ಮಹಿಳೆ ಪ್ರಗತಿಯಾದರೆ ದೇಶದ ಉನ್ನತಿ: ಶಶಿಕಲಾ ರವಿಶಂಕರ್

| Published : Mar 15 2024, 01:21 AM IST

ಸಾರಾಂಶ

ಹಿರಿಯೂರು ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಮತ್ತು ನಾರಿಶಕ್ತಿ ಫಿಟ್‌ನೆಸ್ ರನ್ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಪ್ರತಿಯೊಬ್ಬ ಮಹಿಳೆಯೂ ಶಿಕ್ಷಣವಂತರಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಸಮಾಜ ಸೇವಕಿ ಶಶಿಕಲಾ ರವಿಶಂಕರ್ ಹೇಳಿದರು.ನಗರದ ವಾಣಿವಿಲಾಸ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನೆಹರೂ ಯುವಕೇಂದ್ರ, ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾಸಂಘ ಮತ್ತು ವಾಣಿವಿಲಾಸ ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ನಾರಿಶಕ್ತಿ ಫಿಟ್ ನೆಸ್ ರನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ ಇಂದು ಮಹಿಳೆಯರು ರಾಜಕೀಯ, ಶಿಕ್ಷಣ, ಉದ್ಯಮ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಮಾಜಿಕ, ಆರ್ಥಿಕ ಪ್ರಗತಿ ಸಾಧಿಸಿದ್ದು, ಅತ್ಯುನ್ನತ ಸ್ಥಾನ ಗಳನ್ನು ಅಲಂಕರಿಸಿ ಹೆಸರು ಮತ್ತು ಸಾಧನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬ ಮಹಿಳೆಯರು ಶಿಕ್ಷಣವಂತರಾಗುವತ್ತ ಯೋಚಿಸಬೇಕಿದೆ. ಆಗ ಮಾತ್ರ ಮಹಿಳಾ ಪ್ರಗತಿಯ ಜೊತೆ ದೇಶವು ಸಹ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದರು. ಮನವಿ ಟ್ರಸ್ಟ್ ವ್ಯವಸ್ಥಾಪಕಿ ಮಾನಸ ಮಂಜುನಾಥ್ ಮಾತನಾಡಿ, ಇಂದಿನ ಜಗತ್ತಿನಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಮಹತ್ವವಿದ್ದು, ಮಹಿಳೆಯರು ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುವ ಜೊತೆಗೆ ಶಿಕ್ಷಣವಂತರಾಗುವ ಮೂಲಕ ತಮ್ಮ ಕುಟುಂಬದ ಜೊತೆಗೆ ಸಮಾಜವನ್ನು ಉತ್ತಮ ಹಾದಿಯಲ್ಲಿ ನಡೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದರು.ಪೋಲೀಸ್ ಇಲಾಖೆಯ ರೇಖಾ ಮಾತನಾಡಿ, ಮಹಿಳೆಯರ ಸುರಕ್ಷತೆಗಾಗಿಯೇ ಸರ್ಕಾರ ಪೋಕ್ಸೋ ಕಾಯಿದೆಯನ್ನು ಜಾರಿಗೊಳಿಸಿದ್ದು, ಸಾಮಾಜಿಕ ಪಿಡುಗು ಗಳಾದ ಬಾಲ್ಯವಿವಾಹ, ದೇವದಾಸಿ ಪದ್ಧತಿ, ಮಹಿಳೆಯರ ಹಾಗೂ ಮಕ್ಕಳ ಮೇಲಿನ ಶೋಷಣೆಯನ್ನು ತಡೆಗಟ್ಟುವಲ್ಲಿ ಮಹಿಳಾ ಸಹಾಯವಾಣಿ ನೆರವು ಪಡೆದು ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಂದಾಗಬೇಕು ಎಂದರು.ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಆಲೂರು ಹನುಮಂತರಾಯಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಶಿವರಂಜಿನಿ, ನಗರಸಭೆ ಆರೋಗ್ಯ ನಿರೀಕ್ಷಕಿ ಮೀನಾಕ್ಷಿ, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ, ಮುಖ್ಯಶಿಕ್ಷಕಿ ಸೌಮ್ಯ, ಶಿಕ್ಷಕಿಯರುಗಳಾದ ವಸಂತಾ, ನಂದಿನಿ, ರಂಜಿತಾ, ಗಂಗಾ ಮಾತೆ, ಹೇಮಲತಾ, ರಚನಾ, ಪೂಜಾ, ಶಿಕ್ಷಕರಾದ ಉಮೇಶ್ ಯಾದವ್, ಶಿವರಾಜ್, ಕಾಂತರಾಜ್ ಮುಂತಾದವರು ಉಪಸ್ಥಿತರಿದ್ದರು.

ಎಲ್ಲಾ ಕ್ಷೇತ್ರದಲ್ಲೂ ಮಹಿಳೆ ಭಾಗವಹಿಸುವಿಕೆ ಮುಖ್ಯ: ಮಾನಸ

ಹಿರಿಯೂರು: ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಬೇಕಾಗಿದೆ ಎಂದು ಮನವಿ ಟ್ರಸ್ಟ್ ನ ಅಧ್ಯಕ್ಷೆ ಮಾನಸ ಮಂಜುನಾಥ್ ಗೌಡ ಹೇಳಿದರು.ತಾಲೂಕಿನ ಯಲ್ಲದಕೆರೆ ಗ್ರಾಮ ಪಂಚಾಯ್ತಿ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇವತ್ತಿನ ಕಾಲಘಟ್ಟದಲ್ಲಿ ಮಹಿಳಾ ಸಬಲೀಕರಣ ಅತ್ಯಂತ ಅಗತ್ಯವಾಗಿದೆ. ರಾಷ್ಟ್ರ ಮತ್ತು ಸಮಾಜದ ಪ್ರಗತಿಗೆ ಮಹಿಳಾ ಸಬಲೀಕರಣ ಬಹುಮುಖ್ಯವಾಗಿದ್ದು, ಮಹಿಳೆಯರು ಹಿಂದುಳಿದರೆ ಯಾವುದೇ ರಾಷ್ಟ್ರ ಸಾಮಾಜಿಕವಾಗಿ ಅಥವಾ ಆರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯವಿಲ್ಲ. ಮಹಿಳೆಯರು ಸುರಕ್ಷಿತವಾಗಿರದಿದ್ದರೆ, ಶಿಕ್ಷಣ ಪಡೆಯದಿದ್ದರೆ ಆ ರಾಷ್ಟ್ರವು ಏಳ್ಗೆಯಾಗಲೂ ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಸಮಾಜ ಸೇವಕಿ ಶಶಿಕಲಾ ರವಿಶಂಕರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕರಿಯಮ್ಮ ಗೋವಿಂದರಾಜು, ರೇಖಾ ರಮೇಶ್, ನಯನ ರಮೇಶ್, ರಮ್ಯಾ ರಾಜು, ತಾಯಿ ಮುದ್ದಮ್ಮ ಮುಂತಾದವರು ಹಾಜರಿದ್ದರು.ಇದೇ ವೇಳೆ ವಿವಿಧ ಕ್ಷೇತ್ರಗಳಾದ ಕೃಷಿ, ಆರೋಗ್ಯ, ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕರಿಗೆ ಇದೇ ವೇಳೆ ಸನ್ಮಾನಿಸಲಾಯಿತು.