ಗತ ವೈಭವ ಸಾರುವ ಹಂಪಿ ಉತ್ಸವ-2025 ಆಚರಣೆಯ ಅಂತಿಮ ಸಿದ್ಧತೆಗಳು ಪೂರ್ಣ : ಕ್ಷಣಗಣನೆ

| N/A | Published : Feb 27 2025, 12:36 AM IST / Updated: Feb 27 2025, 01:08 PM IST

ಸಾರಾಂಶ

ಹಂಪಿ ಉತ್ಸವ-2025 ಆಚರಣೆಯ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿದ್ದು, ಗಾಯತ್ರಿ ಪೀಠದ ಮೈದಾನದಲ್ಲಿ ನಿರ್ಮಿಸಲಾಗಿರುವ ಪ್ರಧಾನ ವೇದಿಕೆ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ವೈಭವವನ್ನು ಬಿಂಬಿಸುತ್ತಿದೆ.

 ಹೊಸಪೇಟೆ : ಹಂಪಿ ಉತ್ಸವ-2025 ಆಚರಣೆಯ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿದ್ದು, ಗಾಯತ್ರಿ ಪೀಠದ ಮೈದಾನದಲ್ಲಿ ನಿರ್ಮಿಸಲಾಗಿರುವ ಪ್ರಧಾನ ವೇದಿಕೆ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ವೈಭವವನ್ನು ಬಿಂಬಿಸುತ್ತಿದೆ.

ಹಂಪಿ ಪ್ರಮುಖ ಸ್ಮಾರಕಗಳು, ವಿಜಯನಗರ ವಾಸ್ತುಶಿಲ್ಪ, ಇಂಡೋ- ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ಪ್ರಧಾನ ವೇದಿಕೆ ನಿರ್ಮಿಸಲಾಗಿದೆ.

ಈ ಬಾರಿ ಪ್ರಧಾನ ವೇದಿಕೆಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಮುತ್ಸದ್ದಿ ರಾಜಕಾರಣಿ ಎಂ.ಪಿ. ಪ್ರಕಾಶ್ ಹೆಸರು ಇಡಲಾಗಿದೆ.

ಫೆ.28ರಂದು ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಮೂರು ದಿನಗಳವರೆಗೆ ನಡೆಯಲಿರುವ ಉತ್ಸವದಲ್ಲಿ ಧ್ವನಿ ಮತ್ತು ಬೆಳಕು ವೇದಿಕೆ ಸೇರಿ ಆರು ವೇದಿಕೆಗಳನ್ನು ನಿರ್ಮಾಣ ಮಾಡಲಿದ್ದು, ಗತ ವೈಭವ ಮರುಕಳಿಸಲಿದೆ.

ವೇದಿಕೆ ಸ್ವರೂಪ:

120/80 ಅಡಿ ವಿಸ್ತೀರ್ಣದಲ್ಲಿ ವೇದಿಕೆ ನಿರ್ಮಿಸಲಾಗಿದೆ. ವಿಶ್ವದ ಅತಿದೊಡ್ಡ ಬಯಲು ವಸ್ತು ಸಂಗ್ರಹಾಲಯ ಎಂದು ಕರೆಯಲ್ಪಡುವ ಹಂಪಿಯ ಪ್ರಮುಖ ಸ್ಮಾರಕಗಳ ಚಿತ್ರಣವನ್ನು ಒಂದು ವೇದಿಕೆಯಲ್ಲಿ ನೋಡುಗರು ಕಣ್ತುಂಬಿಕೊಳ್ಳಬಹುದು. ವೇದಿಕೆ ಮಧ್ಯ ಭಾಗದಲ್ಲಿ ಹಜಾರರಾಮ, ವಿಜಯ ವಿಠ್ಠಲ ದೇವಸ್ಥಾನ, ಅದರ ಮೇಲೆ ವಿಶ್ವವಿಖ್ಯಾತ ಕಮಲ ಮಹಲ್ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಇದರ ಒಳಗಡೆ ಸಪ್ತ ಸ್ವರ ಕಂಬಗಳು, ಹಂಪಿಯ ವಿಶಿಷ್ಟ ರಚನೆ ಎನಿಸಿರುವ ಕುದುರೆ ಸಿಂಹಾಕೃತಿಗಳು ಇವೆ. ಇದರೊಂದಿಗೆ ಇಸ್ಲಾಮಿಕ್ ಶೈಲಿಯ ಸುಂದರ ಕಿಟಕಿಗಳ ರಚನೆಯನ್ನು ಸಹ ಕಾಣಬಹುದು. ವೇದಿಕೆ ಬಲಭಾಗದಲ್ಲಿ ಹೇಮಕೂಟದಲ್ಲಿನ ಸೂರ್ಯಾಸ್ತ ವೀಕ್ಷಣ ಸ್ಥಳದಲ್ಲಿನ ಕಲ್ಲಿನ ಮಂಟಪದ ಪ್ರತಿಕೃತಿಯ ಮೇಲೆ ಅಂಜನಾದ್ರಿಯ ಹನುಮನ ಮೂರ್ತಿ ರಚನೆಯಿದೆ. ಎಡಭಾಗದಲ್ಲಿ ಸಾಸಿವೆಕಾಳು ಗಣಪತಿ ಮೂರ್ತಿ ರಚನೆಯಿದೆ. ವೇದಿಕೆಯ ಎರಡು ಭಾಗದಲ್ಲಿ ಕಲ್ಲಿನ ರಥದ ಪ್ರತಿಕೃತಿ, ವಿಜಯನಗರ ಸಾಮ್ರಾಜ್ಯದ ವರಾಹ ಲಾಂಛನ, ಹಂಪಿ ಉತ್ಸವ-2025 ಲಾಂಛನಗಳಿವೆ. ವೇದಿಕೆ ಮಧ್ಯ ಭಾಗದಲ್ಲಿ ಮುತ್ಸದ್ದಿ ರಾಜಕಾರಣಿ ಎಂ.ಪಿ.ಪ್ರಕಾಶ್ ಹೆಸರು ಕಂಗೊಳಿಸುತ್ತಿದೆ.

ಸಿಎಂ ವಿಧ್ಯುಕ್ತ ಚಾಲನೆ:

ಪ್ರಧಾನ ವೇದಿಕೆಯಲ್ಲಿ ಫೆ.28ರ ಸಂಜೆ 6 ಗಂಟೆಗೆ ಉದ್ಘಾಟನೆ ನೆರವೇರಲಿದೆ. ಮಾರ್ಚ್ 2ರ ವರೆಗೆ ನಡೆಯುವ ಹಂಪಿ ಉತ್ಸವದಲ್ಲಿ ನಾಡಿನ ಹೆಸರಾಂತ ಚಲನಚಿತ್ರ ನಟ, ನಟಿಯರು ಭಾಗವಹಿಸುತ್ತಿದ್ದಾರೆ. ಜೊತೆಗೆ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಹಿನ್ನಲೆ ಗಾಯಕರು ರಸಮಂಜರಿ ಮತ್ತು ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ವೇದಿಕೆ ಮುಂಭಾಗದಲ್ಲಿ ಸಾರ್ವಜನಿಕರಿಗಾಗಿ ಸುಮಾರು 70 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆ ಎಡಭಾಗದಲ್ಲಿ ಜರ್ಮನ್ ಟೆಂಟ್ ನಿಂದ ನಿರ್ಮಿತವಾದ ಅತಿಗಣ್ಯರ ವಿಶ್ರಾಂತಿ ಸ್ಥಳ ಹಾಗೂ ಕಲಾವಿದರ ಪ್ರಸಾದನ ಕೊಠಡಿಗಳನ್ನು ನಿರ್ಮಿಸಲಾಗಿದೆ. ವೇದಿಕೆ ಬಲಭಾಗದಲ್ಲಿ ಮಾಧ್ಯಮ ಕೇಂದ್ರ ಕಾರ್ಯನಿರ್ವಹಿಸಲಿದೆ.

ಹಂಪಿ ಉತ್ಸವದಲ್ಲಿ ಧ್ವನಿ ಬೆಳಕು ವೇದಿಕೆ ಸೇರಿ ಒಟ್ಟು ಆರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎದುರು ಬಸವಣ್ಣ ವೇದಿಕೆ ರಾಯಭಾರಿಯನ್ನಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೆ.ಎಂ.ವೀರಸಂಗಯ್ಯ, ಮಹಾನವಮಿ ದಿಬ್ಬ ವೇದಿಕೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೊಗಲುಗೊಂಬೆ ಕಲಾವಿದ ನಾರಾಯಣಪ್ಪ ಕಾರಿಗನೂರು ಅವರನ್ನು ರಾಯಭಾರಿಯಾಗಿ ನೇಮಿಸಲಾಗಿದೆ.

ವೇದಿಕೆಗಳ ಸಿದ್ಧತೆ ವೀಕ್ಷಣೆ:

ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ಶಾಸಕ ಎಚ್.ಆರ್. ಗವಿಯಪ್ಪ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಬಾಷಾ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ, ಮಾಜಿ ಶಾಸಕ ಸಿರಾಜ್ ಶೇಖ್, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಪಂ ಸಿಇಒ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಪ್ರಧಾನ ವೇದಿಕೆ ಸೇರಿದಂತೆ ಇತರೆ ವೇದಿಕೆಗಳ ಸಿದ್ಧತೆ ವೀಕ್ಷಿಸಿದರು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ಎಚ್.ಆರ್.ಗವಿಯಪ್ಪ ಅವರ ಮಾರ್ಗದರ್ಶನದಲ್ಲಿ ಹಂಪಿ ಉತ್ಸವದ ಎಲ್ಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಳ್ಳಾರಿ, ಕೊಪ್ಪಳ, ಹೊಸಪೇಟೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಜನರಿಗೆ ಹಂಪಿ ಉತ್ಸವ ಎಂದರೆ, ಮನೆಯ ಹಬ್ಬವಿದ್ದಂತೆ. ಸಾರ್ವಜನಿಕರು ಉತ್ಸವಕ್ಕೆ ಆಗಮಿಸಲು 300 ಬಸ್‌ಗಳನ್ನು ನಿಯೋಜಿಸಲಾಗಿತ್ತು. ಇನ್ನೂ 50 ಬಸ್‌ಗಳ ನಿಯೋಜನೆಗೆ ಬೇಡಿಕೆ ಬಂದಿದ್ದು, ಇದನ್ನು ಪರಿಗಣಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು. ಜನರು ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಯಾಗೊಳಿಸಬೇಕು ಎಂದು ಕೋರಿದರು.