ದೇಶದ ಹಿತಾಸಕ್ತಿಯೇ ಎಲ್ಲಕ್ಕಿಂತ ಮುಖ್ಯ: ಕ್ಯಾ.ಬ್ರಿಜೇಶ್ ಚೌಟ

| Published : Apr 18 2024, 02:21 AM IST

ದೇಶದ ಹಿತಾಸಕ್ತಿಯೇ ಎಲ್ಲಕ್ಕಿಂತ ಮುಖ್ಯ: ಕ್ಯಾ.ಬ್ರಿಜೇಶ್ ಚೌಟ
Share this Article
  • FB
  • TW
  • Linkdin
  • Email

ಸಾರಾಂಶ

ಕೆವಿಜಿ ಸಂಸ್ಥೆಯ ಪ್ರವರ್ತಕ ಕೆ.ವಿ. ಚಿದಾನಂದ್ ದಂಪತಿ, ಕ್ಟಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಶಾಲು ಹೊದಿಸಿ ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಮಂಗಳೂರು

ಬಿಜೆಪಿ ಕಾರ್ಯಕರ್ತ ಮತ್ತು ಸೈನಿಕನ ಮಾನಸಿಕತೆ ಒಂದೇ ರೀತಿ ಇರುತ್ತದೆ. ಸೇನೆಯಲ್ಲಿದ್ದವರಿಗೆ ದೇಶವೇ ಮುಖ್ಯ. ಕರೆ ಬಂದ ಕೂಡಲೆ ಓಡಬೇಕು. ಬಿಜೆಪಿ ಕಾರ್ಯಕರ್ತರಿಗೂ ದೇಶದ ಹಿತಾಸಕ್ತಿಯೇ ಮುಖ್ಯವಾಗಿರುತ್ತದೆ. ದೇಶದಲ್ಲಿ 18ರಿಂದ 40 ವರ್ಷದ ಒಳಗಿನ ಯುವಜನರು ಶೇ.65ರಷ್ಟಿದ್ದು, ಅವರನ್ನು ಹೆಚ್ಚೆಚ್ಚು ಪ್ರಜಾಪ್ರಭುತ್ವದಲ್ಲಿ ತೊಡಗಿಸಿದರೆ ಪ್ರಜಾತಂತ್ರ ಉತ್ತಮಗೊಳ್ಳುತ್ತದೆ ಎಂದು ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಸುಳ್ಯದ ಕೆವಿಜಿ ಕ್ಯಾಂಪಸ್‌ನಲ್ಲಿ ಸೇರಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೆವಿಜಿ ಸಂಸ್ಥೆಯ ಪ್ರವರ್ತಕ ಕೆ.ವಿ. ಚಿದಾನಂದ್ ದಂಪತಿ, ಕ್ಟಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಶಾಲು ಹೊದಿಸಿ ಬರಮಾಡಿಕೊಂಡರು.

ದೇಶದ ಬೇರೆ ಬೇರೆ ಕಡೆ ಓಡಾಡಿದ್ದೇನೆ. ಎಲ್ಲ ಕಡೆಯ ಸಂಸ್ಕೃತಿ, ಸಂಪನ್ಮೂಲ ನೋಡಿದ್ದೇನೆ. ಆದರೆ ನಮ್ಮಲ್ಲಿ ದೇಶದ ಎಲ್ಲ ಕಡೆ ಇರುವ ಸಂಸ್ಕೃತಿ ಮತ್ತು ಸಂಪನ್ಮೂಲ ಇದೆ. ನಮ್ಮ ಜನರಲ್ಲಿ ಬುದ್ಧಿವಂತಿಕೆ, ಸಾಮರ್ಥ್ಯ ಇದೆ. ಯುವಜನರ ಆಕಾಂಕ್ಷೆ ಏನಿದೆ ಎನ್ನುವ ಅರಿವು ಹೊಂದಿದ್ದೇನೆ. ಯುವಜನರ ಆಕಾಂಕ್ಷೆ ತಿಳಿದುಕೊಂಡು ದೇಶದ ಅಭಿವೃದ್ಧಿಯಲ್ಲಿ ಜೋಡಿಸಿಕೊಳ್ಳಲು ತಯಾರಿದ್ದೇನೆ ಎಂದು ಚೌಟ ಹೇಳಿದರು.

ಸಂಸದನಾದ ಕೂಡಲೆ ಯುವ ಮನಸ್ಸುಗಳು ಯಾವ ರೀತಿ ಯೋಚನೆ ಮಾಡುತ್ತಾರೆ, ಅಭಿವೃದ್ಧಿಯ ದಿಸೆಯಲ್ಲಿ ಆಕಾಂಕ್ಷೆಗಳು ಏನಿವೆ ಎಂದು ತಿಳಿಯಲು ನಿಮ್ಮ ಜೊತೆ ಸಂವಾದ ಮಾಡುತ್ತೇನೆ. ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿ ಆಗುತ್ತಿದ್ದಾರೆ. ದೇಶದ ಭವಿಷ್ಯದ ದೃಷ್ಟಿಯಿಂದ ಮೋದಿ ಮೂರನೇ ಟರ್ಮ್ ಅತಿ ಮುಖ್ಯವಾಗಿದೆ. ಅತಿ ಹೆಚ್ಚು ಮತದಾನದ ಮೂಲಕ ಮೋದಿ ಅವರನ್ನು ಗೆಲ್ಲಿಸಬೇಕಿದೆ ಎಂದರು.

ಸಾಮಾನ್ಯ ಬಡ ಮಧ್ಯಮ ವರ್ಗದಿಂದ ಬಂದಿದ್ದೇನೆ. ಹೆತ್ತವರು ಉತ್ತಮ ಶಿಕ್ಷಣ ಕೊಟ್ಟಿದ್ದೇ ನನ್ನ ಶ್ರೀಮಂತಿಕೆ. ಸೇನೆಯಲ್ಲಿ ಕೆಲಸ ಮಾಡಿದ್ದೇನೆ ಎಂಬ ನೆಲೆಯಲ್ಲಿ ಬಿಜೆಪಿಯಿಂದ ಸಾರ್ವಜನಿಕ ಸೇವೆಗೆ ಅವಕಾಶ ಕೊಟ್ಟಿದ್ದಾರೆ. ಬಿಜೆಪಿ, ಮೋದಿಯವರು ಸಾಮಾನ್ಯ ಸೈನಿಕ ಹಿನ್ನೆಲೆಯವರಿಗೆ ಈ ಅವಕಾಶ ಕೊಟ್ಟು ರಾಜಕೀಯದಲ್ಲಿ ಮೇಲ್ಪಂಕ್ತಿ ಹಾಕಿದ್ದಾರೆ. ಕಾಂಗ್ರೆಸಿನವರು ರಾಜ್ಯದಲ್ಲಿ 15 ಮಂದಿಗೆ ಸಿರಿವಂತರಿಗೆ, ರಾಜಕೀಯ ಹಿನ್ನೆಲೆಯಿದ್ದವರಿಗೆ ಟಿಕೆಟ್ ಕೊಟ್ಟಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬನ ಗೆಲುವು ಬಿಜೆಪಿ ಮೂಲಕ ರಾಜಕೀಯದಲ್ಲಿ ಮೇಲ್ಪಂಕ್ತಿ ಆಗಬೇಕಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ವಿನಯ ಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ವಿನಯ್ ಮುಳುಗಾಡು, ರವೀಂದ್ರ ಶೆಟ್ಟಿ ಉಳಿದೊಟ್ಟು, ಅಪ್ಪಯ್ಯ ಮಣಿಯಾಣಿ, ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ ಮತ್ತಿತರರು ಇದ್ದರು.