ಸಾರಾಂಶ
ಎಂ.ಬಿ.ಅಯ್ಯನಹಳ್ಳಿಯ ಕಾಮಶೆಟ್ಟಿ ವೀರಭದ್ರಪ್ಪ, ಸಂಧ್ಯಾ ದಂಪತಿ ಆಧುನಿಕ ಬೆಳೆಗಳನ್ನು ಬೆಳೆಯುವ ಸೂಕ್ಷ್ಮತೆ ಅರಿತು ಕೃಷಿಯಲ್ಲಿ ಲಕ್ಷಗಟ್ಟಲೇ ಲಾಭ ಪಡೆದುಕೊಂಡು ಪರಿಣಿತಿ ಪಡೆದಿದ್ದಾರೆ.
ಭೀಮಣ್ಣ ಗಜಾಪುರ
ಕೂಡ್ಲಿಗಿ: ನಿರಂತರ ಬರವನ್ನೇ ಹಾಸಿ ಹೊದ್ದು ಮಲಗುವ ಕೂಡ್ಲಿಗಿ ತಾಲೂಕಿನಲ್ಲಿ ಎಂ.ಬಿ. ಅಯ್ಯನಹಳ್ಳಿಯ ರೈತ ದಂಪತಿ 6 ಎಕರೆ ಜಮೀನಿನಲ್ಲಿ ಪಪ್ಪಾಯಿ ಬೆಳೆದು 2 ವರ್ಷದಲ್ಲಿ ₹65 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿ ಸ್ಫೂರ್ತಿಯಾಗಿದ್ದಾರೆ.ತಾಲೂಕಿನ ಎಂ.ಬಿ.ಅಯ್ಯನಹಳ್ಳಿಯ ಕಾಮಶೆಟ್ಟಿ ವೀರಭದ್ರಪ್ಪ, ಸಂಧ್ಯಾ ದಂಪತಿ ಆಧುನಿಕ ಬೆಳೆಗಳನ್ನು ಬೆಳೆಯುವ ಸೂಕ್ಷ್ಮತೆ ಅರಿತು ಕೃಷಿಯಲ್ಲಿ ಲಕ್ಷಗಟ್ಟಲೇ ಲಾಭ ಪಡೆದುಕೊಂಡು ಪರಿಣಿತಿ ಪಡೆದಿದ್ದಾರೆ. ಈ ಮಣ್ಣಿನಲ್ಲಿ ಹೇಗೆ ಹೊಸ ತೋಟಗಾರಿಕೆ ಬೆಳೆಗಳನ್ನು ಬೆಳೆದು ಲಾಭ ಕಂಡುಕೊಳ್ಳಬಹುದು ಎಂದು ಬೇರೆ ರೈತರಿಗೆ ತೋರಿಸಿಕೊಡುವ ಮೂಲಕ ಕೖಷಿ ಎಂದರೆ ನಷ್ಟ ಅಲ್ಲ, ಲಾಭ ಎಂದು ತೋರಿಸಿಕೊಟ್ಟಿದ್ದಾರೆ.
ತನ್ನ 6 ಎಕರೆಯಲ್ಲಿ ಲಾಭ ಕಂಡ ರೈತ ತನ್ನ ಜಮೀನು ಪಕ್ಕದ 13 ಎಕರೆ ಖುಷ್ಕಿ ಜಮೀನನ್ನು ಗುತ್ತಿಗೆ ಪಡೆದು ತನ್ನ ಜಮೀನಿನ ಕೊಳವೆಬಾವಿಗಳಿಂದಲೇ ನೀರು ಹರಿಸಿ ಪಂದ್ರಾ ತಳಿಯ ಪಪ್ಪಾಯಿ ಬೆಳೆದಿದ್ದಾರೆ. ಇನ್ನು ನಾಲ್ಕ್ದೈದು ತಿಂಗಳಲ್ಲಿ ಅದು ಸಹ ಫಲ ಬರಲಿದೆ. ತನ್ನ 6 ಎಕರೆಯಲ್ಲಿ ಪಪ್ಪಾಯಿ ಬೆಳೆಯಲ್ಲಿ ಎರಡೇ ವರ್ಷಗಳಲ್ಲಿ ಎರಡು ಬೆಳೆಗಳನ್ನು ಪಡೆದು ₹10 ಲಕ್ಷ ಖರ್ಚು ತೆಗೆದು ₹65 ಲಕ್ಷ ಲಾಭ ಪಡೆದಿದ್ದಾನೆ. ಈ ಹಿಂದೆಯೂ ದಾಳಿಂಬೆ, ಟೋಮೋಟೋ ಬೆಳೆದು ಲಕ್ಷಗಟ್ಟಲೇ ಲಾಭ ಪಡೆದಿದ್ದಾರೆ. ತೋಟಗಾರಿಕೆ ಕೃಷಿಯಲ್ಲಿ ಪಳಗಿದ ಕೈಯಂತೆ ಕೖಷಿ ಮಾಡುತ್ತಿದ್ದಾರೆ.ಇವರು ಬೆಳೆದ ಪಪ್ಪಾಯಿ ದೆಹಲಿ, ಬೆಂಗಳೂರು ಮುಂತಾದ ಕಡೆಯ ವ್ಯಾಪಾರಸ್ಥರೇ ಬಂದು ಹಣ್ಣು ಕಟಾವು ಮಾಡಿ ತೆಗೆದುಕೊಂಡು ಹೋಗುತ್ತಾರೆ. ಈಗ ಕೆಜಿಗೆ ₹12 ದರ ಇದೆ. ಕೆಜಿಗೆ ₹8 ಸಿಕ್ಕರೂ ರೈತರಿಗೆ ಲಾಭ ಆಗುತ್ತದೆ. ಮಹರಾಷ್ಟ್ರದಿಂದ 8 ಸಾವಿರ ಪಂದ್ರಾ ತಳಿಯ ಪಪ್ಪಾಯಿ ಸಸಿಗಳನ್ನು ತಂದು ನಾಟಿ ಮಾಡಿ 2 ವರ್ಷಗಳಾಗಿದೆ. 2 ವರ್ಷದಲ್ಲಿ ಖರ್ಚು ತೆಗೆದು ರೈತ ದಂಪತಿ ₹65 ಲಕ್ಷ ಲಾಭ ಪಡೆದಿದ್ದಾರೆ.
ಮೊದಲು ಕೃಷಿಯಲ್ಲಿ ನಷ್ಟ ಅನುಭವಿಸಿದೆ. ಪತ್ನಿ ಸಂಧ್ಯಾ ಮಾರ್ಗದರ್ಶನ, ಸಲಹೆ ಮೇರೆಗೆ ಕೃಷಿ ಮಾಡಿ ಯಶಸ್ಸು ಕಂಡಿರುವೆ. ಪಂದ್ರಾ ತಳಿ ಪಪ್ಪಾಯಿಗೆ ಮೆಡಿಸಿನ್ ಔಷಧಿ ಸಿಂಪಡಿಸದೇ ಬೆಳೆದಿದ್ದೇನೆ. ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರ ಮಿಶ್ರಣ ಮಾಡಿ ಗಿಡಕ್ಕೆ ಹಾಕಲಾಗಿದೆ. ಚಳಿಗಾಲದಲ್ಲಿ ಬೂದಿ ರೋಗ, ಎಲೆ ಚುಕ್ಕೆರೋಗ ಬಂದಾಗ ಮಾತ್ರ ಔಷಧಿ ಸಿಂಪಡಿಸಬೇಕು. ಅದನ್ನು ಬಿಟ್ಟರೆ ಈ ತಳಿಗೆ ಯಾವ ರೋಗವೂ ಬರುವುದಿಲ್ಲ ಎನ್ನುತ್ತಾರೆ ಎಂ.ಬಿ.ಅಯ್ಯನಹಳ್ಳಿಯ ರೈತ ಕಾಮಶೆಟ್ಟಿ ವೀರಭದ್ರಪ್ಪ.