ರೈತರ ಅಭಿವೃದ್ಧಿಯಾದಾಗ ಮಾತ್ರ ದೇಶದ ಪಗ್ರತಿ

| Published : Dec 29 2023, 01:32 AM IST

ಸಾರಾಂಶ

- ಶಾಸಕ ಡಿ. ರವಿಶಂಕರ್ ಅಭಿಮತ ರಾಷ್ಟ್ರೀಯ ರೈತ ದಿನಾಚರಣೆ ಮತ್ತು ತಾಲೂಕು ಮಟ್ಟದ ಕಿಸಾನ್ ಗೋಷ್ಠಿ

- ಶಾಸಕ ಡಿ. ರವಿಶಂಕರ್ ಅಭಿಮತ

- ರಾಷ್ಟ್ರೀಯ ರೈತ ದಿನಾಚರಣೆ, ತಾಲೂಕು ಮಟ್ಟದ ಕಿಸಾನ್ ಗೋಷ್ಠಿ ಕಾರ್ಯಕ್ರಮ-----

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ರೈತರು ಆರ್ಥಿಕವಾಗಿ ಅಭಿವೃದ್ಧಿಯಾದಾಗ ಮಾತ್ರ ದೇಶ ಸರ್ವಾಂಗೀಣವಾಗಿ ಮುಂದುವರಿಯಲು ಸಾಧ್ಯ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.

ತಾಲೂಕು ಕೃಷಿಕ ಸಮಾಜ, ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ, ನಾಗನಹಳ್ಳಿ ಕೃಷಿ ಸಂಶೋಧನಾ ಕೇಂದ್ರ ಮತ್ತು ತಾಲೂಕು ಯುವ ರೈತ ವೇದಿಕೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಕೃಷ್ಣ ಮಂದಿರದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಮತ್ತು ತಾಲೂಕು ಮಟ್ಟದ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಇತ್ತೀಚಿನ ದಿನಗಳಲ್ಲಿ ನಾವು ಸಹ ಆ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದ್ದು ಜಗತ್ತಿಗೆ ಮಾದರಿಯಾಗಿದ್ದೇವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ರೈತರಿಗೆ ಅಗತ್ಯವಾಗಿ ಬೇಕಿರುವ ನೀರು, ವಿದ್ಯುತ್, ಬೆಂಬಲ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆಗಳನ್ನು ಕಲ್ಪಿಸಲು ನಮ್ಮ ಸರ್ಕಾರ ಕಂಕಣ ಬದ್ಧವಾಗಿ ಕೆಲಸ ಮಾಡುತ್ತಿದ್ದು, ನಾನು ಸಹ ಸದಾ ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದರು.

ರೈತರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದು ಅವುಗಳ ಪರಿಹಾರಕ್ಕೆ ಬದ್ಧನಾಗಿ ಕೆಲಸ ಮಾಡುವುದರ ಜೊತೆಗೆ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆಗೆ ಪಡೆದಿರುವ ನಿರಾಣಿ ಶುಗರ್ಸ್ ನವರಿಗೆ ನೋಂದಣಿ ಮಾಡಿಸುವಂತೆ ಸಕ್ಕರೆ ಸಚಿವರನ್ನು ಸದನದಲ್ಲಿಯೇ ಒತ್ತಾಯಿಸಿದ್ದೇನೆ ಎಂದು ಮಾಹಿತಿ ನೀಡಿದರು.

ಸಾಲಿಗ್ರಾಮ ಮತ್ತು ಕೆ. ಆರ್. ನಗರ ಎರಡು ತಾಲೂಕುಗಳು ಬರ ಪಟ್ಟಿಗೆ ಸೇರ್ಪಡೆಯಾಗಿದ್ದು, ಈ ವ್ಯಾಪ್ತಿಯ ರೈತರಿಗೆ ಬರದಿಂದ ದೊರೆಯುವ ಎಲ್ಲ ಪರಿಹಾರವನ್ನು ಒದಗಿಸಲಾಗುತ್ತದೆ, ಈ ಸಂಬಂಧ ರೈತರು ಸಹ ಅಗತ್ಯ ದಾಖಲೆ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಕರಪತ್ರವನ್ನು ಶಾಸಕರು ಬಿಡುಗಡೆ ಮಾಡಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ರೈತರು ಏಕ ಬೆಳೆ ಬೆಳೆಯುವ ಪದ್ಧತಿಯನ್ನು ಕೈ ಬಿಟ್ಟು, ಹೆಚ್ಚು ಆದಾಯ ನೀಡುವ ಬಹು ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬರಾಗಬೇಕೆಂದು ಕರೆ ನೀಡಿದರು.

ರೈತರು ಮತ್ತು ಸೈನಿಕರು ಜಗತ್ತಿನ ಎರಡು ಕಣ್ಣುಗಳಾಗಿದ್ದು, ಆಳುವ ಸರ್ಕಾರಗಳು ಅವರಿಗೆ ಅಗತ್ಯವಾಗಿ ಬೇಕಿರುವ ಮೂಲಭೂತ ಸವಲತ್ತುಗಳನ್ನು ಒದಗಿಸುವುದರ ಜೊತೆಗೆ ಸದಾ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.

ಕೊರೋನಾ ಸಂದರ್ಭದಲ್ಲಿಯೂ ಎದೆಗುಂದದ ರೈತ ಸಮೂಹ ಕೃಷಿ ಚಟುವಟಿಕೆಯನ್ನು ಮಾಡಿ ದೇಶಕ್ಕೆ ಆಹಾರ ನೀಡುವುದರ ಮೂಲಕ ನಾವು ಬೇರೆಯವರ ಮುಂದೆ ಕೈಚಾಚದಂತೆ ನೋಡಿಕೊಂಡರೆಂದು ಅವರು ಶ್ಲಾಘಿಸಿದರು.

ಪ್ರಗತಿಪರ ರೈತರಾದ ಅರ್ಜುನಹಳ್ಳಿ ಕವಿತಾ, ಅರಸನಕೊಪ್ಪಲು ತಮ್ಮಯ್ಯ, ಎಂ. ಜೆ. ಕುಮಾರ್ ಮತ್ತು ಸಮಾಜ ಸೇವಕ ಕೆ.ಎಲ್. ಹೇಮಂತ್ ಅವರನ್ನು ಸನ್ಮಾನಿಸಲಾಯಿತು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಮಂಜುನಾಥ್ ಅಂಗಡಿ, ನಾಗನಹಳ್ಳಿ ಕೃಷಿ ವಿಸ್ತರಣಾ ಘಟಕದ ಸಹಾಯಕ ಪ್ರಾಧ್ಯಾಪಕಿ ಡಾ.ಆರ್.ಎನ್. ಪುಷ್ಪಾ, ತಾಲೂಕು ಯುವ ರೈತ ವೇದಿಕೆ ಅಧ್ಯಕ್ಷ ಅರ್ಜುನಹಳ್ಳಿ ರಾಮಪ್ರಸಾದ್ ಮಾತನಾಡಿದರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಾತಿಗ್ರಾಮ ದಿವಾಕರ, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕಿ ಭಾರತಿ, ತಾಲೂಕು ಸರ್ವೋದಯ ಪಕ್ಷದ ಅಧ್ಯಕ್ಷ ಗರುಡಗಂಭದ ಸ್ವಾಮಿ, ಪ್ರಗತಿ ಪರ ರೈತರಾದ ಸಂಪತ್, ಎಂ.ಜೆ. ಕುಮಾರ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ ಕೆ.ಎನ್. ಪ್ರಸನ್ನಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ರಮೇಶ್, ಕಾಂಗ್ರೆಸ್ ಮುಖಂಡರಾದ ಹೆಬ್ಬಾಳು ವೇಣುಗೋಪಾಲ್, ಚಲುವರಾಜು ಇದ್ದರು.

-------

ಕೋಟ್, ಬಾಕ್ಸ್....

--

ರೈತರು ಸಾವಯವ ಕೃಷಿಯತ್ತ ಮುಖ ಮಾಡಿದರೆ ಉತ್ತಮ ಇಳುವರಿ- ಡಾ.ಆರ್.ಎನ್. ಪುಷ್ಪ

--

ರೈತರು ಅತಿಯಾದ ರಸಗೊಬ್ಬರ ಬಳಕೆಯನ್ನು ಬಿಟ್ಟು ಸಾವಯವ ಕೃಷಿಯತ್ತ ಮುಖ ಮಾಡಿದರೆ ಉತ್ತಮ ಇಳುವರಿಯ ಜತೆಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು.ಕೃಷಿ ಇಲಾಖೆಯ ವತಿಯಿಂದ ನೀಡುವ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ನಿಮ್ಮಲ್ಲಿರುವ ಜ್ಞಾನದ ಜತೆಗೆ ವಿಜ್ಙಾನವನ್ನು ಅಳವಡಿಸಿಕೊಂಡು ವೈಜ್ಙಾನಿಕವಾಗಿ ಬೆಳೆ ಬೆಳೆಯಬೇಕು.

-ಡಾ.ಆರ್.ಎನ್. ಪುಷ್ಪಾ, ಸಹಾಯಕ ಪ್ರಾಧ್ಯಾಪಕಿ, ನಾಗನಹಳ್ಳಿ ಶಿಕ್ಷಣ ವಿಸ್ತರಣಾ ಘಟಕ.

-------------

ರೈತರು ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಬರುವ ಬೆಳೆಗಳನ್ನು ಬೆಳೆಯುವ ಪದ್ದತಿಯನ್ನು ರೂಡಿಸಿಕೊಳ್ಳಬೇಕು.

ತೋಟಗಾರಿಕಾ ಬೆಳೆಗಳಿಗೆ ಸರ್ಕಾರದ ವತಿಯಿಂದ ಸಾಕಷ್ಟು ಸಹಾಯಧನ ನೀಡಲಿದ್ದು, ಅದರ ಸದ್ಬಳಕೆ ಮಾಡಿಕೊಂಡು ನೀರನ್ನು ಮಿತವಾಗಿ ಬಳಸಿಕೊಳ್ಳಬೇಕೆಂದರಲ್ಲದೆ, ನಂಜನಗೂಡು ರಸಬಾಳೆ ಮತ್ತು ಮೈಸೂರು ವೀಳ್ಯದೆಲೆ ಬೆಳೆದರೆ ಇಲಾಖೆಯ ವತಿಯಿಂದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುತ್ತೇವೆ.

- ಡಾ. ಮಂಜುನಾಥ್ ಅಂಗಡಿ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ