ಸಾರಾಂಶ
ಬೆಂಗಳೂರು : ಗೂಂಡಾ ಕಾಯ್ದೆ ಅಡಿ ಕೋಲಾರದ ಕೆಜಿಎಫ್ ಮೂಲದ ಶರತ್ ಕುಮಾರ್ ಎಂಬಾತನನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ಹೈಕೋರ್ಟ್ ಊರ್ಜಿತಗೊಳಿಸಿದೆ.
ಗೂಂಡಾ ಕಾಯ್ದೆಯಡಿ ಶರತ್ ಕುಮಾರ್ ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆಕ್ಷೇಪಿಸಿ ಆತನ ಪತ್ನಿ ನಂದಿನಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.
ಶರತ್ ಕುಮಾರ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 45 ಪ್ರಕರಣಗಳು ಬಾಕಿಯಿದೆ. ಮುನ್ನೆಚ್ಚರಿಕೆಯಿಂದ ಅರ್ಜಿದಾರರನ್ನು ಬಂಧಿಸಲಾಗಿದೆ. ಸಮಾಜದಲ್ಲಿ ಶಾಂತಿ ಸ್ಥಾಪನೆಯೇ ಮುನ್ನೆಚ್ಚರಿಕೆ ಬಂಧನದ ಉದ್ದೇಶವಾಗಿರುತ್ತದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ ಬೆಂಗಳೂರು ನಗರದಲ್ಲಿ ಅಪರಾಧ ಚಟುವಟಿಕೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಹಾಗಾಗಿ, ಅರ್ಜಿದಾರರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವ ಕ್ರಮ ಕ್ರಮ ಸರಿಯಿದೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ಸಮಾಜದಲ್ಲಿನ ಅತ್ಯಂತ ಸೂಕ್ಷ್ಮ ವರ್ಗವಾಗಿರುವ ಮಹಿಳೆಯರು, ಮಕ್ಕಳು ಮತ್ತು ವಯೋವೃದ್ಧರು ಬಹಳ ಬೇಗ ತೊಂದರೆಗೆ ಸಿಲುಕುತ್ತಾರೆ . ಅವರಿಗೆ ಅಭದ್ರತೆ ಕಾಡುತ್ತದೆ. ಅಂತಹವರ ರಕ್ಷಣೆಗೆ ಹೆಚ್ಚಿನ ಕಣ್ಗಾವಲು ಅತ್ಯಗತ್ಯ. ಹಾಗಾಗಿ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಬಂಧನದಂತಹ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.