ಕೊರೋನಾ: ತನಿಖಾ ಆಯೋಗಅವಧಿ ಮತ್ತೆ 3 ತಿಂಗಳು ವಿಸ್ತರಣೆ

| Published : May 27 2024, 01:01 AM IST / Updated: May 27 2024, 05:41 AM IST

covid 19
ಕೊರೋನಾ: ತನಿಖಾ ಆಯೋಗಅವಧಿ ಮತ್ತೆ 3 ತಿಂಗಳು ವಿಸ್ತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊರೋನಾ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆಗೆ ರಚಿಸಿರುವ ಆಯೋಗದ ಅವಧಿಯನ್ನು ಎರಡನೇ ಬಾರಿಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದ್ದು, ಮೇ 25ಕ್ಕೆ ಮುಗಿದಿದ್ದ ಅವಧಿಯನ್ನು ಆಗಸ್ಟ್‌ 31ಕ್ಕೆ ವಿಸ್ತರಿಸಿದೆ.

 ಬೆಂಗಳೂರು : ಕೊರೋನಾ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆಗೆ ರಚಿಸಿರುವ ಆಯೋಗದ ಅವಧಿಯನ್ನು ಎರಡನೇ ಬಾರಿಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದ್ದು, ಮೇ 25ಕ್ಕೆ ಮುಗಿದಿದ್ದ ಅವಧಿಯನ್ನು ಆಗಸ್ಟ್‌ 31ಕ್ಕೆ ವಿಸ್ತರಿಸಿದೆ.

ಕೊರೋನಾ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ವರದಿಯಲ್ಲಿರುವ ಅಂಶಗಳ ಜತೆಗೆ ಒಟ್ಟು ಹಗರಣದ ತನಿಖೆಗಾಗಿ ಕಳೆದ ವರ್ಷದ ಆ.25 ರಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹಾ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಲಾಗಿತ್ತು. ತನಿಖಾ ಆಯೋಗದ ಅವಧಿಯನ್ನು 2023ರ ನ.22 ರಂದು ಮೊದಲ ಬಾರಿಗೆ ವಿಸ್ತರಣೆ ಮಾಡಲಾಗಿತ್ತು. ಇದೀಗ ಮೇ 25ರಿಂದ ಅನ್ವಯವಾಗುವಂತೆ ಆ.31ರವರೆಗೆ ಎರಡನೇ ಬಾರಿಗೆ ವಿಸ್ತರಿಸಿರುವುದಾಗಿ ತಿಳಿದುಬಂದಿದೆ.

ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕೊರೋನಾ ನಿಯಂತ್ರಣ ಹೆಸರಿನಲ್ಲಿ ನಡೆದಿರುವ ಔಷಧ ಮತ್ತು ಉಪಕರಣ ಖರೀದಿ, ಆಮ್ಲಜನಕ ಕೊರತೆಯಿಂದ ಉಂಟಾದ ಸಾವು, ಅಧಿಕಾರಿಗಳ ನಿರ್ಲಕ್ಷ್ಯ ಇತ್ಯಾದಿಗಳ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ವರದಿ ನೀಡಿತ್ತು. ಈ ವರದಿ ಆಧರಿಸಿ ಅಕ್ರಮಗಳ ತನಿಖೆಗೆ ಆಗ್ರಹ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖಾ ಆಯೋಗ ರಚಿಸಲಾಗಿದೆ.