ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ವತಿಯಿಂದ ಡಿಸೆಂಬರ್ 7 ರಂದು 1008 ರೈತ ಕುಟುಂಬದ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸಾಮೂಹಿಕವಿವಾಹ ಸಮಾವೇಶದ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದ ರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಚಾಲಕ ಬಿ.ಟಿ ಚಂದ್ರಶೇಖರ್ ಸಮಾವೇಶಕ್ಕೆ ಭರ ಸಿದ್ದತೆ ನಡೆಯುತ್ತಿದೆ. ವಿವಿಧ ಜಿಲ್ಲೆಗಳಿಂದ ವಿವಾಹಕ್ಕಾಗಿ ಹೆಸರು ನೊಂದಾಯಿಸುವವರು ವಿಳಂಬ ಮಾಡಬಾರದೆಂದರು.
ವಿವಾಹ ಸಮಾವೇಶಕ್ಕೆ ಕಳೆದ ಹಲವಾರು ತಿಂಗಳುಗಳಿಂದ ಸಿದ್ದತೆ ಮಾಡಲಾಗುತ್ತಿದೆ .ಇಂದಿನ ದಿನಮಾನದಲ್ಲಿ ಒಂದು ಮದುವೆ ಎಂದು ಲಕ್ಷಾಂತರ ರೂ ವೆಚ್ಚವಾಗುತ್ತದೆ. ಇದಕ್ಕಾಗಿ ಸಾಲ ಮಾಡಬೇಕು, ಇಲ್ಲವೆ ಇದ್ದ ಜಮೀನು ಮಾರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ವಿವಾಹ ಸಮಾವೇಶ ಏರ್ಪಡಿಸಲಾಗಿದೆ. ಇದರಲ್ಲಿ ಭಾಗವಹಿಸಿ ಯಾವುದೇ ಖರ್ಚು ಇಲ್ಲದೆ ಮದುವೆಯನ್ನು ಮಾಡಿಕೊಳ್ಳ ಬಹುದಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮಕ್ಕೆ ಸುಮಾರು 12 ಕೋಟಿ ವೆಚ್ಚವಾಗಲಿದೆ. ಈಗಾಗಲೇ ಹಲವಾರು ದಾನಿಗಳು ವಸ್ತುಗಳನ್ನು ನೀಡಲು ಮುಂದೆ ಬಂದಿದ್ದಾರೆ. ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತಿ ತೀರ್ಥ ಮಹಾ ಶ್ರೀಗಳ ಆರ್ಶೀವಾದದೊಂದಿಗೆ, ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತಿ ಶ್ರೀಗಳ ಅಧ್ಯಕ್ಷತೆಯಲ್ಲಿ ವಿವಾಹ ಗಳು ನಡೆಯಲಿದೆ. ಧರ್ಮಸ್ಥಳದ ವಿರೇಂದ್ರ ಹೆಗ್ಗಡೆಯವರು 1008 ತಾಳಿ ನೀಡುವುದಾಗಿ ತಿಳಿಸಿದ್ದಾರೆ. ಇದಲ್ಲದೆ ರಾಜ್ಯದ ಹಲವಾರು ಜನತೆ ಈ ಕಾರ್ಯಕ್ರಮಕ್ಕೆ ಸಹಾಯವನ್ನು ಮಾಡಿದ್ದಾರೆ. ವಿವಾಹವಾಗುವ ಮಧು-ವರರಿಗೆ ಪಾತ್ರೆ, ಬಾಂಡೆ ಸಾಮಾಗ್ರಿಗಳು, ವಸ್ತ್ರಗಳ ನೀಡಲಾಗುವುದು. ದಂಪತಿಗಳಿಗೆ ಸುಮಾರು 5 ಲಕ್ಷ ರು ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಂಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದೆಂದರು.
ವಿವಾಹಕ್ಕೆ ವಿವಿಧ ಜಿಲ್ಲೆಗಳಿಂದ ಸುಮಾರು 900 ಅರ್ಜಿಗಳು ಬಂದಿವೆ. ಸಮಿತಿ ಅರ್ಜಿಗಳ ಪರಿಶೀಲನೆ ಮಾಡುತ್ತಿದೆ. ಮದುವೆಗೆ ನಿಗಧಿಯಾದ ವಯಸ್ಸು ಮುಂತಾದ ಪ್ರಮುಖ ಸಂಗತಿಗಳ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಡಿಸೆಂಬರ್ 7 ರಂದು ಬೆಳಿಗ್ಗೆ 10.30 ರಿಂದ 11.30ರವರೆಗೆ ವಿವಾಹ ನಡೆಯಲಿದೆ. ಚಿತ್ರದುರ್ಗ ಹೊರ ವಲಯ ಮಾದಾರ ಚನ್ನಯ್ಯಸ್ವಾಮಿ ಮಠದ ಪಕ್ಕದಲ್ಲಿನ ಬಡಗಿ ಕಾರ್ಮಿಕರ ಸಂಘದ ಜಮೀನಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಎಂದು ಚಂದ್ರಶೇಖರ್ ಹೇಳಿದರು.ಬಡಗಿ ಕಾರ್ಮಿಕರ ಸಂಘದ ಅಧ್ಯಕ್ಷ ಜಾಕೀರ್ ಹುಸೇನ್, ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಮಹಿಳಾ ಘಟಕದ ಅಧ್ಯಕ್ಷೆ ದೇವಮ್ಮ, ರಾಜ್ಯ ವರಿಷ್ಠರಾದ ಮೈಸೂರು ರಮಾನಂದ್, ನ್ಯಾಯವಾದಿ ತೇಜಸ್ವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ , ರಾಜ್ಯ ಸಂಚಾಲಕ ಸಿದ್ದೇಶ್, ರಾಜ್ಯ ಮಹಿಳಾ ಕಾರ್ಯದರ್ಶಿ ಜ್ಯೋತಿ ಪ್ರದೀಪ್, ಕಾರ್ಯದರ್ಶಿ ರಮೇಶ್, ತೇಜು, ರಾಜ್ಯ ಮಹಿಳಾ ಕೃಷಿ ರಾಯಭಾರಿ ಭೂಮಿಕ ದೇಶಪಾಂಡೆ, ಬೆಂಗಳೂರು ಮಹಿಳಾ ನಗರ ಅಧ್ಯಕ್ಷೆ ಲತಾ, ರಾಜ್ಯ ಸಂಚಾಲಕ ಕೃಷ್ಣಮೂರ್ತಿ, ಮಂಜುಳ, ಅಶೋಕ್ ಮಾರುತಿ ಪೂರ್ವ ಸಿದ್ದತಾ ಸಭೆಯಲ್ಲಿ ಪಾಲ್ಗೊಂಡಿದ್ದರು.