಗೆ ಡಾಂಬರ್ ಹಾಕಲಾಗಿದೆ. ದೂರದ ಊರಿನಿಂದ ಬಂದ ಎಲ್ಲ ಭಕ್ತಾದಿಗಳಿಗೆ ಆಯಾ ಮಾರ್ಗದಲ್ಲಿ ನೀರು ಮತ್ತು ಪಾನಕದ ವ್ಯವಸ್ಥೆ ಕೈಗೊಳ್ಳಲಾಗಿದೆ. ಅದಕ್ಕಾಗಿ ಹಲವಾರು ಸ್ವಯಂ ಸೇವಕರು ಹಾಗೂ ಸೇವಾದಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ.ಶ್ರೀ ಮಾರಿಕಾಂಬಾ ಜಾತ್ರಾ ಪ್ರಯುಕ್ತ ಭಕ್ತರಿಗಾಗಿ ಆ್ಯಪ್ ಮಾಡಲಾಗಿದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಶೌಚಾಲಯದ ವ್ಯವಸ್ಥೆ, ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳು ಹಾಗೂ ಪೊಲೀಸ್ ಭದ್ರತೆ ಕುರಿತು ಇದರಲ್ಲಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಅದೇ ಯಾವುದೇ ರೀತಿಯ ಮೊಬೈಲ್ ಬಳಕೆ ಮಾಡದ ಭಕ್ತಾದಿಗಳಿಗೂ ಎಲ್ಲ ರೀತಿಯ ಸೌಲಭ್ಯಗಳನ್ನು ಮಾಡಲಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದ್ದಾರೆ.ಜಾತ್ರೆಗೆ ಆಗಮಿಸುವ ಭಕ್ತರ ಹಿತದೃಷ್ಟಿಯಿಂದ ದಿನನಿತ್ಯ ಸಂಚರಿಸುವ ಬಸ್ ಹೊರತುಪಡಿಸಿ 180 ಜಾತ್ರಾ ವಿಶೇಷ ಬಸ್ ಸಂಚರಿಸಲು ಕ್ರಮಕೈಗೊಳ್ಳಲಾಗಿದೆ. ದಿನ ನಿತ್ಯ ಸಂಚರಿಸುವ ಬಸ್‌ಗಳ ದರಗಳಿಗಿಂತ ಜಾತ್ರಾ ವಿಶೇಷ ಬಸ್ಸುಗಳಿಗೆ ಶೇ. 20 ಹೆಚ್ಚಿನ ದರ ನಿಗಡಿಪಡಿಸಲಾಗಿದೆ ಹಾಗೂ ಈ ಜಾತ್ರಾ ವಿಶೇಷ ಬಸ್‌ಗಳಲ್ಲಿ ಮಹಿಳೆಯರಿಗೆ ಎಂದಿನಂತೆ ಉಚಿತ ಪ್ರಯಾಣ ಇರಲಿದೆ ಎನ್ನುತ್ತಾರೆ ಶಿರಸಿ ಡಿಪೋ ಮ್ಯಾನೇಜರ್ ಸವಿತಾ ಪಾಟೀಲ್.
ಈ ಸಲದ ಜಾತ್ರೆಯಲ್ಲಿ ಮೊದಲ ಬಾರಿಗೆ ದೇವಸ್ಥಾನದ ಆಡಳಿತ ಮಂಡಳಿಯವರು ಎಲ್ಲ ಅಂದಾಜು 230ಕ್ಕೂ ಹೆಚ್ಚು ಸ್ಟಾಲ್‌ಗಳಿಗೆ ಸಂಪೂರ್ಣವಾಗಿ ಡಿಜಿಟಲ್ ಬಿಲ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಲೋಪದೋಷಗಳು ಆಗದಂತೆ ಲೆಕ್ಕಾಚಾರ ಇಡಲು ಕಂಪ್ಯೂಟರ್ ಆಧಾರಿತ ಬಿಲ್ ಸ್ಟಾಲ್ ಮಾಲೀಕರಿಗೆ ನೀಡಲಾಗುತ್ತಿದೆ ಎಂದು ಶಿರಸಿ ಶ್ರೀ ಮಾರಿಕಾಂಬಾ ಟ್ರಸ್ಟ್ ಅಧ್ಯಕ್ಷ ಆರ್.ಜಿ. ನಾಯ್ಕ ಹೇಳಿದ್ದಾರೆ.