ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಪರಾಧ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ ತೀರ್ಪು ಪ್ರಶ್ನಿಸಿ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸುವಲ್ಲಿ ಸಾಕಷ್ಟು ಸಮಯ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಹಲವು ಪ್ರಕರಣಗಳಲ್ಲಿ ಲಕ್ಷಾಂತರ ರುಪಾಯಿ ದಂಡ ವಿಧಿಸುತ್ತಿರುವ ಪರಿಣಾಮ ಅಭಿಯೋಜನಾ ಇಲಾಖೆ ತ್ವರಿತವಾಗಿ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳಿಸುತ್ತಿದೆ.

ಸಂಬಂಧ ಪಟ್ಟ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಮುಂತಾದ ಕಾರಣಗಳಿಂದ ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬದಿಂದ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿರಲಿಲ್ಲ. ಅಪರಾಧಿಕ ನ್ಯಾಯ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ಇಂತಹ ಪ್ರಸಂಗ ತಪ್ಪಿಸಲು ಈಗ ಅಭಿಯೋಜನಾ ಇಲಾಖೆಯಲ್ಲಿ ಹಲವಾರು ಸುಧಾರಣೆ ತರಲಾಗಿದೆ.

ಕೊಲೆ, ಅತ್ಯಾಚಾರ, ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಯಂಥ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಅಧೀನ ನ್ಯಾಯಾಲಯಗಳು ಆರೋಪಿಗಳನ್ನು ಖುಲಾಸೆಗೊಳಿಸಿದ ಅಥವಾ ಕಡಿಮೆ ಶಿಕ್ಷೆ ವಿಧಿಸಿ ಹೊರಡಿಸಿದ ತೀರ್ಪು ಪ್ರಶ್ನಿಸಿ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬ ಮಾಡಿರುವುದಕ್ಕೆ ರಾಜ್ಯ ಅಭಿಯೋಜನಾ ಇಲಾಖೆ, ಗೃಹ ಇಲಾಖೆ, ರಾಜ್ಯ ಅಡ್ವೋಕೇಟ್‌ ಜನರಲ್‌ ಕಚೇರಿ ಮತ್ತು ಸರ್ಕಾರಿ ಅಭಿಯೋಜಕರ ಮೇಲೆ ಹೈಕೋರ್ಟ್‌ ಲಕ್ಷಾಂತರ ರುಪಾಯಿ ದಂಡ ಪ್ರಯೋಗಿಸಿದೆ. ದಂಡ ಮೊತ್ತವನ್ನು ವಿಳಂಬಕ್ಕೆ ಹೊಣೆಯಾದವರಿಂದಲೇ ವಸೂಲಿ ಮಾಡಲು ಸರ್ಕಾರಕ್ಕೆ ಆದೇಶಿಸುತ್ತಿದೆ.


ಹೈಕೋರ್ಟ್‌ನ ಈ ಚಾಟಿ ಏಟಿನಿಂದ ಎಚ್ಚೆತ್ತುಕೊಂಡಿರುವ ಸರ್ಕಾರ, ಅಭಿಯೋಜನಾ ಇಲಾಖೆ, ಗೃಹ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರಿ ಅಭಿಯೋಜಕರು ಮೇಲ್ಮನವಿ ಸಲ್ಲಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತಿದ್ದಾರೆ.

2 ಲಕ್ಷ ದಂಡ ವಿಧಿಸಿದ್ದ ಕೋರ್ಟ್‌:

2016ರಲ್ಲಿ ನಡೆದಿದ್ದ ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ 2024ರ ಏ.25ರಂದು ಹೊರಡಿಸಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು 257 ದಿನ ಕಾಲ ವಿಳಂಬ ಮಾಡಿರುವುದಕ್ಕೆ ರಾಜ್ಯ ಸರ್ಕಾರಕ್ಕೆ 2 ಲಕ್ಷ ರು. ದಂಡ ವಿಧಿಸಲಾಗಿದೆ.

12 ವರ್ಷದ ಅಪ್ರಾಪ್ತೆ ಮೇಲೆ ನಿರಂತರವಾಗಿ ಮೂರು ವರ್ಷ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಯನ್ನು ಖುಲಾಸೆಗೊಳಿಸಿದ ಬೆಂಗಳೂರಿನ ಸೆಷನ್ಸ್‌ ನ್ಯಾಯಾಲಯದ ಆದೇಶ ವಿರುದ್ಧ 642 ದಿನ ವಿಳಂಬವಾಗಿ ಮೇಲ್ಮನವಿ ಸ್ಲಲಿಸಿದಕ್ಕೆ 2 ಲಕ್ಷ ರು. ದಂಡ ಹಾಕಿದೆ. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಕೇವಲ 7 ವರ್ಷ ಜೈಲು ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 535 ದಿನ ವಿಳಂಬ ಮಾಡಿದ್ದಕ್ಕೆ 1 ಲಕ್ಷ ರು. ದಂಡ ವಿಧಿಸಲಾಗಿದೆ. ಮೇಲ್ಮನವಿ ಸಂಬಂಧಿಸಿದ ಕಡತ ಸಲ್ಲಿಸಲು ವಿಳಂಬ ಮಾಡಿರುವುದಕ್ಕೂ ಕನಿಷ್ಠ 5ರಿಂದ 10 ಸಾವಿರ ರು. ದಂಡ ವಿಧಿಸಲಾಗಿದೆ. ಇದು ಕೆಲ ಉದಾಹರಣೆಯಷ್ಟೆ. ಇನ್ನೂ ಹಲವು ಪ್ರಕರಣಗಳಲ್ಲಿ ಸರ್ಕಾರಕ್ಕೆ ಹೈಕೋರ್ಟ್‌ ದೊಡ್ಡ ಮೊತ್ತದ ದಂಡ ವಿಧಿಸಿದೆ.

ಏಕೆ ವಿಳಂಬ?:

ಆರೋಪಿಗಳನ್ನು ಮ್ಯಾಜಿಸ್ಟ್ರೇಟ್‌ ಹಾಗೂ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯ ಖುಲಾಸೆಗೊಳಿಸಿ ಅಥವಾ ಕಡಿಮೆ ಶಿಕ್ಷೆ ವಿಧಿಸಿದಾಗ, 90 ದಿನಗಳಲ್ಲಿ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಬೇಕು. ಖುಲಾಸೆ ಆದೇಶ ಹೊರಬಿದ್ದಾಗ, ಸಂಬಂಧಿಸಿದ ಸಹಾಯಕ ಸರ್ಕಾರಿ ಅಥವಾ ಸರ್ಕಾರಿ ಅಭಿಯೋಜಕರು, ಮೇಲ್ಮನವಿ ಸಲ್ಲಿಸಲು ಅರ್ಹ ಪ್ರಕರಣವೆಂದು ನಿರ್ಧರಿಸಿ ಅಭಿಯೋಜನಾ ಇಲಾಖೆಗೆ ಕಡತ ರವಾನಿಸಬೇಕು. ಆಗ ಇಲಾಖೆಯ ಅಭಿಯೋಜಕರು ಪರಿಶೀಲಿಸಿ, ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆಗೆ ತಿಳಿಸಬೇಕು. ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿ ಗೃಹ ಇಲಾಖೆ ರಾಜ್ಯ ಅಡ್ವೋಕೇಟ್‌ ಜನರಲ್‌ ಕಚೇರಿಗೆ ಆದೇಶ ಕಳುಹಿಸಬೇಕು. ಅಡ್ವೋಕೇಟ್‌ ಜನರಲ್‌ ಪ್ರಕರಣವನ್ನು ನಿರ್ದಿಷ್ಟ ಅಭಿಯೋಜಕರಿಗೆ ನೀಡಿ ಮೇಲ್ಮನವಿ ಸಲ್ಲಿಸಲು ಸೂಚಿಸಬೇಕು. ನಂತರವಷ್ಟೇ ಅಭಿಯೋಜಕರು ಮೇಲ್ಮನವಿ ಸಿದ್ಧಪಡಿಸಿ ಹೈಕೋರ್ಟ್‌ಗೆ ಸಲ್ಲಿಸಬೇಕು. 90ಕ್ಕಿಂತ ಹೆಚ್ಚು ದಿನ ವಿಳಂಬವಾದಾಗ, ಅದನ್ನು ಮನ್ನಿಸಲು ಕೋರಿ ಲಿಮಿಟೇಷನ್‌ ಆ್ಯಕ್ಟ್‌-1963ರ ಸೆಕ್ಷನ್‌ 5 ಅಡಿ ಅರ್ಜಿ ಸಲ್ಲಿಸಬೇಕು. ಆಗ ಹೈಕೋರ್ಟ್‌ ಸರ್ಕಾರಿ ಅಭಿಯೋಜಕರಿಂದ ವಿಳಂಬಕ್ಕೆ ಹೈಕೋರ್ಟ್‌ ಕಾರಣ ಕೇಳುತ್ತದೆ.

ಒಟ್ಟಾರೆ ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬವಾದಾಗ, ಅದಕ್ಕೆ ಸಕಾರಣಗಳು ಇರದಿದ್ದರೆ, ಕರ್ತವ್ಯ ನಿರ್ವಹಣೆಯಲ್ಲಿ ಸರ್ಕಾರದ ಅಧಿಕಾರಿಗಳು, ಅಭಿಯೋಜಕರ ನಿರ್ಲಕ್ಷ್ಯತೆಯಿದ್ದರೆ ಹೈಕೋರ್ಟ್‌ ದಂಡ ಪ್ರಯೋಗಿಸುತ್ತದೆ. ಆ ಮೂಲಕ ವಿಳಂಬವನ್ನು ಮನ್ನಿಸಿ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸುತ್ತದೆ. ----ಕೋಟ್‌---

ಹೈಕೋರ್ಟ್‌ ದೊಡ್ಡ ಮೊತ್ತದ ದಂಡ ವಿಧಿಸುತ್ತಿರುವುದರಿಂದ ಸಾಕಷ್ಟು ಸುಧಾರಣೆಯಾಗಿದೆ. ಸರ್ಕಾರಿ ಅಭಿಯೋಜಕರು, ಅಭಿಯೋಜನಾ ಇಲಾಖೆ ಎಚ್ಚೆತ್ತುಕೊಂಡಿದ್ದು, ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತಿದ್ದಾರೆ.

ಪಿ.ತೇಜೇಶ್‌, ಸರ್ಕಾರಿ ಅಭಿಯೋಜಕರ ಕಚೇರಿ ಹೈಕೋರ್ಟ್‌ ಸರ್ಕಾರಿ ಪ್ಲೀಡರ್‌