ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಯುವಕರಲ್ಲಿ ಕಲೆಗಳ ಬಗ್ಗೆ ನಿರಾಸಕ್ತಿ, ದೃಶ್ಯ ಮಾಧ್ಯಮ, ಮೊಬೈಲ್ ಹಾಗೂ ಟಿವಿ ಹಾವಳಿಯಿಂದ ಕಣ್ಮರೆಯಾಗುತ್ತಿರುವ ನೇಪತ್ಯಕ್ಕೆ ಸರಿಯುತ್ತಿರುವ ಜನಪದ ಕಲೆಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್ ಗೌಡ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಲಿನ ಸಂಸ್ಕೃತಿಕ, ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ಉದ್ಯೋಗ ಮಾಹಿತಿ ಕೋಶ, ಆಂತರಿಕ ಗುಣಮಟ್ಟ ಕೋಶ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಅಂಗವಾಗಿ ಆಯೋಜಿಸಿದ್ದ ಜನಪದ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮಂಡ್ಯ ಜನಪದರ ತವರೂರು. ನಮ್ಮ ಚಡ್ಡಿ ಸಂಸ್ಕೃತಿ ಇಂಡಿಯಾದಲ್ಲಿಯೆ ಫೇಮಸ್. ಇಂತಹ ಸಂಸ್ಕೃತಿಯನ್ನು ಮಂಡ್ಯದ ಜನರಾದ ನಾವುಗಳು ಉಳಿಸಿ ಬೆಳೆಸಬೇಕು. ಪ್ರತಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೂಡಾ ದೇಸಿ ಉಡುಗೆಗಳನ್ನು ತೊಟ್ಟು ಬಂದಿದ್ದೀರಿ. ಎಷ್ಟು ಚಂದ ಕಾಣುತ್ತಿದ್ದೀರಿ. ಇದು ನಿಜವಾಗಿಯೂ ನಮ್ಮ ಮಧ್ಯೆ ಉಳಿಯಬೇಕಾದದ್ದು ಎಂದರು.ಇಂದು ಕೆ.ಆರ್.ಪೇಟೆಯಲ್ಲಿ ಆ ಸಂಸ್ಕೃತಿ ಉಳಿದಿದೆ. ತಾವೇ ತಯಾರಿಸಿ ನಮಗೆ ಊಟವನ್ನು ಬಡಿಸಿದ್ದೀರಿ. ಹುರುಳಿಕಾಳು, ಹಲಸಂದೆ ಕಾಳುಗಳ ಪಲ್ಯ, ರಾಗಿಮುದ್ದೆ, ನಾಟಿಕೋಳಿ ಸಾರು, ಒಬ್ಬಟ್ಟು, ತಂಬಿಟ್ಟು ಒಂದಾ ಎರಡಾ. ಇದು ನಮ್ಮ ಹೆಣ್ಣು ಮಕ್ಕಳ ಸಂಸ್ಕೃತಿ. ಇದು ಹೀಗೆಯೆ ಮುಂದುವರೆಯಲಿ ಎಂದು ಆಶಿಸಿದರು.
ಪಾಶ್ಚಿಮಾತ್ಯ ಮೋಹಕ್ಕೆ ಒಳಗಾಗಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಮರೆಯುತ್ತಿರುವ ಇಂದಿನ ಯುವಜನರಿಗೆ ನಮ್ಮ ನೆಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜಾನಪದ ಕಲೆಗಳ ಬಗ್ಗೆ ತಿಳಿಸಿ ಕೊಡುವುದು ಅಗತ್ಯವಾಗಿದೆ ಎಂದರು.ಶಾಸಕ ಎಚ್.ಟಿ.ಮಂಜು ಮಾತನಾಡಿ, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಮ್ಮ ವಿದ್ಯಾರ್ಥಿ ದಿನದ ನೆನಪುಗಳನ್ನು ಮೆಲುಕು ಹಾಕಿದರು. ದೇಸಿ ಸಂಸ್ಕೃತಿ ಉಳಿವಿಗೆ ಕಾಲೇಜು ಶಿಕ್ಷಣ ಇಲಾಖೆ ಜನಪದ ಉತ್ಸವಗಳನ್ನು ಮಾಡುವ ಮೂಲಕ ಒಳ್ಳೆಯ ಹೆಜ್ಜೆ ಇಟ್ಟಿದೆ. ಜಾನಪದ ನಮ್ಮ ಮೂಲ ಬೇರು. ಇಂದು ಈ ಬೇರನ್ನು ಸಾಯಿಸುವ ಕೆಲಸಗಳು ನಡೆಯುತ್ತಿವೆ. ಯುವಕರು ತಮ್ಮ ಸಂಸ್ಕೃತಿ ಬಿಟ್ಟು ಅನ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರೋಟರಿ ಸಂಸ್ಥೆ ಅಧ್ಯಕ್ಷ ಹಾಗೂ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ ಮಾತನಾಡಿ, ಜಾನಪದ ಕಲೆಗಳು ನಮ್ಮ ಉಸಿರು. ಮೌಡ್ಯವಿಲ್ಲದ ನಮ್ಮ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜಾನಪದ ಹಾಡುಗಳು ಹಾಗೂ ಕಲೆಗಳನ್ನು ಸಂರಕ್ಷಣೆ ಮಾಡಲು ನಾಗರೀಕ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಿ ಕೆಲಸ ಮಾಡಬೇಕು ಎಂದರು.ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಆರಂಭವಾದ ಜನಪದ ಉತ್ಸವಕ್ಕೆ ತಾವೆ ಸ್ವತಃ ಎತ್ತಿನಗಾಡಿ ಚಾಲನೆ ಮಾಡಿಕೊಂಡು ಬಂದ ಶಾಸಕ ಹೆಚ್.ಟಿ.ಮಂಜು ಜಾನಪದ ಕಲಾತಂಡಗಳ ಮೆರವಣಿಗೆ ಉದ್ಘಾಟಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ, ರೋಟರಿ ಕ್ಲಬ್ ಅಧ್ಯಕ್ಷ ಆರ್‌ಟಿಓ ಮಲ್ಲಿಕಾರ್ಜುನ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕೆ.ಎಂ.ವಾಸು, ಪ್ರಾಂಶುಪಾಲ ಡಾ.ವಿ.ವಿ.ಜಗದೀಶ್ ಸೇರಿದಂತೆ ಎಲ್ಲ ಅತಿಥಿಗಳ ಜೊತೆಗೂಡಿ ಮೆರವಣಿಗೆಯಲ್ಲಿ ಸಾಗಿ ಗಮನ ಸೆಳೆದರು.
ಮೆರವಣಿಗೆಯು ಹೊಸಹೊಳಲು ರಸ್ತೆಯಲ್ಲಿನ ಕಾಲೇಜು ಆವರಣ ತಲುಪಿತು. ಕಾಲೇಜನ್ನು ವಿದ್ಯಾರ್ಥಿಗಳು ತಳಿರು ತೋರಣಗಳಿಂದ ಸಿಂಗರಿಸಿದ್ದರು. ರೈತರ ಆಹಾರ ಧಾನ್ಯಗಳ ಸಂಸ್ಕರಣೆಗೆ ಉಪಯೋಗಿಸುವ ಕಣವನ್ನು ಮಾಡಲಾಗಿತ್ತು. ಕಣದಲ್ಲಿ ಭತ್ತದ ರಾಶಿ, ರಾಗಿಯ ರಾಶಿ, ಕಬ್ಬುಗಳು, ರಾಗಿಯ ತೆನೆಗಳು, ಹಿಂದೆ ಗ್ರಾಮೀಣ ಭಾಗದಲ್ಲಿ ಉಪಯೋಗಿಸುತ್ತಿದ್ದ ಮೊರ, ವೊಂದರಿ, ಒನಕೆ, ಮಡಿಕೆಗಳು, ಗುಡಾಣಗಳು ಹೀಗೆ ಹತ್ತು ಹಲವು ಜಾನಪದ ವಸ್ತುಗಳಿಂದ ಸಿಂಗರಿಸಲಾಗಿತ್ತು. ಆವರಣದಲ್ಲಿ ಎತ್ತುಗಳನ್ನು ಕಟ್ಟುವ ಮೂಲಕ ಜಾತ್ರೆಯ ವೈಭವವನ್ನು ತರಿಸಲಾಗಿತ್ತು.ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ವಿ.ವಿ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕೆ.ಎಂ.ವಾಸು, ಪ್ರಾಧ್ಯಾಪಕರಾದ ಡಾ.ಸಿ.ರಮೆಶ್, ಡಾ.ಸವಿತಾ, ಡಾ.ಮಹೇಶ್, ಡಾ.ಜಯಕೀರ್ತಿ, ಎಂ.ಬೋರೇಗೌಡ, ಕುಮಾರಸ್ವಾಮಿ, ಸುರೇಶ್, ಶಿವಕುಮಾರ ಸ್ವಾಮಿ, ರಘು, ಪ್ರಕಾಶ್, ಉಮೇಶ್, ರೂಪಾ, ಪುಷ್ಪ, ಶಿಲ್ಪ, ಪತ್ರಾಂಕಿತ ವ್ಯವಸ್ಥಾಪಕರಾದ ಬಿ.ಎ.ಮಂಜುನಾಥ್, ಜೆ.ಭುವನೇಶ್ವರಿ ಸೃದಿಂತೆ, ಕಾಲೇಜಿನ ಅಧ್ಯಾಪಕ ವರ್ಗ, ಉಪನ್ಯಾಸಕ ವರ್ಗ, ಆಡಳಿತ ಸಿಬ್ಬಂದಿ ವರ್ಗದವರು ಹಾಜರಿದ್ದರು.