ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಬೆಟ್ಟಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಲೂರು ಗ್ರಾಮದಲ್ಲಿ ವಿದ್ಯುತ್ ದೀಪಗಳಿಲ್ಲದೆ ಕತ್ತಲು ಆವರಿಸಿದೆ. ಹತ್ತು ದಿನದ ಗಡುವು ನೀಡಿದ್ದು, ಈ ಅವಧಿಯಲ್ಲಿ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಪಾಲೂರು ಗ್ರಾಮಸ್ಥ ಎನ್.ಎಂ.ಪೊನ್ನಣ್ಣ ಎಚ್ಚರಿಸಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲೂರು - ಕೇಮಾಟ್ ರಸ್ತೆಯಲ್ಲಿ ಹಲವು ವರ್ಷಗಳಿಂದ ಯಾವುದೇ ವಿದ್ಯುತ್ ದೀಪದ ಸೌಲಭ್ಯವಿಲ್ಲದೆ, ವಿದ್ಯುತ್
ದೀಪದ ಸೌಲಭ್ಯಕ್ಕಾಗಿ ಹಲವು ಬಾರಿ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ಲಭಿಸಿಲ್ಲ. ಪಂಚಾಯಿತಿ ಬೇಜವಾಬ್ದಾರಿಯಿಂದ ಗ್ರಾಮಸ್ಥರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ ಎಂದರು.ಗ್ರಾಮದಲ್ಲಿ ವಿದ್ಯುತ್ ದೀಪಗಳು ಇಲ್ಲದೆ ಇಲ್ಲಿ ರಸ್ತೆಗಳು, ಬಸ್ ತಂಗುದಾಣ, ಶಾಲೆ, ಅಂಗನವಾಡಿ ಕೇಂದ್ರ ,ಪುರಾತನ ಇತಿಹಾಸವಿರುವ ವಿಷ್ಣು ದೇವಾಲಯ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯಾಪ್ತಿಯಲ್ಲಿ ಕಗ್ಗತ್ತಲು ಆವರಿಸಿದ್ದು ಅಪರಾಧ ಕೃತ್ಯಗಳು ನಡೆಯುವ ವಾತಾವರಣ ನಿರ್ಮಾಣವಾಗಿದೆ ಎಂದರು.
ಗ್ರಾಮದ ಕೇಮಾಟ್ - ಬಕ್ಕ ಸಂಪರ್ಕ ರಸ್ತೆ ತೀವ್ರ ಹದಗೆಟ್ಟಿದ್ದು ಸಾರ್ವಜನಿಕರು, ಶಾಲಾ ಮಕ್ಕಳಿಗೆ ನಡೆದಾಡಲು ಹಾಗೂ ವಾಹನ ಸಂಚಾರಕ್ಕೆ ತೊಡಕಾಗಿ ತೀರಾ ದುಃಸ್ಥಿತಿಯಿಂದ ಕೂಡಿದ್ದು ರಸ್ತೆ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಗ್ರಾಮಕ್ಕೆ ವಿದ್ಯುತ್ ದೀಪಗಳ ಸೌಲಭ್ಯವನ್ನು ರಸ್ತೆಯ ದುರಸ್ತಿ ಶೀಘ್ರ ನೆರವೇರಿಸಿ ಗ್ರಾಮದ ಸಮಸ್ಯೆಗಳ ಬಗ್ಗೆ ಹತ್ತು ದಿನಗಳ ಒಳಗೆ ಬಗೆಹರಿಸಬೇಕು ಎಂದರು.
ತಪ್ಪಿದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ನೀಡಿ ಬೆಟ್ಟಗೇರಿ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು.ಬೆಟ್ಟಗೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಿ ಎ ರಾಮಣ್ಣ ಮಾತನಾಡಿ, ತಾನು ಸ್ವಂತ ಖರ್ಚಿನಿಂದ ಹಲವಾರು ಬಾರಿ ವಿದ್ಯುತ್ ದೀಪಗಳನ್ನು ಅಳವಡಿಸಿದ್ದೆ. ಆದರೆ ಈಗ ಪಂಚಾಯಿತಿ ನಮ್ಮ ಗ್ರಾಮವನ್ನು ಕಡೆಗಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಸ್ತೆಯ ಬದಿಯಲ್ಲಿ ಹೊರಗಿನಿಂದ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಇದರಿಂದ ನೀರು, ಗಾಳಿ, ಮಣ್ಣು, ಪರಿಸರ ಕಲುಷಿತವಾಗುತ್ತಿದೆ. ಕೃಷಿಕರಿಗೂ ತೊಂದರೆಯಾಗುತ್ತಿದ್ದು ಕೂಡಲೇ ತ್ಯಜ್ಯ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಹಾಗೂ ಸಿಸಿ ಕ್ಯಾಮೆರಾ ಅಳವಡಿಸುವುದು ಸೇರಿದಂತೆ ಪಂಚಾಯತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಪಾಲೂರು ಗ್ರಾಮದ ಗ್ರಾಮಸ್ಥರಾದ ತಿಮ್ಮಯ್ಯ ಪಿ.ಡಿ, ನವೀನ್, ಎಂ .ಯು, ಅಯ್ಯಪ್ಪ ಎಂ ಯು, ಬೋಪಣ್ಣ ಎಂ ಜೆ, ಅಚ್ಚಯ್ಯ ಪಿಯು ಇದ್ದರು.