ಸಾರಾಂಶ
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಪಟ್ಟಣದಲ್ಲಿ ಆಟೋ, ಟೆಂಪೋ ಚಾಲಕರು, ಮೆಕ್ಯಾನಿಕ್ ಸಂಘ ಹಾಗೂ ಪರಿಸರ ವೇದಿಕೆ ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಗುಡಿಬಂಡೆ ಪೋಸ್ಟ್ ಆಫೀಸ್ ಆವರಣದಲ್ಲಿ ಸಸಿ ನೆಟ್ಟು ಬಳಿಕ ಅಂಬೇಡ್ಕರ್ ವೃತ್ತದಲ್ಲಿ ಕೇಕ್ ಕತ್ತರಿಸುವ ಮೂಲಕ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.ಅಂಚೆ ಕಚೇರಿಯ ಅಧಿಕಾರಿ ಆನಂದ್ ಕುಮಾರ್ ಮಾತನಾಡಿ, ಇಂದು ಕಾರ್ಮಿಕರಿಂದ ದೇಶ ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ದೇಶದ ಅಭಿವೃದ್ಧಿ ಹಾಗೂ ದೇಶವನ್ನು ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಅಪಾರವಾದುದಾಗಿದೆ. ಕಾರ್ಮಿಕ ದಿನಾಚರಣೆಯನ್ನು ಎಲ್ಲರೂ ಆಚರಿಸಬೇಕಾಗಿದೆ. ಪರಿಸರ ವೇದಿಕೆ ವತಿಯಿಂದ ಕಾರ್ಮಿಕರ ದಿನಾಚರಣೆಯಂದು ಕಾರ್ಮಿಕರೊಂದಿಗೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾದ ವಿಚಾರವಾಗಿದೆ. ಇದೇ ರೀತಿ ಪ್ರತಿಯೊಬ್ಬರೂ ವಿಶೇಷ ದಿನಗಳಂದು ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಮನುಕುಲ ಉಳಿಯಲು ಸಾಧ್ಯವಾಗುತ್ತದೆ ಎಂದರು.
ಬಳಿಕ ಪರಿಸರ ವೇದಿಕೆಯ ಜಿಲ್ಲಾಧ್ಯಕ್ಷ ಗುಂಪು ಮರದ ಆನಂದ್ ಮಾತನಾಡಿ, ಗುಡಿಬಂಡೆಯಲ್ಲಿ ಪ್ರತಿಯೊಂದು ಹಬ್ಬದಲ್ಲೂ ಗಿಡಗಳನ್ನು ನೆಟ್ಟು ಆಚರಿಸುವುದು ರೂಢಿಯಾಗಿದೆ. ಇಂದು ವಿಶ್ವ ಕಾರ್ಮಿಕ ದಿನದಂದು ಗಿಡಗಳನ್ನು ನೆಟ್ಟು ಪರಿಸರ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಹಾಗೂ ಎಲ್ಲಾ ಕಾರ್ಮಿಕರ, ರೈತರ ಜೀವನ ಉತ್ತಮವಾಗಿರಬೇಕಾದರೆ ಪ್ರತಿಯೊಬ್ಬರೂ ಗಿಡಮರಗಳನ್ನು ಬೆಳೆಸಬೇಕು ಎಂದು ತಿಳಿಸಿದರು.ಟಿ.ಎಚ್.ಒ ಡಾ.ನರಸಿಂಹಮೂರ್ತಿ, ಮೆಕ್ಯಾನಿಕ್ ಸಂಘದ ಅಪ್ಸರ್ ಪಾಷ ಕಾರ್ಮಿಕ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ತಾಲೂಕು ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಬಿ.ಮಂಜುನಾಥ್. ಅಂಚೆ ಸಹಾಯಕ ಪವನ್ ಕುಮಾರ್, ಆಟೋ ಹಾಗೂ ಟೆಂಪೋ ಚಾಲಕ ಶಿವಕುಮಾರ್, ಮೂರ್ತಿ, ನರಸಿಂಹಪ್ಪ, ಶ್ರೀನಿವಾಸ್, ಜಬಿವುಲ್ಲಾ, ದ್ವಿಚಕ್ರ ವಾಹನಗಳ ಸಂಘದ ಕೃಷ್ಣಮೂರ್ತಿ, ಬಾಷ, ಫೈರೋಜ್, ಸಲ್ಮಾನ್, ರಿಯಾಜ್, ಸೋಹೇಬ್, ಹುಸೇನ್, ದಾದು, ಜಬಿವುಲ್ಲಾ, ರಹಮತ್, ಜಬಿವುಲ್ಲಾ ಸೇರಿ ಹಲವರು ಇದ್ದರು.