ಡಿ. 13ರಿಂದ ದಾಂಡೇಲಿಯಲ್ಲಿ ಆಯೋಜಿಸಲು ಉದ್ದೇಶಿಸಿರುವ ಜಿಲ್ಲಾ ಮಟ್ಟದ 25ನೇ ಸಾಹಿತ್ಯ ಸಮ್ಮೇಳನಕ್ಕೆ ಹಲವು ಬಗೆಯ ಅಡ್ಡಿ-ಆತಂಕಗಳು ಎದುರಾಗಿವೆ. ಅಲ್ಲಿನ ಗುಂಪುಗಾರಿಕೆ ಪರಿಣಾಮದಿಂದ ಸಮ್ಮೇಳನದ ವಿಷಯ ಕೋರ್ಟು-ಕಚೇರಿಯ ಮೆಟ್ಟಿಲೇರಿದೆ. ರಾಜ್ಯ ಪರಿಷತ್ ಅನುಮತಿ ಪಡೆದು ಸಮ್ಮೇಳನ ನಡೆಸಿ ಎಂದು ನ್ಯಾಯಾಲಯ ಸೂಚಿಸಿದೆ.

ದಾಂಡೇಲಿ: ಡಿ. 13ರಿಂದ ದಾಂಡೇಲಿಯಲ್ಲಿ ಆಯೋಜಿಸಲು ಉದ್ದೇಶಿಸಿರುವ ಜಿಲ್ಲಾ ಮಟ್ಟದ 25ನೇ ಸಾಹಿತ್ಯ ಸಮ್ಮೇಳನಕ್ಕೆ ಹಲವು ಬಗೆಯ ಅಡ್ಡಿ-ಆತಂಕಗಳು ಎದುರಾಗಿವೆ. ಅಲ್ಲಿನ ಗುಂಪುಗಾರಿಕೆ ಪರಿಣಾಮದಿಂದ ಸಮ್ಮೇಳನದ ವಿಷಯ ಕೋರ್ಟು-ಕಚೇರಿಯ ಮೆಟ್ಟಿಲೇರಿದೆ. ರಾಜ್ಯ ಪರಿಷತ್ ಅನುಮತಿ ಪಡೆದು ಸಮ್ಮೇಳನ ನಡೆಸಿ ಎಂದು ನ್ಯಾಯಾಲಯ ಸೂಚಿಸಿದ್ದು, ಶೀಘ್ರದಲ್ಲಿಯೇ ಅನುಮತಿ ಸಿಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ ಹೇಳಿದ್ದಾರೆ.

ಸಾಹಿತ್ಯ ಪರಿಷತ್ ಅಜೀವ ಸದಸ್ಯರಾದ ಅಕ್ರಮ್ ಖಾನ್, ಸಂದೀಪ ಭಂಡಾರಿ ಮತ್ತು ಪ್ರವೀಣ್ ಕೊಠಾರಿ ಅವರು ಸಮ್ಮೇಳನದ ನ್ಯೂನತೆಗಳ ಬಗ್ಗೆ ಕೋರ್ಟಿನ ಮೋರೆ ಹೋಗಿದ್ದಾರೆ. ಸಮ್ಮೇಳನದ ಆಯೋಜಕರು ರಾಜ್ಯ ಅಧ್ಯಕ್ಷರ ಅನುಮತಿ ಪಡೆಯದೇ ಕಾರ್ಯಕ್ರಮ ಪ್ರಚಾರ ಮಾಡುತ್ತಿದ್ದಾರೆ. ಅಪಾಯಕಾರಿ ಫ್ಲೆಕ್ಸ್‌-ಬ್ಯಾನರ್ ಅಳವಡಿಸಿದ್ದಾರೆ. ಜತೆಗೆ ಪ್ರಚಾರಕ್ಕಾಗಿ ಅನೇಕರಿಂದ ಅನಧಿಕೃತವಾಗಿ ಹಣ ಸಂಗ್ರಹಿಸಿದ್ದಾರೆ ಎಂಬುದು ಅವರ ಆರೋಪ. ಈ ಹಿನ್ನೆಲೆ ನ್ಯಾಯಾಲಯ ಗುರುವಾರ ಕೆಲವು ಫ್ಲೆಕ್ಸ್‌-ಬ್ಯಾನರ್ ತೆರವಿಗೆ ಆದೇಶಿಸಿದ್ದು, ಶುಕ್ರವಾರ ರಾಜ್ಯ ಸಮಿತಿ ಅನುಮತಿ ಪಡೆದು ಸಮ್ಮೇಳನ ಆಯೋಜಿಸುವಂತೆ ಸೂಚಿಸಿದೆ.

ದೂರುದಾರರ ಪರ ವಾದ ಮಾಡಿದ ವಕೀಲ ರಾಘವೇಂದ್ರ ಗಡೆಪ್ಪನವರ ಅವರು ಕಸಾಪ ನಿಯಮಾವಳಿ ಪ್ರಕಾರ ಸಮ್ಮೇಳನ ನಡೆಸಲು ಅಧ್ಯಕ್ಷರ ಅಥವಾ ಆಡಳಿತಾಧಿಕಾರಿಯ ಸ್ಪಷ್ಟ ಅನುಮತಿ ಅಗತ್ಯ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದಾರೆ. ಸಮ್ಮೇಳನದ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ಕೆ.ಎಚ್. ಪಾಟೀಲ್ ಅವರು ಸಮ್ಮೇಳನಕ್ಕೆ ಎರಡು ತಿಂಗಳಿನಿಂದ ನಿರಂತರ ಪ್ರಯತ್ನ ನಡೆದಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಸದ್ಯ ಕಸಾಪಕ್ಕೆ ಸರ್ಕಾರ ಆಡಳಿತಾಧಿಕಾರಿ ನೇಮಿಸಿದ್ದು, ಈ ಹಿನ್ನೆಲೆ ನ್ಯಾಯಾಲಯ ಅನುಮತಿ ತಂದು ಒಪ್ಪಿಸಿ ಎಂದು ಸೂಚಿಸಿದೆ.

ಸಮ್ಮೇಳನ ನಡೆಸುವ ಬಗ್ಗೆ ಅನೇಕ ಸಭೆ ನಡೆದಿದೆ. ಶಾಸಕರು ಸೇರಿ ಅನೇಕರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ. ಕಳೆದ ಎರಡು ದಿನಗಳಿಂದ ಸಮ್ಮೇಳನದ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದು, ಸಮ್ಮೇಳನದ ಮೂಲಕವೇ ಅದಕ್ಕೆ ಉತ್ತರ ಕೊಡಲಿದ್ದೇವೆ ಎಂದು ಬಿ.ಎನ್‌. ವಾಸರೆ ಹೇಳಿದ್ದಾರೆ. ಸಮ್ಮೇಳನಕ್ಕೆ ತಡೆಯಾಜ್ಞೆ ತರಲು ಅಕ್ರಂ ಖಾನ್ ಪ್ರಯತ್ನಿಸುತ್ತಿದ್ದು, ಇದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೆಲವು ಸಂಗತಿಗಳನ್ನು ತಿರುಚಿ ಪ್ರಚಾರ ಮಾಡಲಾಗಿದೆ. ವಕೀಲರಾದ ಕೆ.ಎಚ್. ಪಾಟೀಲ ಅವರು ಸುದೀರ್ಘ ವಾದ ಮಂಡಿಸಿ ಸಮ್ಮೇಳನಕ್ಕೆ ಅಡ್ಡಿ ಆಗದ ಹಾಗೇ ಮಾಡಿದ್ದಾರೆ. ನ್ಯಾಯಾಲಯ ಸೂಚಿಸಿದ ಅನುಮತಿಯನ್ನು ಸಹ ಒಪ್ಪಿಸಲು ಬದ್ಧ ಎಂದು ಬಿ.ಎನ್. ವಾಸರೆ ಅವರು ಮಾಧ್ಯಮದವರ ಬಳಿ ಹೇಳಿದ್ದಾರೆ. ಸಮ್ಮೇಳನಕ್ಕೆ ಯಾವುದೇ ಸಮಸ್ಯೆ ಇಲ್ಲ. ಸಮ್ಮೇಳನ ಸಹಜವಾಗಿ ನಡೆಯಲಿದ್ದು, ಎಲ್ಲರೂ ಬನ್ನಿ ಎಂದು ಅವರು ಕರೆ ನೀಡಿದ್ದಾರೆ.

ಸೂಕ್ತ ಇಲಾಖೆಯಿಂದ ಅನುಮತಿ ಪಡೆದು ಸಮ್ಮೇಳನ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ. ಅದರ ಪ್ರಕಾರ, ಅನುಮತಿಯನ್ನು ನ್ಯಾಯಾಲಯಕ್ಕೆ ಒದಗಿಸಿ ಸಮ್ಮೇಳನ ನಡೆಸಲು ಬದ್ಧ ಎಂದು ವಕೀಲ ಕೆ.ಎಚ್. ಪಾಟೀಲ್ ಅವರು ಮಾಧ್ಯಮಗಳಿಗೆ ವಿವರಿಸಿದರು. ಈಗಾಗಲೇ ಕೆಲವು ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲಾಗಿದೆ. ಅನುಮತಿ ಪಡೆದ ದೃಢೀಕೃತ ಪ್ರತಿಗಳ ಜತೆ ಅಧ್ಯಕ್ಷರ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಒದಗಿಸುತ್ತೇವೆ ಎಂದು ವಿವರಿಸಿದರು. ಸಮ್ಮೇಳನಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.