ಬಂಡೀಪುರ ಬಳಿ ದಂಪತಿ, ಮಗು ಅಪಹರಣ

| Published : Mar 04 2025, 12:31 AM IST

ಸಾರಾಂಶ

ಬಂಡೀಪುರ ಬಳಿಯ ಕಂಟ್ರಿಕ್ಲಬ್‌ ಬಳಿ ದಂಪತಿ ಹಾಗೂ ಮಗುವನ್ನು ಕಿಡ್ನಾಪ್‌ ಮಾಡಿದ್ದಾರೆಂಬ ವದಂತಿ ಹರಡಿದ ಹಿನ್ನೆಲೆ ಎಸ್ಪಿ ಡಾ.ಬಿ.ಟಿ.ಕವಿತ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುಂಡ್ಲುಪೇಟೆ: ಹಾಡಹಗಲೇ ಬಂಡೀಪುರ ಬಳಿಯ ಕಂಟ್ರಿಕ್ಲಬ್‌ ಬಳಿ ದಂಪತಿ ಹಾಗೂ ಮಗುವನ್ನು ಕಿಡ್ನಾಪ್‌ ಮಾಡಿದ್ದಾರೆಂಬ ವದಂತಿ ಹರಡಿದೆ.

ಬೆಂಗಳೂರು ನಿವಾಸಿ, ಬಿಬಿಎಂಪಿಯ ಎಫ್‌ಡಿಎ ಹೆಸರಲ್ಲಿ ಕ್ಲಬ್‌ನಲ್ಲಿ ಬುಕ್ ಮಾಡಿದ್ದ ನಿಶಾಂತ್‌ ಹಾಗೂ ಅವರ ಪತ್ನಿ, ಮಗುವಿದ್ದ ಕಾರಿನಲ್ಲಿ ಕಂಟ್ರಿ ಕ್ಲಬ್‌ ನಿಂದ ತೆರಳುತ್ತಿದ್ದಾಗ ಕ್ಲಬ್‌ ಅನತಿ ದೂರದಲ್ಲೇ ತಡೆದು, ಅಡ್ಡಗಟ್ಟಿ ನಿಶಾಂತ್‌ ಕಾರಿನಿಂದ ದಂಪತಿ ಹಾಗೂ ಮಗುವನ್ನು ಇಳಿಸಿ ಕಾರಲ್ಲಿ ಕೂರಿಸಿಕೊಂಡು ಮೈಸೂರು ಕಡೆ ಹೋಗಿದ್ದಾರೆ.ಕಂಟ್ರಿಕ್ಲಬ್‌ ಮ್ಯಾನೇಜರ್‌ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕಂಟ್ರಿಕ್ಲಬ್‌ಗೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್.ಪರಶಿವಮೂರ್ತಿ, ಸಬ್‌ ಇನ್ಸ್‌ಪೆಕ್ಟರ್‌ ಸಾಹೇಬಗೌಡ ಸಿಬ್ಬಂದಿಯೊಂದಿಗೆ ದೌಡಾಯಿಸಿ ಸಿಸಿ ಕ್ಯಾಮೆರಾ ಹಾಗೂ ಸಿಬ್ಬಂದಿ ಬಳಿ ಮಾಹಿತಿ ಪಡೆಯುವ ವೇಳೆಗೆ ಎಸ್ಪಿ ಡಾ.ಕವಿತ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶಶಿಧರ್‌, ಡಿವೈಎಸ್ಪಿ ಲಕ್ಷ್ಮಯ್ಯ ಆಗಮಿಸಿ ಪರಿಶೀಲನೆ ನಡೆಸಿದರು. ಇತ್ತ ನಿಶಾಂತ್‌ ದಂಪತಿ ಹಾಗೂ ಮಗುವಿನೊಂದಿಗೆ ನಿಶಾಂತ್‌ ಕಾರಲ್ಲಿ ಮೈಸೂರು ಕಡೆಗೆ ತೆರಳಿದ್ದಾರೆಂಬ ಮಾಹಿತಿ ಮೇರೆಗೆ ಬೇಗೂರು ಸರ್ಕಲ್‌ ಇನ್ಸ್‌ಪೆಕ್ಟರ್‌ ವಿ.ಸಿ.ವನರಾಜು, ಸಬ್‌ ಇನ್ಸ್‌ಪೆಕ್ಟರ್‌ ಚರಣ್‌ ಗೌಡ ಕಡಕೊಳ ಬಳಿಯ ಟೋಲ್‌ನಲ್ಲಿ ಕಾರು ಪರಿಶೀಲನೆ ನಡೆಸಲು ತೆರಳಿದ್ದಾರೆ.

ನಿಶಾಂತ್ ದಂಪತಿ ಮಾ.೧ ರಂದು ಕಂಟ್ರಿ ಕ್ಲಬ್ ನಲ್ಲಿ ತಂಗಿದ್ದರು. ಸೋಮವಾರ ಬೆಳಗ್ಗೆ ಉಪಹಾರ ಸೇವಿಸಿ ಹೊರಗಡೆ ಹೋಗುವಾಗ ಕಿಡ್ನಾಪ್ ಮಾಡಿದ್ದಾರೆ. ಆದರೆ ಕ್ಲಬ್ ವಸತಿ ಪಡೆಯುವಾಗ ನಿಶಾಂತ್ ಬಿಬಿಎಂಪಿ ಎಫ್‌ಡಿಎ ಎಂದು ಬುಕ್ ಮಾಡಿದ್ದಾನೆ. ಆದರೆ ಆತ ಬಿಬಿಎಂಪಿ ನೌಕರನಲ್ಲ ಎಂದು ತಿಳಿದು ಬಂದಿದೆ ಎನ್ನಲಾಗಿದೆ. ಕಿಡ್ನಾಪ್ ಮಾಡಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ನಿಶಾಂತ್ ರೂಂನಲ್ಲಿ ಮುತ್ತೂಟ್ ಫೈನಾನ್ಸ್ ಚೀಟಿ ಸಿಕ್ಕಿದೆ. ಮುತ್ತೂಟ್ ಬ್ಯಾಂಕ್‌ನಲ್ಲಿ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.