ಮಾಗಡಿ: ಭಾರತದಲ್ಲಿ 147 ಕೋಟಿ ಜನಸಂಖ್ಯೆಯಿದ್ದರೂ ಒಲಂಪಿಕ್ ಕ್ರೀಡಾಕೂಟದಲ್ಲಿ ನಮ್ಮ ಸಾಧನೆ ಶೂನ್ಯ. ಇದಕ್ಕೆ ಏನು ಕಾರಣ ಎಂಬುದನ್ನು ತಿಳಿಯಬೇಕಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ಹೇಳಿದರು
ಮಾಗಡಿ: ಭಾರತದಲ್ಲಿ 147 ಕೋಟಿ ಜನಸಂಖ್ಯೆಯಿದ್ದರೂ ಒಲಂಪಿಕ್ ಕ್ರೀಡಾಕೂಟದಲ್ಲಿ ನಮ್ಮ ಸಾಧನೆ ಶೂನ್ಯ. ಇದಕ್ಕೆ ಏನು ಕಾರಣ ಎಂಬುದನ್ನು ತಿಳಿಯಬೇಕಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ಹೇಳಿದರು.
ಪಟ್ಟಣದ ಬಿಜಿಎಸ್ ಕಾಲೇಜು ಮೈದಾನದಲ್ಲಿ 2026-27ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ವರ್ಷವೂ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ಆದರೆ ಒಲಂಪಿಕ್ ನಲ್ಲಿ ಮಾತ್ರ ನಮ್ಮ ಸಾಧನೆ ಕಳಪೆಯಾಗಿದೆ. ಚೀನಾ ಇತರ ದೇಶಗಳು ಪದಕಗಳ ಪಟ್ಟಿಯಲ್ಲಿ ಟಾಪ್ 5ರಲ್ಲಿ ನಿಲ್ಲುತ್ತಾರೆ. ಭಾರತ ಮಾತ್ರ ಕೊನೆಯಲ್ಲಿ ಕಾಣುತ್ತೇವೆ. ಇದಕ್ಕೆ ಏನು ಕಾರಣ ಎಂಬುದನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಅದೇ ರೀತಿ ಕ್ರೀಡಾಕೂಟಗಳಿಗೂ ಪ್ರಾಮುಖ್ಯತೆ ಕೊಡಬೇಕು ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಆಸಕ್ತಿ ಮತ್ತು ತರಬೇತಿಗಳನ್ನು ಕೊಟ್ಟು ಅವರು ಕ್ರೀಡಾಕೂಟದಲ್ಲಿ ಸಾಧನೆ ಮಾಡುವಂತೆ ನಾವು ಕೂಡ ಪ್ರೋತ್ಸಾಹಿಸಿದಾಗ ಮಾತ್ರ ಒಲಂಪಿಕ್ ನಲ್ಲಿ ಪದಕ ನಿರೀಕ್ಷೆ ಮಾಡಬಹುದು. ವಿದ್ಯಾರ್ಥಿಗಳು ಕಾಲೇಜು ಬಿಟ್ಟ ನಂತರ ಜಾಲತಾಣಗಳಲ್ಲಿ ಮುಳುಗುವ ಬದಲು ತಮಗೆ ಇಷ್ಟವಾದ ಕ್ರೀಡೆಯಲ್ಲಿ ಸಾಧನೆ ಮಾಡಿ, ನಮ್ಮ ದೇಶಕ್ಕೆ ಮತ್ತು ರಾಜ್ಯಕ್ಕೆ ಕೀರ್ತಿ ತರಬೇಕು. ಇಲ್ಲವಾದರೆ ಕ್ರೀಡಾಕೂಟದ ಹೆಸರಿನಲ್ಲಿ ಗಣ್ಯರ ಹೆಸರಿಟ್ಟು ನಡೆಸುತ್ತಿರುವ ತರಬೇತಿ ಕೇಂದ್ರಗಳು ವ್ಯರ್ಥವಾಗುತ್ತದೆ. ಜನಸಂಖ್ಯೆಯಲ್ಲಿ ಮಾತ್ರ ಮೊದಲ ಸ್ಥಾನಕ್ಕೆ ಬಂದರೆ ಸಾಲದು ಸಾಧನೆಯಲ್ಲೂ ನಮ್ಮ ದೇಶ ಮೊದಲ ಸ್ಥಾನದಲ್ಲಿ ನಿಲ್ಲಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಶಾಲಾ ಮತ್ತು ಕಾಲೇಜು ಹಂತದಲ್ಲಿ ಮಾತ್ರ ಕ್ರೀಡೆಯಲ್ಲಿ ಭಾಗವಹಿಸಿದರೆ ಸಾಲದು, ಇದಕ್ಕೆ ನುರಿತ ತರಬೇತಿ ಪಡೆದು ಕಾಲೇಜು ಮುಗಿದ ನಂತರವೂ ವಿವಿಧ ಕ್ರೀಡಾಕೂಟಗಳಲ್ಲಿ ನಮ್ಮ ದೇಶದ ಪರವಾಗಿ ವಿದ್ಯಾರ್ಥಿಗಳು ಸ್ಪರ್ಧಿಸಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಸಮವಾಗಿ ಸ್ವೀಕರಿಸಿ ಗೆಲ್ಲುವ ಗುರಿಯನ್ನು ಇಟ್ಟುಕೊಂಡು ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಮಟ್ಟದ ಎರಡನೇ ದಿನದ ಗುಂಪು ಕ್ರೀಡಾಕೂಟದಲ್ಲಿ ಖೋಖೋ, ವಾಲಿಬಾಲ್, ಥ್ರೋಬಾಲ್, ಕಬಡ್ಡಿ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಪುರುಷೋತ್ತಮ್, ಕೆಇಬಿ ನೌಕರ ಸಂಘದ ಮಾಜಿ ಅಧ್ಯಕ್ಷ ರಾಮಕೃಷ್ಣಯ್ಯ, ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸ್, ಕ್ರೀಡಾಕೂಟದ ತಾಲೂಕು ಅಧ್ಯಕ್ಷ ಕಾಂತರಾಜು ಹುಲಿಕಟ್ಟೆ ಕಾಲೇಜು ಪ್ರಾಂಶುಪಾಲರಾದ ಎಂ.ಸಿ.ಗೋವಿಂದರಾಜು, ಬಿಜಿಎಸ್ ಕಾಲೇಜು ಉಮೇಶ್, ನರಸಿಂಹಮೂರ್ತಿ, ಸಂಪತ್ ಇತರರು ಭಾಗವಹಿಸಿದ್ದರು.(ಫೋಟೋ ಕ್ಯಾಫ್ಞನ್)
ಮಾಗಡಿಯ ಬಿಜಿಎಸ್ ಕಾಲೇಜು ಮೈದಾನದಲ್ಲಿ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಳ್ಳುತ್ತಿರುವುದು.