ಸಾವಿನಲ್ಲೂ ಒಂದಾದ ದಂಪತಿ: ಮುಗಿಲು ಮುಟ್ಟಿದ ಆಕ್ರಂದನ

| Published : Nov 05 2025, 03:30 AM IST

ಸಾವಿನಲ್ಲೂ ಒಂದಾದ ದಂಪತಿ: ಮುಗಿಲು ಮುಟ್ಟಿದ ಆಕ್ರಂದನ
Share this Article
  • FB
  • TW
  • Linkdin
  • Email

ಸಾರಾಂಶ

ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ಸಾವನ್ನಪ್ಪಿರುವ ಘಟನೆ ಬೀಳಗಿ ಪಟ್ಟಣದ ಕಿಲ್ಲಾಓಣಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೀಳಗಿ

ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ಸಾವನ್ನಪ್ಪಿರುವ ಘಟನೆ ಪಟ್ಟಣದ ಕಿಲ್ಲಾಓಣಿಯಲ್ಲಿ ಮಂಗಳವಾರ ನಡೆದಿದೆ. ಬೀಳಗಿ ಪಟ್ಟಣದ ಕಿಲ್ಲಾಓಣಿಯ ಪತ್ತಾರ ಮನೆತನದ ಶಶಿಧರ ಮನೋಹರ ಪತ್ತಾರ (೪೧) ಹಾಗೂ ಸರೋಜಿನಿ ಶಶಿಧರ ಪತ್ತಾರ (೩೮) ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.

ಮಂಗಳವಾರ ರಾತ್ರಿ ೧೨.೩೦ರ ಸುಮಾರಿಗೆ ಶಶಿಧರಗೆ ಎದೆನೋವು ಕಾಣಿಸಿಕೊಂಡಿದೆ. ಆತನ ಪತ್ನಿ ಸರೋಜಿನಿ ಪಕ್ಕದ ಮನೆಯವರನ್ನು ಕರೆದು ಬೀಳಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಚಿಕಿತ್ಸೆ ಫಲಿಸದೆ ಶಶಿಧರ ಅಸುನೀಗಿದ ಸುದ್ದಿಯನ್ನು ಕೇಳಿದ ಸರೋಜಿನಿ ಕುಗ್ಗಿದ್ದರು. ಪತಿಯ ಮೃತದೇಹ ರಾತ್ರಿ ವೇಳೆ ಮನೆಗೆ ಬರುತ್ತಿದ್ದಂತೆ ಕುಸಿದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಲೋ ಬಿಪಿಯಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತ ದಂಪತಿಗೆ ಇಬ್ಬರು ಪುತ್ರರಿದ್ದಾರೆ.

ಬೀಳಗಿ ಪಟ್ಟಣದ ಪ್ರತಿಷ್ಠಿತ ಆಭರಣ ವ್ಯಾಪಾರಿ ದಿವಂಗತ ಪ್ರಭಾಕರ ಟಂಕಸಾಲಿಯವರ ಸಹೋದರಿ ಮಗನಾದ ಶಶಿಧರ ಪತ್ತಾರ ಬಂಗಾರದ ಬಿಲ್ವಾರ ಹಾಗೂ ಪಾಟ್ಲಿ ಮಾಡುವ ಅದ್ಭುತ ಕಲೆ ಹೊಂದಿದ್ದರು. ತಾಲೂಕಿನ ಆಭರಣ ಅಂಗಡಿಯವರು ಪಾಟ್ಲಿ ಮತ್ತು ಬಿಲ್ವಾರ ಮಾಡಿಸೋದು ಇವರ ಹತ್ತಿರವೇ ಎನ್ನುವಂತೆ ಹೆಸರು ಸಂಪಾದಿಸಿದ ಕುಟುಂಬ ಇವರದು.

ಆಕ್ರಂದನ:

ದಂಪತಿ ಸಾವಿನ ಸುದ್ದಿ ತಿಳಿಯುತ್ತಲೇ ಕಿಲ್ಲಾ ಓಣಿಯಲ್ಲಿ ಸಂಬಂಧಿಕರ, ಜನರ ಆಕ್ರಂದನ ಮುಗಿಲು ಮುಟ್ಟಿದೆ. ದಂಪತಿ ಸಾವಿಗೆ ನೂರಾರು ಜನ ಕಂಬನಿ ಮಿಡಿದಿದ್ದಾರೆ. ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.