ಸಾರಾಂಶ
- ೫ ವರ್ಷ ಸಾಧಾರಣ ಜೈಲು ಶಿಕ್ಷೆ, ತಲಾ ₹೩೦ ಸಾವಿರ ದಂಡ ವಿಧಿಸಿದ ಕೋರ್ಟ್ - ಚನ್ನಗಿರಿ ತಾಲೂಕು ನವಿಲೆಹಾಳು ಗ್ರಾಮದ ಹನುಮಂತಪ್ಪ, ಶಾಂತ ಹನುಮಂತಪ್ಪ ದಂಪತಿ
- ಖೋಟಾ ನೋಟು ಪತ್ತೆ ಹಚ್ಚಿ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ವಿಷಯ ತಿಳಿಸಿದ್ದ ಫಕೃಸಾಬ್- - -
ಕನ್ನಡಪ್ರಭ ವಾರ್ತೆ, ಹರಿಹರನಗರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಇಬ್ಬರಿಗೆ ದಾವಣಗೆರೆ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೫ ವರ್ಷ ಸಾಧಾರಣ ಜೈಲು ಶಿಕ್ಷೆ ಮತ್ತು ತಲಾ ₹೩೦ ಸಾವಿರ ದಂಡ ವಿಧಿಸಿ ಬುಧವಾರ ಆದೇಶಿಸಿದೆ.
ಚನ್ನಗಿರಿ ತಾಲೂಕು ನವಿಲೆಹಾಳು ಗ್ರಾಮದ ಹನುಮಂತಪ್ಪ (೫೦) ಮತ್ತು ಶಾಂತ ಹನುಮಂತಪ್ಪ (೪೦) ಶಿಕ್ಷೆಗೆ ಒಳಗಾಗಿರುವ ದಂಪತಿ.೨೦೧೯ರ ಜೂನ್ ೧೯ರಂದು ವಾರದ ಸಂತೆ ಮಾರ್ಕೆಟ್‌ನಲ್ಲಿ ತೆಂಗಿನಕಾಯಿ ವ್ಯಾಪಾರಿ ಫಕೃಸಾಬ್ ಅವರಿಗೆ ₹೨೦೦೦ ಮುಖಬೆಲೆಯ ನೋಟು ನೀಡಲು ಬಂದಿದ್ದರು. ಈ ವೇಳೆ ಅನುಮಾನಗೊಂಡ ಫಕೃಸಾಬ್ ಬೇರೆ ನೋಟು ಕೇಳಿದ್ದಾರೆ. ಆಗ ₹೫೦೦ ಮುಖಬೆಲೆ ನೋಟು ನೀಡಿದ್ದರು. ಅದೂ ಸಹ ಖೋಟಾ ನೋಟು ಎಂದು ಗೊತ್ತಾಗಿದ್ದರಿಂದ ಫಕೃಸಾಬ್ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ವಿಷಯ ತಿಳಿಸಿದ್ದರು. ದಂಪತಿಯನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದರು. ಆಗ ಆರೋಪಿಗಳು ಖೋಟಾ ನೋಟು ಚಲಾವಣೆ ಮಾಡುತ್ತಿರುವ ತಪ್ಪೊಪ್ಪಿಕೊಂಡಿದ್ದರು. ಆರೋಪಿಗಳಿಂದ ₹೧.೩೧ ಲಕ್ಷ ಮೌಲ್ಯದ ಖೋಟಾ ನೋಟುಗಳನ್ನು ಹಾಗೂ ೧ ಕಲರ್ ಪ್ರಿಂಟರ್ ವಶಪಡಿಸಿಕೊಂಡಿದ್ದ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪ ಸಾಬೀತಾಗಿದ್ದರಿಂದ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರವೀಣ್ ಕುಮಾರ್ ಆರ್.ಎನ್. ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ, ದಂಡ ಹಾಕಿ, ಆದೇಶಿಸಿದರು. ಪ್ರಕರಣದಲ್ಲಿ ಸರ್ಕಾರಿ ವಕೀಲ ಜಯಪ್ಪ ವಾದ ಮಂಡಿಸಿದ್ದರು. ತನಿಖಾಧಿಕಾರಿಗಳಾದ ಸಿಪಿಐ ಐ.ಎಚ್. ಗುರುನಾಥ್ ಮತ್ತಿತರ ಸಿಬ್ಬಂದಿ ಪ್ರಯತ್ನವನ್ನು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ. - - - (ಸಾಂದರ್ಭಿಕ ಚಿತ್ರ)