ಹೂವಿನಹಡಗಲಿಯಲ್ಲಿ ಮತದಾನಕ್ಕೆ ಕ್ಷಣಗಣನೆ

| Published : May 07 2024, 01:04 AM IST

ಸಾರಾಂಶ

ಕ್ಷೇತ್ರದಲ್ಲಿ 1,96,853 ಮತದಾರರಿದ್ದು, ಈ ಬಾರಿ 5372 ಹೊಸ ಯುವ ಮತದಾರರಿದ್ದಾರೆ. 109 ಮತಗಟ್ಟೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಮತದಾನ ಮುಗಿಯುವವರೆಗೂ ನೇರ ಪ್ರಸಾರ ಇರಲಿದೆ.

ಹೂವಿನಹಡಗಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕಿನ 218 ಮತಗಟ್ಟೆಗಳಿಗೆ 1044 ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದು, ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ.ಈ ಕುರಿತು ಮತಗಟ್ಟೆಗೆ ತೆರಳುವ ಸಿಬ್ಬಂದಿಗೆ ವಿವಿ ಪ್ಯಾಟ್‌ ಸೇರಿದಂತೆ, ಮತಯಂತ್ರ ಇತರೆ ಸಕರಣೆಗಳನ್ನು ವಿತರಣೆ ಮಾಡಿ ಮಾತನಾಡಿದ ಸಹಾಯಕ ಚುನಾವಣಾಧಿಕಾರಿ ರಮೇಶಕುಮಾರ, ತಾಲೂಕಿನಲ್ಲಿ 218 ಮತಗಟ್ಟೆಗಳಿವೆ. ಇದರಲ್ಲಿ 38 ಸೂಕ್ಷ್ಮ ಹಾಗೂ 3 ಅತಿ ಸೂಕ್ಷ್ಮಸೇರಿದಂತೆ ಒಟ್ಟು 41 ಮತಗಟ್ಟೆಗಳೆಂದು ಗುರುತಿಸಲಾಗಿದೆ. 872 ಜನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 172 ಹೆಚ್ಚುವರಿ ಸಿಬ್ಬಂದಿ ಇದ್ದಾರೆ. 400 ಪೊಲೀಸ್ ಸಿಬ್ಬಂದಿ ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಕೂಡ ಇದ್ದಾರೆ.

ಕ್ಷೇತ್ರದಲ್ಲಿ 1,96,853 ಮತದಾರರಿದ್ದು, ಈ ಬಾರಿ 5372 ಹೊಸ ಯುವ ಮತದಾರರಿದ್ದಾರೆ. 109 ಮತಗಟ್ಟೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಮತದಾನ ಮುಗಿಯುವವರೆಗೂ ನೇರ ಪ್ರಸಾರ ಇರಲಿದೆ. 289 ಇವಿಎಂ ಮತ ಯಂತ್ರಗಳಲ್ಲಿ 71 ಹೆಚ್ಚುವರಿ ಯಂತ್ರಗಳಿವೆ, 57 ಇವಿಎಂ ಮತಯಂತ್ರಗಳನ್ನು 19 ಸೆಕ್ಟರ್‌ ಅಧಿಕಾರಿಗಳು ರವಾನೆ ಮಾಡುತ್ತಾರೆ. ಮತಯಂತ್ರಗಳ ದುರಸ್ಥಿಗಾಗಿ ಇಬ್ಬರು ಇಂಜಿನಿಯರ್‌ಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.

ತಾಲೂಕಿನಲ್ಲಿ 5 ಪಿಂಕ್‌ ಬೂತ್‌ಗಳು, 1 ಯುವ ಬೂತ್‌, 1 ಅಂಗವಿಕಲರ ಬೂತ್‌ ಹಾಗೂ 1 ಸಾಂಪ್ರದಾಯಿಕ ಬೂತ್‌ ಸೇರಿದಂತೆ ಒಟ್ಟು 8 ವಿಶೇಷ ಬೂತ್‌ಗಳಿವೆ. ಅತಿ ಹೆಚ್ಚು ಬಿಸಿಲು ಇರುವ ಹಿನ್ನೆಲೆಯಲ್ಲಿ ಮತಗಟ್ಟೆಯ ಬಳಿ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಕುಡಿವ ನೀರು ಮತ್ತು ಅಂಗವಿಕರನ್ನು ಕರೆತರಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.ಮತಗಟ್ಟೆಯ ಸುತ್ತಲ್ಲೂ 100 ಮೀಟರ್‌ ಅಂತರದಲ್ಲಿ ಮತಪ್ರಚಾರ ಮಾಡುವಂತಿಲ್ಲ, 200 ಮೀಟರ್‌ ಅಂತರದಲ್ಲಿ ಯಾವುದೇ ವಾಹನಗಳನ್ನು ತರುವಂತಿಲ್ಲ, ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರೆಗೂ ಮತದಾನ ನಡೆಯಲಿದೆ. ಮತದಾರರು ಚುನಾವಣೆ ಆಯೋಗ ನಿರ್ದೇಶನ ನೀಡಿರುವ ಹಾಗೂ ಆಧಾರ್‌ ಕಾರ್ಡ್, ಮತದಾರರ ಗುರುತಿನ ಚೀಟಿ, ಬಿಪಿಎಲ್‌ ಕಾರ್ಡ್‌, ವಾಹನ ಚಾಲಕರ ಪರವಾನಿಗಿ ಪತ್ರ, ನರೇಗಾ ಕಾರ್ಡ್‌ ಹೀಗೆ 11 ಬಗೆಯ ಕಾರ್ಡ್‌ಗಳಲ್ಲಿ ಯಾವುದಾದರೊಂದು ಗುರುತಿನ ಚೀಟಿ ತೋರಿಸಿ ಮತದಾನ ಮಾಡಲು ಅವಕಾಶವಿದೆ. ಮತಗಟ್ಟೆ ಒಳಗೆ ಯಾವುದೇ ಮೊಬೈಲ್‌ ತೆಗೆದುಕೊಂಡು ಹೋಗುವಂತಿಲ್ಲ, ಮತಗಟ್ಟೆಗೆ ಒಳಗೆ ಪೂಜೆ ಮಾಡುವಂತಿಲ್ಲ ಎಂದರು.