ಸಾರಾಂಶ
ಚಳ್ಳಕೆರೆ: ತಾಲೂಕಿನ ತಳಕು ಠಾಣಾ ವ್ಯಾಪ್ತಿಯ ಕಾಲುವೆಹಳ್ಳಿಯ ಹೊರವಲಯದಲ್ಲಿ ಇದ್ದಿಲು ಸುಡಲು ಮಹಾರಾಷ್ಟ್ರದಿಂದ ಆಗಮಿಸಿದ್ದ ವಲಸೆ ಕಾರ್ಮಿಕರು ಅಲ್ಲೇ ಟೆಂಟ್ ಹಾಕಿಕೊಂಡು ಇದ್ದಿಲು ಸುಡುವ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದರು. ಭಾನುವಾರ ರಾತ್ರಿ ಕೆಲಸ ಮುಗಿದ ನಂತರ ದಂಪತಿ ಹರಿಶ್ಚಂದ್ರಪ್ಪ ಮತ್ತು ಯಶೋಧಮ್ಮರ ನಡುವೆ ಯಾವುದೋ ವಿಚಾರಕ್ಕೆ ಮಾತಿನ ಚಕುಮುಕಿ ಆರಂಭವಾಗಿ ಜಗಳ ವಿಕೋಪಕ್ಕೆ ಹೋಗಿ ಇಬ್ಬರು ಪರಸ್ವರ ಹೊಡೆದಾಡಿಕೊಂಡಿದ್ದರು. ಅಸ್ವಸ್ಥರಾದ ಇಬ್ಬರನ್ನೂ ಸೋಮವಾರ ಬೆಳಗಿನ ಜಾವ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆ ದಾಖಲಿಸಿದ್ದರು. ಮತ್ತೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದ ಕೆಲವೆ ಗಂಟೆಗಳಲ್ಲಿ ಹರಿಶ್ಚಂದ್ರಪ್ಪ ಮೃತಪಟ್ಟಿದ್ದು, ಹೆಂಡತಿ ಯಶೋಧಮ್ಮ ಅರೆಪ್ರಜ್ಞಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾಳೆ. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರಿಗೆ ಹರಿಶ್ಚಂದ್ರಪ್ಪನ ಸಾವಿಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಹೊಡೆದಾಟದಿಂದ ಸಾವು ಸಂಭವಿಸಿದೆಯೇ ಅಥವಾ ಯಾರಾದರೂ ಮಧ್ಯ ಪ್ರವೇಶಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಡಿವೈಎಸ್ಪಿ ಟಿ.ಬಿ. ರಾಜಣ್ಣ, ವೃತ್ತ ನಿರೀಕ್ಷಕ ಹನುಮಂತ ಶಿರೇಹಳ್ಳಿ, ಪಿಎಸ್‌ಐ ಲೋಕೇಶ್ ಭೇಟಿ ನೀಡಿದ್ದರು. ತಳಕು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.