ನಗರದ ಹೊರವಲಯದ ರೋರಿಚ್ ಮತ್ತು ದೇವಿಕಾ ರಾಣಿ ಎಸ್ಟೇಟ್‌ನಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳದಂತೆ ಕ್ರಮ ಜರುಗಿಸಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಹೊರವಲಯದ ರೋರಿಚ್ ಮತ್ತು ದೇವಿಕಾ ರಾಣಿ ಎಸ್ಟೇಟ್‌ನಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳದಂತೆ ಕ್ರಮ ಜರುಗಿಸಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.ಬೆಂಗಳೂರಿನ ಆರ್.ಆರ್.ನಗರದ ಐ ಕೇರ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಅರ್ಜಿಗೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸೂಚಿಸಿ ವಿಚಾರಣೆ ಮುಂದೂಡಿದೆ.
ಪರಿಸರ ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ನಗರ ಜಿಲ್ಲೆಯ ಕನಕಪುರ ರಸ್ತೆಯ ತಾತಗುಣಿಯಲ್ಲಿರುವ ರೋರಿಚ್ ಮತ್ತು ದೇವಿಕಾರಾಣಿ ಎಸ್ಟೇಟ್‌ನಲ್ಲಿ 99.17 ಕೋಟಿ ಅಂದಾಜು ವೆಚ್ಚದಲ್ಲಿ ‘ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಕೇಂದ್ರ ನಿರ್ಮಾಣಕ್ಕೆ ಅನುಮೋದನೆ ನೀಡಿ ರಾಜ್ಯ ಸರ್ಕಾರ 2024ರ ಡಿ.24ರಂದು ಆದೇಶಿಸಿತ್ತು.ಈ ಆದೇಶ ಪ್ರಶ್ನಿಸಿರುವ ಅರ್ಜಿದಾರರು, ರೋರಿಚ್ ಮತ್ತು ದೇವಿಕಾ ರಾಣಿ ಎಸ್ಟೇಟ್ ಪಾರಂಪರಿಕ ಜೀವವೈವಿಧ್ಯತೆಯ ತಾಣ. ಅದರ ಪಕ್ಕದಲ್ಲೇ ಬನ್ನೇರುಘಟ್ಟ ಅರಣ್ಯ ಮತ್ತು ಆನೆ ಕಾರಿಡಾರ್ ಪ್ರದೇಶವಿದೆ. ಎಸ್ಟೇಟ್‌ನಲ್ಲಿ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಕೇಂದ್ರ ಯೋಜನೆಯಡಿ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ವಿವಿಧ ಮನೋರಂಜನಾ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ರಷ್ಯಾ ಮತ್ತು ಆಸ್ಟ್ರೀಯಾದ ಸುಮಾರು 25 ಕಲಾವಿದರು ಭಾಗವಹಿಸಲಿದ್ದಾರೆ ಎಂದು ವಿವರಿಸಿದ್ದಾರೆ.
ಈ ಯೋಜನೆಯಡಿ 450 ಕಾರುಗಳ ಪಾರ್ಕಿಂಗ್ ಸೌಲಭ್ಯ ಮತ್ತು ಸ್ಥಳಕ್ಕೆ ಭೇಟಿ ನೀಡುವವರಿಗೆ ವಸತಿ ಸೌಕರ್ಯ ನಿರ್ಮಾಣ ಮಾಡುವ ಪ್ರಸ್ತಾವನೆಯಿದೆ. ಯೋಜನೆ ಜಾರಿಯಾದರೆ, ಅಸಂಖ್ಯ ಪ್ರಮಾಣದಲ್ಲಿ ಸಾರ್ವಜನಿಕರು, ಪ್ರವಾಸಿಗಳು ಹಾಗೂ ಕಲಾವಿದರು ಎಸ್ಟೇಟ್‌ಗೆ ಭೇಟಿ ನೀಡಲು ಅವಕಾಶ ಕಲ್ಪಿಸುತ್ತದೆ. ಇದರಿಂದ ಎಸ್ಟೇಟ್‌ನಲ್ಲಿ ಪರಿಸರ ಹಾನಿಯಾಗಲಿದೆ. ಸಾರ್ವಜನಿಕರು ಮತ್ತು ಕಲಾವಿದರ ಜೀವಕ್ಕೆ ವನ್ಯಜೀವಿಗಳಿಂದ ಅಪಾಯವಾಗುವ ಸಾಧ್ಯತೆಯಿದೆ. ಆದ್ದರಿಂದ ಎಸ್ಟೇಟ್ ಅನ್ನು ಮೀಸಲು ಸಂರಕ್ಷಿತ ಪ್ರದೇಶವನ್ನಾಗಿ ಕಾಪಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರ, ಎಸ್ಟೇಟ್ ಆಡಳಿತ ಮಂಡಳಿಗೆ ನಿರ್ದೇಶಿಸಬೇಕು. ಎಸ್ಟೇಟ್‌ನಲ್ಲಿರುವ ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ವಿಸ್ತೃತವಾದ ವೈಜ್ಞಾನಿಕ ಯೋಜನೆ ಸಿದ್ಧಪಡಿಸಲು ಮಂಡಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.