ಲೋಕ್‌ ಅದಾಲತ್‌ನಲ್ಲಿ ಒಂದಾದ ದಂಪತಿ

| Published : Mar 10 2025, 12:16 AM IST

ಸಾರಾಂಶ

ಬ್ಯಾಂಕಿನಿಂದ ಸಾಲ ಪಡೆದಿದ್ದ ಸುಸ್ತಿದಾರಿಂದ ವಸೂಲಾತಿ ಹಾಗೂ ಇತ್ಯಾರ್ಥಕ್ಕೆ ಸಂಬಂಧಪಟ್ಟಂತೆ ಶನಿವಾರ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಲೋಕ ಅದಾಲತ್ ನಲ್ಲಿ 9 ವರ್ಷಗಳಿಂದ ದೂರವಿದ್ದ ದಂಪತಿ ಮತ್ತೆ ಒಂದಾಗುವ ಮೂಲಕ ನ್ಯಾಯಾಲಯದಲ್ಲಿ ಸಂತಸದ ವಾತಾವರಣವೇ ಸೃಷ್ಟಿಯಾಗಿತ್ತು.

ಕನ್ನಡಪ್ರಭವಾರ್ತೆ ಪಾವಗಡ

ಬ್ಯಾಂಕಿನಿಂದ ಸಾಲ ಪಡೆದಿದ್ದ ಸುಸ್ತಿದಾರಿಂದ ವಸೂಲಾತಿ ಹಾಗೂ ಇತ್ಯಾರ್ಥಕ್ಕೆ ಸಂಬಂಧಪಟ್ಟಂತೆ ಶನಿವಾರ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಲೋಕ ಅದಾಲತ್ ನಲ್ಲಿ 9 ವರ್ಷಗಳಿಂದ ದೂರವಿದ್ದ ದಂಪತಿ ಮತ್ತೆ ಒಂದಾಗುವ ಮೂಲಕ ನ್ಯಾಯಾಲಯದಲ್ಲಿ ಸಂತಸದ ವಾತಾವರಣವೇ ಸೃಷ್ಟಿಯಾಗಿತ್ತು. ಪಾವಗಡದ ಭಾರತೀಯ ಸ್ಚೇಟ್‌ ಬ್ಯಾಂಕ್‌ ಸೇರಿ ಇತರೆ ಅನೇಕ ಬ್ಯಾಂಕ್‌ಗಳ ಸುಸ್ತಿದಾರರ ಸಾಲ ಇತ್ಯಾರ್ಥಗೊಳಿಸುವ ಹಿನ್ನಲೆಯಲ್ಲಿ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ವೇಳೆ ಒಟ್ಟು 665 ಪ್ರಕರಣಗಳು ಇತ್ಯರ್ಥಗೊಂಡಿದ್ದು, 74.29 ಲಕ್ಷ ರು.ಮೊತ್ತದ ದಾವೆಗಳು ಬಗೆಹರಿಯುವ ಮೂಲಕ ಹಲವಾರು ಮಂದಿಗೆ ನ್ಯಾಯ ಕಲ್ಪಿಸಿಕೊಡಲಾಗಿತ್ತು.

ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಅದಾಲತ್‌ನಲ್ಲಿ,ಹಿರಿಯ ಸಿವಿಲ್ ನ್ಯಾಯಾದೀಶ ವಿ.ಮಾದೇಶ ಭಾಗಿಯಾಗಿ ಇವರ ನೇತೃತ್ವದಲ್ಲಿ ಒಟ್ಟು 30 ಪ್ರಕರಣಗಳನ್ನು ಇತ್ಯರ್ಥಪಡಿಸಿದರು.ಇದೇ ವೇಳೆ ಹಲವು ವರ್ಷಗಳಿಂದ ದೂರವಿದ್ದ ಪತಿ-ಪತ್ನಿಗೆ ಬುದ್ದಿವಾದ ಹೇಳುವ ಮೂಲಕ 9 ವರ್ಷಗಳಿಂದ ದೂರವಿದ್ದ ದಂಪತಿ, ನ್ಯಾಯಾಧೀಶರ ಸಲಹೆಯೊಂದಿಗೆ ಮತ್ತೆ ಒಂದಾದ ಪ್ರಸಂಗ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಯಿತು.

ಹಿರಿಯ ವಕೀಲರುಗಳಾದ ಭಗವಂತಪ್ಪ,ವಿ.ಮಲ್ಲಿಕಾರ್ಜುನ್ ಹಾಗೂ ಎಲ್. ಮಾರುತಿ ಅವರ ಸಲಹೆ ಹಾಗೂ ಸಹಕಾರದ ಮೇರೆಗೆ ದೂರವಿದ್ದ ಪತಿ-ಪತ್ನಿ ಮನಸ್ತಾಪ ಮರೆತು ಹೊಸ ಜೀವನ ಆರಂಭಿಸಲು ಒಪ್ಪಿಕೊಂಡರು. ಇದೇ ವಕೀಲರ ಸಮ್ಮುಖದಲ್ಲಿ ನಡೆದ ಅವರ ಪುನರ್ಮಿಲನದ ಸಂಭ್ರಮದಲ್ಲಿ ಹಾರ ಹಾಕಿ,ಸಿಹಿ ಹಂಚುವ ಮೂಲಕ ವಕೀಲರು ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿ ಶುಭಹಾರೈಸಿದರು.

ಪ್ರಧಾನ ಹಾಗೂ ಅಧಿಕ ಸಿವಿಲ್ ನ್ಯಾಯಾಧೀಶರಾದ ಬಿ.ಪ್ರಿಯಾಂಕ, 635 ಪ್ರಕರಣಗಳನ್ನು ಬಗೆಹರಿಸಿ 35.29 ಲಕ್ಷ ರು. ಮೌಲ್ಯದ ದಾವೆಗಳನ್ನು ಇತ್ಯರ್ಥಪಡಿಸಿದರು.

ಇದೇ ವೇಳೆ ಬ್ಯಾಂಕ್ ಸಿಬ್ಬಂದಿಗಳು ಒ.ಟಿ.ಎಸ್. (ಒನ್ ಟೈಮ್ ಸೆಟ್ಲ್ಮೆಂಟ್) ಮೂಲಕ ಸಾಲದ ಬಾಕಿ ಮೊತ್ತವನ್ನು ಇತ್ಯರ್ಥಪಡಿಸಲು ಸಹಕರಿಸಿದರು. ಲೋಕ ಅದಾಲತ್ ಗೆ ಸರ್ಕಾರಿ ವಕೀಲ ಸಣ್ಣೀರಪ್ಪ,ನ್ಯಾಯಾಲಯದ ಜಾವೀದ್ ಅಹಮದ್ ಪತ್ತೇಪುರ್, ರೇವಣಸಿದ್ದಯ್ಯ, ಪರಮೇಶ್ವರ, ಹಿರಿಯ ಶಿರಸ್ತೇದಾರ್ ಪರಮೇಶ್ವರ, ದೇವಾನಂದ, ನರಸಿಂಹಮೂರ್ತಿ, ಜಿ. ಎಸ್.ವೆಂಕಟೇಶ್, ಪ್ರವೀಣ್, ಮಹಂತೇಶ್,ಶ್ರೀನಿವಾಸರೆಡ್ಡಿ, ವಿಜಯಕುಮಾರ್,ಜಗನ್ನಾಥ್, ಜಯಸಿಂಹ,ವರದರಾಜು ಇತರೆ ವಕೀಲರು ಉಪಸ್ಥಿತರಿದ್ದರು.