ಕನ್ನಡಪ್ರಭ ವಾರ್ತೆ ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ ಕೀರ್ತಿ ಹಾಗೂ ಭೂತನಾಥ ಕದಮ ದಂಪತಿಗೆ ಊರಿನ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಸಂಘಟನೆ, ಬಹಿಷ್ಕಾರಕ್ಕೆ ಒಳಗಾದ ದಂಪತಿಗೆ ನ್ಯಾಯ ಒದಗಿಸಬೇಕು ಎಂದು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲೂಕಿನ ನಿಡಗಲ್ ಗ್ರಾಮದ ಕೀರ್ತಿ ಹಾಗೂ ಭೂತನಾಥ ಕದಮ ದಂಪತಿಗೆ ಊರಿನ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಸಂಘಟನೆ, ಬಹಿಷ್ಕಾರಕ್ಕೆ ಒಳಗಾದ ದಂಪತಿಗೆ ನ್ಯಾಯ ಒದಗಿಸಬೇಕು ಎಂದು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದ ಕೀರ್ತಿ ಹಾಗೂ ಭೂತನಾಥ ಅವರನ್ನು ಗ್ರಾಮದ ಹಿರಿಯರು ಸಾಮಾಜಿಕ ಕೆಲಸಗಳಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿಲ್ಲ. ಅವರ ಮಗುವಿಗೆ ಗ್ರಾಮದ ಅಂಗನವಾಡಿಯಲ್ಲಿ ಸೇರಿಸುತ್ತಿಲ್ಲ. ಭೂತನಾಥ ಅವರ ತಂದೆ ಮೃತಪಟ್ಟಾಗ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲು ಊರಿನ ಹಿರಿಯರು ಅವರಿಂದ ₹11 ಸಾವಿರ ದಂಡ ಪಡೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ದಂಪತಿ ನೊಂದಿದ್ದು, ಜಿಲ್ಲಾಧಿಕಾರಿಗಳು ದಂಪತಿಯ ಸಮಸ್ಯೆ ಆಲಿಸಿ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಮನವಿ ಸ್ವೀಕರಿಸಿರುವ ಜಿಲ್ಲಾಡಳಿತ ತಾಲೂಕಿನ ಹಿರಿಯ ಅಧಿಕಾರಿಗಳು, ಪೊಲೀಸರ ಜೊತೆಗೆ ಗ್ರಾಮಕ್ಕೆ ತೆರಳಿ ಈ ವಿಷಯದ ಬಗ್ಗೆ ಸ್ಥಾನಿಕ ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆ ತಹಸೀಲ್ದಾರರಿಗೆ ಸೂಚಿಸಿದೆ. ದಂಪತಿ ಬಹಿಷ್ಕಾರದ ಬಗ್ಗೆ ಪ್ರತಿಕ್ರಿಯಿಸಿರುವ ನಿಡಗಲ್ ಗ್ರಾಮದ ಮುಖಂಡರು ಇಬ್ಬರೂ ಒಂದೇ ಮನೆತನಕ್ಕೆ ಸೇರಿದ ದೂರದ ಸಂಬಂಧಿಗಳು. ಸಂಬಂಧದಲ್ಲಿ ಅವರಿಬ್ಬರು ಅಣ್ಣ-ತಂಗಿಯಾಗಿರುವ ಕಾರಣ ಅವರ ಮದುವೆಗೆ ಹಿರಿಯರು ಅವಕಾಶ ನೀಡಿರಲಿಲ್ಲ. ಹಿರಿಯರ ಅಣತಿ ಮೀರಿ ಅವರಿಬ್ಬರು ಮದುವೆಯಾಗಿದ್ದು, ಅಂದಿನಿಂದ ಗ್ರಾಮದ ಸಾಮೂಹಿಕ ಕಾರ್ಯಗಳಲ್ಲಿ ಆ ದಂಪತಿ ಭಾಗವಹಿಸಲು ನಿರ್ಬಂಧ ಹೇರಲಾಗಿದೆ. ಅವರಿಗೆ ಯಾವುದೇ ಬಹಿಷ್ಕಾರ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ