ಸಾರಾಂಶ
ಯಲ್ಲಾಪುರ: ಗೋವಿನ ರಕ್ಷಣೆಯ ಹಿಂದೆ ಧರ್ಮದ ರಕ್ಷಣೆಯೂ ಇದೆ. ಗೋವಿನ ನಾಶದ ಹಿಂದೆ ಮನುಷ್ಯನ ಭವಿಷ್ಯತ್ತಿಗೆ ಅಪಾಯವೂ ಇದೆ. ಅಲ್ಲದೇ, ಇದು ಮಾನವ ಕುಲಕ್ಕೆ ಆಘಾತ ಉಂಟು ಮಾಡುವ, ಪ್ರಜ್ಞಾವಂತರು ಚಿಂತನೆ ಮಾಡುವ ಕಾಲಘಟ್ಟ ಬಂದೊದಗಿದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನುಡಿದರು.ಫೆ. ೩ರಂದು ತಾಲೂಕಿನ ಮದನೂರು ಗ್ರಾಪಂ ವ್ಯಾಪ್ತಿಯ ಕರಡೊಳ್ಳಿಯಲ್ಲಿರುವ ಸ್ವರ್ಣವಲ್ಲೀ ಮಹಾಸಂಸ್ಥಾನದ ಗೋವರ್ಧನ ಗೋಶಾಲೆಯಲ್ಲಿ ಸುಮಾರು ₹೧ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸ್ವರ್ಣ ನಂದಿನಿ ಗೋಶಾಲೆಯ ನಿಯೋಜಿತ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ, ಆಶೀರ್ವಚನ ನೀಡಿದರು.ಗೋವುಗಳು ಕ್ಷೀಣಿಸಿದಂತೆ ಮಾನವನ ಆರೋಗ್ಯವೂ ಕ್ಷೀಣಿಸುತ್ತದೆ. ಇದನ್ನು ಆಯುರ್ವೇದ ಸೇರಿದಂತೆ ಎಲ್ಲ ವೈದ್ಯಕೀಯ ಪ್ರಪಂಚವೂ ದೃಢಪಡಿಸಿದೆ. ದೇಶೀ ಗೋವುಗಳ ಹಾಲು ನಮಗೆ ಹೆಚ್ಚು ಶ್ರೇಷ್ಠವಾದದ್ದು. ಹಾಗಂತ ಬೆಣ್ಣೆಯೂ ಕಡಿಮೆ ಪ್ರಮಾಣದಲ್ಲಿ ಬರುತ್ತದೆ. ಆದರೆ ಬೇರೆ ತಳಿಗಳ ಹಾಲು ಆರೋಗ್ಯಕ್ಕೆ ಅಷ್ಟು ಪರಿಪೂರ್ಣ ಅಲ್ಲ ಎಂಬುದನ್ನು ತಿಳಿದಿದ್ದೇವೆ. ಆದರೂ ಯಾವುದೇ ಗೋವನ್ನಾದರೂ ಪ್ರತಿ ಮನೆಗಳಲ್ಲಿ ಸಾಕಬೇಕು. ಸದಾ ಗೋವಿನ ರಕ್ಷಣೆ ಮಾಡಬೇಕು. ಇದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು.ಸೀಮಾಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋವರ್ಧನ ಗೋಶಾಲೆಯ ಕಾರ್ಯಾಧ್ಯಕ್ಷ ರಾಮಕೃಷ್ಣ ಭಟ್ಟ ಕವಾಳೆ ದಂಪತಿಗಳು ಶ್ರೀಗಳಿಗೆ ಫಲ ಸಮರ್ಪಿಸಿದರು. ಸಮಿತಿಯ ಪ್ರಮುಖರಾದ ಎಲ್.ಪಿ. ಭಟ್ಟ ಗುಂಡ್ಕಲ್, ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ಎಂ.ಎನ್. ಭಟ್ಟ ಕವಾಳೆ, ರಾಮಕೃಷ್ಣ ಭಟ್ಟ ಕವಡಿಕೆರೆ, ವಿ.ಎನ್. ಭಟ್ಟ ಆರತಿಬೈಲ ಸೇರಿದಂತೆ ಗೋ ಭಕ್ತರು ಭಾಗವಹಿಸಿದ್ದರು. ಶ್ರೀಗಳು ಗೋಶಾಲೆಗೆ ಬರುವ ಮುನ್ನ ಗೋಶಾಲೆಯ ಸನಿಹದಲ್ಲೇ ಕಾಡಿನ ಮಧ್ಯದಲ್ಲಿರುವ ಸುಮಾರು ೨೦೦೦ ವರ್ಷಗಳ ಹಿಂದಿನ ಶಿವಲಿಂಗ ಇತ್ತೀಚೆಗೆ ಸ್ಥಳೀಯರ ಗಮನಕ್ಕೆ ಬಂದ ಪರಿಣಾಮ, ಶ್ರೀಗಳು ಸ್ಥಳಕ್ಕೆ ಹೋಗಿ ಶಿವಲಿಂಗದ ದರ್ಶನ ಪಡೆದು, ಅಭಿವೃದ್ಧಿಯ ಕುರಿತು ಸ್ಥಳೀಯ ಮುಖಂಡರಿಗೆ ಮಾರ್ಗದರ್ಶನ ನೀಡಿದರು. ದೇವಸ್ಥಾನದ ಕ್ಷೇತ್ರ ಶುದ್ಧಿ ಕಾರ್ಯಕ್ರಮ
ಶಿರಸಿ: ತಾಲೂಕಿನ ಎಕ್ಕಂಬಿ ಗ್ರಾಮದ ಏಕಾಂಬಿಕಾ ಮಹಾಸತಿ ದೇವಸ್ಥಾನದ ಕ್ಷೇತ್ರ ಶುದ್ಧಿ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಮಂಗಳವಾರ ಹಾಗೂ ಬುಧವಾರ ಎರಡು ದಿನ ನಡೆದ ಕಾರ್ಯಕ್ರಮವು ವೇದಮೂರ್ತಿ ಶಂಕರ ಭಟ್ಟ ಪೌರೋಹಿತ್ಯದಲ್ಲಿ ಕ್ಷೇತ್ರ ಶುದ್ಧಿ, ದೋಷ ಉಚ್ಚಾಟನೆ, ದೃಢ ಸಂಪ್ರೋಕ್ಷಣ, ತತ್ವ ಕಲಾನ್ಯಾಸ ಹಾಗೂ ಶಾಂತಿ ಪ್ರಾಯಶ್ಚಿತ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಕುಂಭ ಮೇಳಕ್ಕೆ ಚಾಲನೆ ನೀಡಿ ದೇವರ ದರ್ಶನ ಪಡೆದರು. ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ, ಶ್ರೀದೇವಿಯ ಮಹಾಪೂಜೆಯಲ್ಲಿ ಭಾಗಿಯಾಗಿ ಭಕ್ತಾದಿಗಳೊಂದಿಗೆ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು.ಪ್ರಮುಖರಾದ ಮಂಗಳಾ ನಾಯ್ಕ, ಬನವಾಸಿ ಆರ್‌ಎಫ್‌ಒ ಭವ್ಯಾ ನಾಯ್ಕ, ಶಿರಸಿ ಗ್ರಾಮೀಣ ಠಾಣೆ ಪಿಐ ಸೀತಾರಾಮ ಪಿ., ಬಿಸಲಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು, ದೇವಿಯ ದರ್ಶನ ಪಡೆದು, ಅನ್ನಪ್ರಸಾದ ಸ್ವೀಕರಿಸಿ ಪುನೀತರಾದರು. ಸಂಜೆ 7 ಗಂಟೆಯಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.