ಲೋಕಸಭೆ ಚುನಾವಣೆ: 4ರಂದು ಮತ ಎಣಿಕೆ, ಬಂದೋಬಸ್ತ್‌

| Published : Jun 02 2024, 01:46 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಜೂ.4ರಂದು ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿವಿ ಮತ ಎಣಿಕಾ ಕೇಂದ್ರದಲ್ಲಿ ನಡೆಯಲಿದ್ದು, ಅಂದು ಮತ ಎಣಿಕಾ ಕೇಂದ್ರ ಹಾಗೂ ಜಿಲ್ಲಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ತಿಳಿಸಿದ್ದಾರೆ.

- ನಾಗರೀಕ ಪೊಲೀಸ್, ಡಿಎಆರ್, ಕೆಎಸ್‌ಆರ್‌ಪಿ, ಐಟಿಬಿಪಿ ಪಡೆ, ಹೋಂ ಗಾರ್ಡ್ಸ್‌ ನಿಯೋಜನೆ - ಸಂಪೂರ್ಣ ಕಣ್ಗಾವಲಿಡಲು ವೀಡಿಯೋಗ್ರಾಫರ್ಸ್‌, ಡ್ರೋಣ್ ಕ್ಯಾಮೆರಾ ಬಳಕೆ: ಎಸ್‌ಪಿ ಉಮಾ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಜೂ.4ರಂದು ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿವಿ ಮತ ಎಣಿಕಾ ಕೇಂದ್ರದಲ್ಲಿ ನಡೆಯಲಿದ್ದು, ಅಂದು ಮತ ಎಣಿಕಾ ಕೇಂದ್ರ ಹಾಗೂ ಜಿಲ್ಲಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ತಿಳಿಸಿದ್ದಾರೆ.

ಜಿಲ್ಲಾದ್ಯಂತ ಬಂದೋಬಸ್ತ್‌ಗಾಗಿ ಹೆಚ್ಚಿನ ನಾಗರೀಕ ಪೊಲೀಸ್ ಅಧಿಕಾರಿ, ಸಿಬ್ಂದಿ ಹಾಗೂ ಜಿಲ್ಲಾ ಪೊಲೀಸ್‌ ಮೀಸಲುಪಡೆ, ಕರ್ನಾಟಕ ರಾಜ್ಯ ಮೀಸಲು ಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ. ನಾಗರಿಕ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಡಿಎಆರ್‌ 8 ತುಕಡಿ, ಐಟಿಬಿಪಿ 1 ತುಕಡಿ, ಕೆಎಸ್‌ಆರ್‌ 4 ತುಕಡಿ, ಹೋಂ ಗಾರ್ಡ್ಸ್‌ ಸಿಬ್ಬಂದಿ ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಸಂಪೂರ್ಣ ಕಣ್ಗಾವಲಿಗಾಗಿ ವಿಡಿಯೋಗ್ರಾಫರ್ಸ್, ಡ್ರೋನ್ ಕ್ಯಾಮೇರಾಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಮತ ಎಣಿಕೆ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವ್ಯತಿರಿಕ್ತ ಪೋಸ್ಟ್‌ಗಳ ಮೇಲೆ ಪೊಲೀಸ್ ಠಾಣಾ ಮಟ್ಟದಲ್ಲಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಜಿಲ್ಲಾದ್ಯಂತ ಈಗಾಗಲೇ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಆಸಾಮಿಗಳು, ಗೂಂಡಾ ವ್ಯಕ್ತಿಗಳು, ಮತೀಯ ಗೂಂಡಾ ಆಸಾಮಿಗಳಿಗೆ ಚುನಾವಣಾ ಮತ ಎಣಿಕೆ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನಡವಳಿಕೆ ಹೊಂದಿರುವಂತೆ ಎಚ್ಚರಿಕೆ ನೀಡಲಾಗಿದೆ.

- - - ಬಾಕ್ಸ್‌ * ಮತ ಎಣಿಕೆ ದಿನ ಏನು ಮಾಡಬೇಕು, ಏನು ಮಾಡಬಾರದು? 1) ಜಿಲ್ಲೆಯಲ್ಲಿ ಮತ ಎಣಿಕೆ ದಿನ ಯಾವುದೇ ಅಹಿತಕರ ಘಟನೆ ಕಂಡು ಬಂದರೆ ತಕ್ಷಣವೇ ತುರ್ತು ಸಹಾಯವಾಣಿ 112 ನಂಬರ್‌ಗೆ ಕರೆ ಮಾಡಬೇಕು, ಸ್ಥಳೀಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಬೇಕು. ಮತ ಎಣಿಕೆ ದಿನದಂದು ಜಿಲ್ಲಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆ ಸಮಯದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಬಾರದು. ಈಗಾಗಲೇ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜೂ.1ರ ಸಂಜೆ 6ರಿಂದ ಜೂ.3ರ ಸಂಜೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಿದೆ.

02) ಚುನಾವಣೆ ಮತ ಎಣಿಕೆ ಹಿನ್ನೆಲೆ ಜೂ.4ರಂದು ಬೆಳಗ್ಗೆ 6ರಿಂದ ಜೂ.5ರಂದು ಬೆಳಗ್ಗೆ 7ರವರೆಗೆ 144 ಸಿಆರ್‌ಪಿಸಿ ಜಾರಿ ಆದೇಶದಡಿ ಜಿಲ್ಲಾದ್ಯಂತ 5ಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಒಟ್ಟುಗೂಡಿಸಲು, ಒಟ್ಟಿಗೆ ಚಲಿಸಲು ಅನುಮತಿ ಇಲ್ಲ. ಮೆರವಣಿಗೆ, ಅಕ್ರಮ ಗುಂಪು ಸೇರುವುದು, ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಬಾರದು. ಉಲ್ಲಂಘಿಸುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

03) ಮತ ಎಣಿಕಾ ಕೇಂದ್ರದಲ್ಲಿ ಭದ್ರತಾ ದೃಷ್ಟಿಯಿಂದ ಪೊಲೀಸ್ ಇಲಾಖೆಯಿಂದ ಪರಿಶೀಲಿಸುವಾಗ ಕರ್ತವ್ಯನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಯೊಂದಿಗೆ ಸೌಜನ್ಯಯುತವಾಗಿ ಸಹಕರಿಸಬೇಕು. ಮತ ಎಣಿಕಾ ಕೇಂದ್ರದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಾರದು. ಹಾಗೇನಾದರೂ ಶಾಂತಿ, ಕಾನೂನು, ಸುವ್ಯವಸ್ಥೆಗೆ ಧಕ್ಕೆ ತರುವಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ನಿಶ್ಚಿತ.

04) ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ. ಶಿವಗಂಗೋತ್ರಿಯ ದಾವಿವಿ ಮತ ಎಣಿಕಾ ಕೇಂದ್ರಕ್ಕೆಬರುವ ಸಾರ್ವಜನಿಕರು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸದೇ, ನಿಲುಗಡೆಗೆ ಕಾಯ್ದಿರಿಸಿರುವ ಸ್ಥಳಗಳಲ್ಲಿ ಮತ್ತು ಪೊಲೀಸರು ಸೂಚಿಸುವ ಸ್ಥಳಗಳಲ್ಲೇ ವಾಹನಗಳನ್ನು ನಿಲುಗಡೆ ಮಾಡಬೇಕು. ಸಾಮಾಜಿಕ ಜಾಲತಾಗಳಲ್ಲಿ ಯಾವುದೇ ಪ್ರಚೋದನಾತ್ಮಕ, ನಿಂದನಾತ್ಮಕ ಪೋಸ್ಟರ್ ಹಾಕುವುದಾಗಲೀ, ಶೇರ್ ಮಾಡುವುದಾಗಲೀ ಕಾನೂನು ಬಾಹಿರವಾಗಿರುತ್ತದೆ. ಇಂತಹವುಗಳು ಕಂಡು ಬಂದರೆ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

05) ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ಏಜೆಂಟರಿಗೆ ನಿಗಧಿಪಡಿಸಿದ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಕ್ಕೆ ಮಾತ್ರ ಪ್ರವೇಶಾವಕಾಶವಿರುತ್ತದೆ. ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ಏಜೆಂಟರಿಗೆ ನಿಗಧಿಪಡಿಸಿದ ಕ್ಷೇತ್ರಗಳನ್ನು ಬಿಟ್ಟು ಬೇರೆ ವಿಧಾನಸಬಾ ಕ್ಷೇತ್ರ ಮತ ಎಣಿಕೆ ಕೇಂದ್ರಗಳಿಗೆ ಹೋಗಲು ಅವಕಾಶವಿರುವುದಿಲ್ಲ.

- - - ಬಾಕ್ಸ್‌ * ಎಣಿಕೆ ಕಾರ್ಯ, ಸಂಚಾರ ಮಾರ್ಗ ಬದಲಾವಣೆ

- ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯ ತೋಳಹುಣಸೆ ಮಾರ್ಗ ಬದಲಾವಣೆ: ಎಸ್‌ಪಿ ಕನ್ನಡಪ್ರಭ ವಾರ್ತೆ, ದಾವಣಗೆರೆ

ಶಿವಗಂಗೋತ್ರಿಯ ದಾವಣಗೆರೆ ವಿ.ವಿ. ಮತ ಎಣಿಕಾ ಕೇಂದ್ರದಲ್ಲಿ ಜೂ.4ರಂದು ಲೋಕಸಭಾ ಕ್ಷೇತ್ರದ ಚುನಾವಣೆ ಮತ ಎಣಿಕಾ ಕಾರ್ಯದ ಹಿನ್ನೆಲೆಯಲ್ಲಿ ತೋಳಹುಣಸೆ- ದಾವಿವಿ ಹಾದು ಹೋಗುವ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಸಾಗುವ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಸಾರ್ವಜನಿಕರಿಗೆ ಅಂದು ದೈನಂದಿನ ಕೆಲಸ ಕಾರ್ಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಮತ ಎಮಿಕಾ ಕೇಂದ್ರದ ಮುಂದೆ ಹಾದು ಹೋಗುವ ಬೀರೂರು, ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಆ ದಿನ ಬೆಳಿಗ್ಗೆ 6ರಿಂದ ಮತ ಎಣಿಕೆ ಕಾರ್ಯ ಮುಗಿಯುವವರೆಗೂ ಸಾರ್ವಜನಿಕರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಎಸ್‌ಪಿ ತಿಳಿಸಿದ್ದಾರೆ.

ದಾವಿವಿ ಮುಂಭಾಗದಲಿ ಸಾಗಬೇಕಾದ ವಾಹನಗಳು ಅದರ ಬದಲಾಗಿ ದಾವಣಗೆರೆಯಿಂದ ಸಂತೇಬೆನ್ನೂರು, ಚನ್ನಗಿರಿ ಕಡೆಹೆ ಹೋಗುವ ವಾಹನಗಳು ಶಿರಮಗೊಂಡನಹಳ್ಳಿ, ಹದಡಿ ಮೂಲಕ ಚನ್ನಗಿರಿ ಕಡೆಗೆ ಹೋಗಬೇಕು. ಚನ್ನಗಿರಿ ಕಡೆಯಿಂದ ಸಂತೇಬೆನ್ನೂರು ಮಾರ್ಗವಾಗಿ ದಾವಣಗೆರೆ ಕಡೆಗೆ ಬರುವ ವಾಹನಗಳು ಕುರ್ಕಿ ಗ್ರಾಮದ ಬಳಿ ಎಡಕ್ಕೆ ತಿರುವು ಪಡೆದು ಹದಡಿ ಗ್ರಾಮದ ಕಡೆಯಿಂದ ದಾವಣಗೆರೆ ಕಡೆಗೆ ಬರಬೇಕು. ಚಿತ್ರದುರ್ಗ ಕಡೆಗೆ ಹೋಗುವವರು ಕುರ್ಕಿ ಗ್ರಾಮದ ಬಳಿ ಬಲಕ್ಕೆ ತಿರುವು ಪಡೆದು, ಆನಗೋಡು ಮುಖಾಂತರ ಚಿತ್ರದುರ್ಗ, ಬೆಂಗಳೂರು ಕಡೆ ಸಾಗಬೇಕು ಎಂದು ಅವರು ಸೂಚಿಸಿದ್ದಾರೆ.

ವಾಹನ ನಿಲುಗಡೆಗೆ ಸ್ಥಳಗಳ ನಿಗದಿ:

ಬೀರೂರು ಕಡೆಯಿಂದ ಬರುವ ವಾಹನಗಳು ದಾವಿವಿ ಬಲ ಬದಿಯ ಬೀರೂರು ರಸ್ತೆ ಕಡೆ ಖಾಲಿ ಇರುವ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಬೇಕು. ದಾವಣಗೆರೆಯಿಂದ ಬರುವ ವಾಹನಗಳು ದಾವಿವಿಯ ಎಡ ಬದಿಯ ವಸತಿಯುತ ಶಾಲೆಯ ಕಡೆ ಇರುವ ಖಾಲಿ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಬೇಕು. ಮಾಧ್ಯಮ ವಾಹನಗಳು, ಅಧಿಕಾರಿ, ಸಿಬ್ಬಂದಿಗಳು ಹಾಗೂ ಜನ ಪ್ರತಿನಿಧಿಗಳು, ಚುನಾವಣಾ ಅಭ್ಯರ್ಥಿಗಳು ಮತ್ತು ಇತರೆ ಸರ್ಕಾರಿ ವಾಹನಗಳು ವಿಶ್ವ ವಿದ್ಯಾನಿಯ ಒಳಗಡೆ ಪೊಲೀಸರು ಸೂಚಿಸುವ ಸ್ಥಳಗಳಲ್ಲಿ ವಾಹನ ನಿಲ್ಲಿಸಬೇಕು.

- - - (ಸಾಂದರ್ಭಿಕ ಚಿತ್ರ)