ಅಧಿಕಾರಿಗಳ ತಪ್ಪಿಗೆ ಸಾರ್ವಜನಿಕರ ನ್ಯಾಯಲಯ ಅಲೆದಾಟ

| Published : Jan 12 2024, 01:46 AM IST

ಸಾರಾಂಶ

ಪುರಸಭೆಗೆ ಸೇರಿದ ಸುಮಾರು 82 ಮಳಿಗೆಗಳಿವೆ. ಮೂರು ದಶಕಗಳ ಹಿಂದೆ ನಿಗಧಿಪಡಿಸಿದ್ದ ಬಾಡಿಗೆಯನ್ನೇ ಈಗಲೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಇದರಿಂದ ಪುರಸಭೆ ಆದಾಯ ಕ್ಷೀಣಿಸುತ್ತಿದೆ.

ಪುರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಜನರ ಬೇಸರ

ಕನ್ನಡಪ್ರಭ ವಾರ್ತೆ ಪಾಂಡವಪುರ

ಅಧಿಕಾರಿಗಳು ಮಾಡುವ ತಪ್ಪಿಗೆ ಸಾರ್ವಜನಿಕರು ವರ್ಷಾನುಗಟ್ಟಲೇ ನ್ಯಾಯಾಲಯ ಅಲೆಯಬೇಕಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮುಖ್ಯಾಧಿಕಾರಿ ವೀಣಾ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ನಿರೀಕ್ಷಿತ ಆದಾಯ ಮತ್ತು ಖರ್ಚುಗಳ ಜತೆಗೆ ಪುರಸಭೆ ಆದಾಯದ ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಸಂಪನ್ಮೂಲ ಕ್ರೂಡೀಕರಣದಲ್ಲಿ ಅಧಿಕಾರಿಗಳು ವಿಫಲರಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಪುರಸಭೆಗೆ ಸೇರಿದ ಸುಮಾರು 82 ಮಳಿಗೆಗಳಿವೆ. ಮೂರು ದಶಕಗಳ ಹಿಂದೆ ನಿಗಧಿಪಡಿಸಿದ್ದ ಬಾಡಿಗೆಯನ್ನೇ ಈಗಲೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಇದರಿಂದ ಪುರಸಭೆ ಆದಾಯ ಕ್ಷೀಣಿಸುತ್ತಿದೆ. ಮಳಿಗೆಗಳಿಗೆ ಈಗಿನ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬಾಡಿಗೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಸಂತೆ ಮೈದಾನದಲ್ಲಿ ವ್ಯಾಪಾರ ಮಾಡುವ ರೈತರು ಮತ್ತು ವ್ಯಾಪಾರಸ್ಥರಿಂದ ಪುರಸಭೆಗೆ ಸಾಕಷ್ಟು ಹಣ ಬರುತ್ತಿದೆ. ಆದರೆ, ಮಳೆ ಬಂದಾಗ ಸಂತೆಮಾಳದಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಕೆಸರು ಆವರಿಸುತ್ತದೆ. ಹೀಗಾಗಿ ಸಂತೆಮೈದಾನ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಲೈಟ್ ಅಳವಡಿಕೆ, ಹಳ್ಳ ಕೊಳ್ಳಗಳಿಂದ ಕೂಡಿರುವ ರಸ್ತೆ ಅಭಿವೃದ್ಧಿ, ಹಾರೋಹಳ್ಳಿಗೆ ಸ್ಮಶಾನ ಮಂಜೂರಾತಿ, ಪಟ್ಟಣದಲ್ಲಿರುವ ಸ್ಮಶಾನಗಳಿಗೆ ಮೂಲ ಸೌಕರ್ಯ ಒದಗಿಸುವುದು, ಪುರಸಭೆಗೆ ಸೇರಿದ ನಿವೇಶನಗಳು ಒತ್ತುವರಿಯಾಗಿವೆ. ತೆರವುಗೊಳಿಸಲು ಅಗತ್ಯ ಕ್ರಮ ವಹಿಸಬೇಕು ಎಂದರು.

ಬೀದಿದೀಪಗಳ ನಿರ್ವಹಣೆ, ಪುರಸಭೆಯಲ್ಲಿ ಅಕ್ರಮವಾಗಿ ಖಾತೆ ಮತ್ತು ಇ-ಸ್ವತ್ತು ಮಾಡಿಕೊಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಆಗ್ರಹಿಸಿದರು.

ಪುರಸಭೆ ಮುಖ್ಯಾಧಿಕಾರಿ ವೀಣಾ ಮಾತನಾಡಿ, ಮಳಿಗೆಗಳ ಬಾಡಿಗೆ ನಿಗಧಿಪಡಿಸಿ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಬಳಿಕ ಮರುಹರಾಜು ನಡೆಸಿ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬಾಡಿಗೆ ವಸೂಲಿ ಮಾಡಲಾಗುವುದು ಎಂದರು.

ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಮುಖ್ಯಾಧಿಕಾರಿಗಳು ಅನೇಕ ತಪ್ಪುಗಳನ್ನು ಎಸಗಿದ್ದಾರೆ. ನಾನು ಬಂದ ಮೇಲೆ ಸುಧಾರಣೆ ಮಾಡಿದ್ದೇನೆ. ಪ್ರತಿಯೊಂದು ಮನೆಗೂ ನೀರು ಕೊಡುವ ಉದ್ದೇಶದಿಂದ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ರಸ್ತೆ ಡಾಂಬರೀಕರಣ ಕಾಮಗಾರಿ ಸ್ಥಗಿತಗೊಂಡಿದೆ. ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡ ಬಳಿಕ ಸುಮರು 4.5 ಕಿಮೀ ರಸ್ತೆ ಡಾಂಬರೀಕರಣ ಮಾಡಲಾಗುವುದು ಎಂದು ತಿಳಿಸಿದರು.

11.37 ಕೋಟಿ ನಿರೀಕ್ಷಿತ ಆದಾಯ:

ಆಸ್ತಿ ತೆರಿಗೆ, ಮಳಿಗೆ ಬಾಡಿಗೆ, ನೀರಿನ ಕಂದಾಯ, ನಲ್ಲಿ ಸಂಪರ್ಕ, ಅಭಿವೃದ್ಧಿ ಶುಲ್ಕ, ಕಟ್ಟಡ ಮತ್ತು ಉದ್ದಿಮೆ ಪರವಾನಗಿ, ಎಸ್.ಡಬ್ಲ್ಯೂಎಂ ಮತ್ತು ಯುಜಿಡಿ ಶುಲ್ಕ, ಪಾರ್ಕಿಂಗ್, ಸಂತೆ ಹರಾಜು, ದಿನವಹಿ ನೆಲವಳಿ ಶುಲ್ಕ ಸೇರಿದಂತೆ ಇತರೆ ಆದಾಯಗಳಿಂದ 2.87 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಎಸ್‌ಎಫ್‌ಸಿ ಮುಕ್ತನಿಧಿ, 15ನೇ ಹಣಕಾಸು ಅನುದಾನ, ಕುಡಿಯುವ ನೀರು ಅನುದಾನ, ನಗರೋತ್ಥಾನ ಅನುದಾನ, ಎಸ್‌ಎಫ್‌ಸಿ ವೇತನ ಅನುದಾನ ಹಾಗೂ ಎಸ್‌ಎಫ್‌ಸಿಯು ವಿದ್ಯುಚ್ಛಕ್ತಿ ಅನುದಾನದಿಂದ 8.50 ಕೋಟಿ ಸೇರಿದಂತೆ ಒಟ್ಟಾರೆ 11.37 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ. ಈ ಪೈಕಿ ನಿರೀಕ್ಷಿತ ವೆಚ್ಚ 11.29 ಕೋಟಿಗಳಾಗಿದ್ದು, 7.50 ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ ಎಂದರು.

ಸಭೆಯಲ್ಲಿ ಪುರಸಭೆ ಸದಸ್ಯರಾದ ಉಮಾಶಂಕರ್, ಜಯಲಕ್ಷ್ಮಮ್ಮ, ಎಲ್.ಅಶೋಕ್, ಗೀತಾ, ಜ್ಯೋತಿಲಕ್ಷ್ಮೀ, ಸರಸ್ವತಿ, ಸಾರ್ವಜನಿಕರಾದ ಲಕ್ಷ್ಮಯ್ಯ, ಜಯರಾಮು, ಎನ್,ಭಾಸ್ಕರ್, ನಾರಾಯಣಗೌಡ ಇತರರು ಇದ್ದರು.

----------

11ಕೆಎಂಎನ್ ಡಿ25

ಪಾಂಡವಪುರ ಪುರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಬಜೆಟ್‌ಗೆ ಸಂಬಂಧಿಸಿದಂತೆ ಸಲಹೆ ಸೂಚನೆ ನೀಡಿದರು.