ನಾಳೆ ಲೋಕಸಭಾ ಚುನಾವಣೆಯ ಮತ ಎಣಿಕೆ

| Published : Jun 03 2024, 12:30 AM IST

ಸಾರಾಂಶ

ಲೋಕಸಭಾ ಚುನಾವಣೆ ನಿಮಿತ್ತ ಜೂ. 4ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

ಮತ ಎಣಿಕೆ ಕಾರ್ಯಕ್ಕಾಗಿ 450 ಸಿಬ್ಬಂದಿಗಳ ನೇಮಕ । 9 ಭದ್ರತಾ ಕೊಠಡಿಗಳ ನಿರ್ಮಾಣ ।ಜಿಲ್ಲೆಯಾದ್ಯಂತ ನಿಷೇಧಾಜ್ಞೆಕನ್ನಡಪ್ರಭ ವಾರ್ತೆ ಕೊಪ್ಪಳ

ಲೋಕಸಭಾ ಚುನಾವಣೆ ನಿಮಿತ್ತ ಜೂ. 4ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಹೇಳಿದರು.

ಮತ ಎಣಿಕೆ ಪ್ರಯುಕ್ತ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮತ ಎಣಿಕೆ ಕಾರ್ಯವನ್ನು ನಾಳೆ ಬೆಳಗ್ಗೆ 8 ಗಂಟೆಗೆ ಪ್ರಾರಂಭಿಸಲಾಗುವುದು. ನಗರದ ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಿಗದಿಪಡಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ 9 ಭದ್ರತಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಕಾರ್ಯಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಪ್ರತ್ಯೇಕ ಎಣಿಕೆ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದರು.

ಪ್ರತಿ ಸುತ್ತಿನಲ್ಲಿ 14 ಮತಗಟ್ಟೆಯ ಮತಯಂತ್ರಗಳ ಎಣಿಕೆ ಕಾರ್ಯವು ನಡೆಯಲಿದೆ. ಮತ ಎಣಿಕೆ ಕಾರ್ಯಕ್ಕಾಗಿ ಅಭ್ಯರ್ಥಿಗಳು ಪ್ರತಿ ಟೇಬಲ್ಲಿಗೆ ಒಬ್ಬರಂತೆ ಒಟ್ಟು 129 ಎಣಿಕೆ ಏಜೆಂಟರನ್ನು ನೇಮಿಸಲು ಅವಕಾಶವಿರುತ್ತದೆ. ಏಜೆಂಟರು ಕೇವಲ ಪೆನ್ನು ಮತ್ತು ಹಾಳೆಯನ್ನು ತೆಗೆದುಕೊಂಡು ಬರಲು ಅವಕಾಶವಿದೆ. ಬರೆದುಕೊಳ್ಳಲು ನೋಟ್ ಪ್ಯಾಡ್ ಮತ್ತು ಮತದಾನದ ದಿನದಂದು ಪ್ರಿಸೈಡಿಂಗ್ ಅಧಿಕಾರಿ ನೀಡಿರುವ 17-ಸಿ ಮತಪತ್ರಗಳ ಲೆಕ್ಕದ ಪ್ರತಿಯನ್ನು ತೆಗೆದುಕೊಂಡು ಬರಲು ಅವಕಾಶ ಕಲ್ಪಿಸಲಾಗಿದೆ. ಟೇಬಲ್‌ಗಳ ಸುತ್ತಲೂ ಹಾಕಿರುವ ವೈರ್ ಮೆಷ್‌ನ್ನುದಾಟಿ ಹೋಗಲು ಅವಕಾಶವಿಲ್ಲ ಎಂದರು.

ಜೂ.4ರಂದು ನಗರದ ಗವಿಮಠ ಮೂಲಕ ಸಂಚರಿಸುವ ಭಾರಿ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಿದ್ದು, ವಿವರ ಇಂತಿದೆ:ಗವಿಮಠ ರಸ್ತೆ ಮೂಲಕ ಹಿರೇಸಿಂದೋಗಿ ಕಡೆಗೆ ತೆರಳುವ ಹಾಗೂ ಹಿರೇಸಿಂದೋಗಿಯಿಂದ ಗವಿಮಠ ರಸ್ತೆ ಕಡೆಗೆ ಸಂಚರಿಸುವ, ಹಾಲವರ್ತಿಯಿಂದ ಗವಿಮಠ ಮೂಲಕ ಸಂಚರಿಸುವ ಹಾಗೂ ಬಸವೇಶ್ವರ ವೃತ್ತದಿಂದ ಹಾಲವರ್ತಿ ಕಡೆಗೆ ಬಾರಿ ವಾಹನಗಳು ಬೈಪಾಸ್ ರಸ್ತೆ ಮೂಲಕ ಸಂಚರಿಸಬೇಕು.

ಗವಿಮಠ ರಸ್ತೆ ಮೂಲಕ ಹಿರೇಸಿಂದೋಗಿ ಕಡೆಗೆ ತೆರಳುವ ಹಾಗೂ ಹಿರೇಸಿಂದೋಗಿಯಿಂದ ಗವಿಮಠ ರಸ್ತೆ ಕಡೆಗೆ ಹಾಗೂ ಹಾಲವರ್ತಿಯಿಂದ ಗವಿಮಠ ಮೂಲಕ ಸಂಚರಿಸುವ ಹಾಗೂ ಬಸವೇಶ್ವರ ವೃತ್ತದಿಂದ ಹಾಲವರ್ತಿ ಕಡೆಗೆ ತೆರಳುವ ಸಂಚರಿಸುವ ಲಘು ಹಾಗೂ ದ್ವಿ-ಚಕ್ರ ವಾಹನಗಳು ಗಡಿಯಾರ ಕಂಬ, ಅಶೋಕ ವೃತ್ತ, ಹಳೇ ಡಿಸಿ ವೃತ್ತ ಮೂಲಕ ಸಂಚರಿಸಬೇಕು. ಚುನಾವಣಾ ಆಯೋಗದ ನಿರ್ದೇಶಾನುಸಾರ ಮತ ಎಣಿಕೆ ಕೇಂದ್ರಕ್ಕೆ ಬರುವ ಎಲ್ಲ ರಾಜಕೀಯ ಪಕ್ಷದ ಅಭ್ಯರ್ಥಿಗಳು, ಅವರ ಏಜೆಂಟರ್‌ಗಳು ಮತ್ತು ಮತ ಎಣಿಕೆ ಏಜೆಂಟರ್‌ಗಳು ಮತ ಎಣಿಕಾ ಕೇಂದ್ರಕ್ಕೆ ನೀರಿನ ಬಾಟಲ್, ಲೈಟರ್, ಬೆಂಕಿ ಪೊಟ್ಟಣ, ಆಪಾಯಕಾರಿ ವಸ್ತುಗಳು, ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು (ಮೊಬೈಲ್), ಗುಟ್ಕಾ, ಬೀಡಿ-ಸಿಗರೇಟ್ ಇತರೆ ನಿಷೇಧಿತ ವಸ್ತುಗಳನ್ನು ತೆಗೆದುಕೊಂಡು ಬರುವುದನ್ನು ನಿಷೇಧಿಸಿದೆ.

ಬಂದೋಬಸ್ತ್ ಕರ್ತವ್ಯಕ್ಕೆ ಒಬ್ಬರು ಎಎಸ್ಪಿ, 2 ಡಿಎಸ್ಪಿ, 7 ಸಿಪಿಐ/ಪಿಐ, 21 ಪಿ.ಎಸ್.ಐ, 33 ಎ.ಎಸ್.ಐ., 100 ಹೆಡ್ ಕಾನ್‌ಸ್ಟೇಬಲ್, 125 ಪೊಲೀಸ್ ಕಾನ್‌ಸ್ಟೇಬಲ್, 24 ಮಹಿಳಾ ಹೆಡ್ ಕಾನ್‌ಸ್ಟೇಬಲ್, 2 ಡಿ.ಎ.ಆರ್., 2 ಕೆ.ಎಸ್.ಆರ್.ಪಿ., 50 ಗೃಹರಕ್ಷಕ ದಳ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಇತರೆ ಸ್ಥಳಗಳಲ್ಲಿ ಬಂದೋಬಸ್ತ್ ಕರ್ತವ್ಯಕ್ಕಾಗಿ 7 ಸಿಪಿಐ/ಪಿಐ, 18 ಪಿ.ಎಸ್.ಐ, 37 ಎ.ಎಸ್.ಐ., 125 ಹೆಡ್ ಕಾನ್‌ಸ್ಟೇಬಲ್, 200 ಪೊಲೀಸ್ ಕಾನ್‌ಸ್ಟೇಬಲ್, 30 ಮಹಿಳಾ ಹೆಡ್ ಕಾನ್‌ಸ್ಟೇಬಲ್, 6 ಡಿ.ಎ.ಆರ್., 2 ಕೆ.ಎಸ್.ಆರ್.ಪಿ., 150 ಗೃಹರಕ್ಷಕ ದಳ ಸಿಬ್ಬಂದಿಯನ್ನು ನೇಮಕಗೊಳಿಸಲಾಗಿದೆ ಎಂದು ಎಸ್ಪಿ ಯಶೋದಾ ವಂಟಗೋಡಿ ಹೇಳಿದರು.

ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.