ಸಾರಾಂಶ
ಆತ್ಮಸ್ಥೈರ್ಯ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಧೈರ್ಯ, ಆತ್ಮವಿಶ್ವಾಸದಿಂದ ಬದುಕು ನಡೆಸಬಹುದು ಎಂದು ತುಮಕೂರು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಮನೋವೈದ್ಯರು ಹಾಗೂ ಸಹ ಪ್ರಾಧ್ಯಾಪಕಿ ಡಾ. ಭಾವನಾ ಪ್ರಸಾದ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಎಲ್ಲಾ ರಂಗಗಳಲ್ಲಿಯೂ ಸ್ಥಾನಮಾನ ಪಡೆದುಕೊಂಡಿರುವ ಮಹಿಳೆ ಒತ್ತಡದ ಜೀವನ, ಸಂಕುಚಿತ ಮನೋಭಾವದಿಂದ ಹೊರಬಂದು ಆತ್ಮಸ್ಥೈರ್ಯ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಧೈರ್ಯ, ಆತ್ಮವಿಶ್ವಾಸದಿಂದ ಬದುಕು ನಡೆಸಬಹುದು ಎಂದು ತುಮಕೂರು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಮನೋವೈದ್ಯರು ಹಾಗೂ ಸಹ ಪ್ರಾಧ್ಯಾಪಕಿ ಡಾ. ಭಾವನಾ ಪ್ರಸಾದ್ ತಿಳಿಸಿದರು. ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾಲೇಜಿನ ಅಂತರಿಕ ದೂರು ಸಮಿತಿ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ತಾವು ಮಲ್ಟಿಟಾಸ್ಕಿಂಗ್ ಮಾಡುತ್ತೇವೆಂಬ ಬರದಲ್ಲಿ ಅನಾವಶ್ಯಕ ಒತ್ತಡವನ್ನು ಅನುಭವಿಸುವುದನ್ನು ಬಿಡಬೇಕು. ಬೇರೆಯವರ ಉಸಾಬರಿ ಬಿಟ್ಟು, ತಮ್ಮ ಸಂತೋಷದ ಬಗ್ಗೆ ಹಾಗೂ ಕೆಲಸದ ಬಗ್ಗೆ ಗಮನಹರಿಸಬೇಕು. ನಮ್ಮ ಸಂತೋಷ ನಮ್ಮ ಕೈಯಲ್ಲಿದ್ದು ನಾವು ಇರುವ ಹಾಗೆಯೇ ನಮ್ಮನ್ನು ಒಪ್ಪಿಕೊಳ್ಳುವುದನ್ನು ಕಲಿಯಬೇಕು. ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಜ್ಞಾನದೊಂದಿಗೆ ಜೀವನ ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕು. ಮೊಬೈಲ್ ಮತ್ತು ಮೀಡಿಯಾಗಳನ್ನು ನಿಮ್ಮ ಒಳಿತಿಗೆ ಹಾಗೂ ಬೆಳವಣಿಗೆಗಾಗಿ ಬಳಸುವುದನ್ನು ಕಲಿಯಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸೈಬರ್ ಕ್ರೈಂ ಮತ್ತು ಲವ್ ಬ್ರೇಕಪ್‌ನಂತ ಸಣ್ಣ ವಿಷಯಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವುದು ವಿಷಾದಕರ ಎಂದರು. ಪ್ರಾಂಶುಪಾಲ ಡಾ. ಜಿ.ಡಿ. ಗುರುಮೂರ್ತಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಅಭ್ಯುದಯದ ಬಗ್ಗೆ ತಂದೆ ತಾಯಿಗಳ ಜವಾಬ್ದಾರಿ ಜೊತೆಗೆ ಸರ್ಕಾರವೂ ಕೂಡ ಅನೇಕ ಸೌಲಭ್ಯಗಳನ್ನು ಹಮ್ಮಿಕೊಂಡಿದೆ. ನಿರ್ಭಯ ವರ್ಕಿಂಗ್ ವುಮನ್ ಹಾಸ್ಟೆಲ್‌ಗಳ ವ್ಯವಸ್ಥೆ ಹೀಗೆ ಹಲವು ಸೌಲಭ್ಯಗಳ ಮುಖಾಂತರ ಸಮಸ್ಯೆಗಳಿಗೆ ಸಮಾಜವು ಸ್ಪಂದಿಸುತ್ತಿದೆ. ತಂದೆ, ತಾಯಂದಿರು ಮಕ್ಕಳನ್ನು ಬೆಳೆಸುವ ರೀತಿ ಸುಧಾರಿಸಬೇಕು. ನಮ್ಮ ಕಾಲೇಜಿನ ಆಂತರಿಕ ದೂರು ಸಮಿತಿಯು ವಿದ್ಯಾರ್ಥಿಗಳಿಗೆ, ಸಿಬ್ಬಂದಿ ವರ್ಗದವರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಲ್ಪತರು ಮಹಾವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಆರ್. ಸಂಗಮೇಶ್ ಮಾತನಾಡಿ, ಹೆಣ್ಣು ಮನೆಯ ಬೆಳಗುವ ದೀಪ. ನಾಲ್ಕು ಗೋಡೆಗೆ ಸೀಮಿತವಾಗಿದ್ದ ಹೆಣ್ಣು ಇಂದು ಎಲ್ಲಾ ಕ್ಷೇತ್ರದಲ್ಲೂ ಛಾಪುಮೂಡಿಸಿ ಪುರುಷರಿಗೆ ಸರಿಸಮನಾಗಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಇರುವ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಶೇ.೫೦ಕ್ಕಿಂತಲೂ ಹೆಚ್ಚಿದ್ದು ನಮ್ಮ ಸಂಸ್ಥೆಯು ಮಹಿಳೆಯರ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಕುಂದುಕೊರತೆಯ ವಿಭಾಗದ ಸದಸ್ಯೆಯರಾದ ಸ್ವರ್ಣಗೌರಿ, ಸುಮನ್, ಸುಮ, ಜಗದಾಂಬ, ಆಂತರಿಕ ದೂರು ಸಮಿತಿಯ ಸದಸ್ಯರಾದ ಡಾ. ದೀಪ್ತಿ ಅಮಿತ್, ಡಾ. ಹನುಂತಪ್ಪ, ಸಿಐಸಿಸಿಯ ಮುಖ್ಯಸ್ಥೆ ಡಾ. ಎಚ್.ಎನ್ ಚಂದ್ರಕಲಾ, ವಕೀಲೆ ಶೋಭಾ ಜಯದೇವ್ ಸೇರಿದಂತೆ ಸದಸ್ಯರುಗಳು ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ಭಾಗವಹಿಸಿದ್ದರು. ನಂತರ ಮಹಿಳಾ ದಿನದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.