ಗೊಲ್ಲರ ಗೋಕುಲದಲ್ಲಿ ಗೋಮುಖ ವ್ಯಾಘ್ರ

| Published : Apr 16 2025, 12:43 AM IST

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಹಾಗೂ ಗೊಲ್ಲ ಸಮಾಜದ ಮುಖಂಡ ಎ.ಉಮಾಪತಿ ಮಾತನಾಡಿದರು.

ಮೀಸೆ ಮಹಲಿಂಗಪ್ಪ ವಿರುದ್ಧ ಮಾಜಿ ಶಾಸಕ ಎ.ವಿ.ಉಮಾಪತಿ ವಾಗ್ದಾಳಿ । ಕನ್ನಡಪ್ರಭ ಸರಣಿ ವರದಿಗಳ ಪ್ರಮುಖ ಅಂಶಗಳು ಮಾರ್ದನಿಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗದ ಗೊಲ್ಲರ ಹಾಸ್ಟೆಲ್‌ನಲ್ಲಿ ನಡೆದಿರುವ ಅನುದಾನ ದುರುಪಯೋಗ ಸಂಗತಿ ಇದೀಗ ಬೀದಿಗೆ ಬಂದಿದ್ದು ಮಂಗಳವಾರ ಗೊಲ್ಲ ಸಮಾಜದ ಪ್ರಮುಖರು ಸುದ್ದಿಗೋಷ್ಠಿ ನಡೆಸಿ ಸಂಘದ ನಿಕಟಪೂರ್ವ ಅಧ್ಯಕ್ಷ ಮೀಸೆ ಮಹಲಿಂಗಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಗೊಲ್ಲರ ಸಂಘದ ಗೋಕುಲದಲ್ಲಿ ಓರ್ವ ಗೋಮುಖ ವ್ಯಾಘ್ರ ಸೇರಿಕೊಂಡಿದ್ದಾನೆಂದು ಆಕ್ರೋಶ ಹೊರ ಹಾಕಿದರು. ಕನ್ನಡಪ್ರಭದಲ್ಲಿ ಬಂದ ಸರಣಿ ವರದಿಯಲ್ಲಿ ಪ್ರಮುಖ ಅಂಶಗಳು ಸುದ್ದಿಗೋಷ್ಠಿಯಲ್ಲಿ ಮಾರ್ದನಿಸಿದ್ದು ವಿಶೇಷವಾಗಿತ್ತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೊಲ್ಲ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ಎ.ವಿ.ಉಮಾಪತಿ, ಹಿಂದಿನ ಅಧ್ಯಕ್ಷ ಡಾ.ಕಾಟಪ್ಪ ನಿಧನ ನಂತರ ಸರ್ವ ಸದಸ್ಯರ ಸಭೆ ಕರೆಯದೇ ಉದ್ಭವ ಮೂರ್ತಿಯಂತೆ ಅಧ್ಯಕ್ಷ ಸ್ಥಾನ ಅಲಂಕರಿಸಿದ ಮೀಸೆ ಮಹಲಿಂಗಪ್ಪ ಇಡೀ ಸಂಘದ ವ್ಯವಸ್ಥೆ ಹಾಳುಗೆಡವಿದ್ದಾರೆ. ಸಮುದಾಯದ ಏಳಿಗೆಗಾಗಿ ಮೀಸಲಿದ್ದ ಸಂಘವನ್ನು ವೈಯುಕ್ತಿಕ ಬದುಕಿಗೆ ಬಳಸಿಕೊಂಡಿದ್ದಾರೆ ಎಂದು ದೂರಿದರು.

ಸಂಘದ ಸರ್ವ ಸದಸ್ಯರ ಅನುಮತಿ ಪಡೆಯದೆ ಹಳೆ ಹಾಸ್ಟೆಲ್ ಕಟ್ಟಡ ಕೆಡವಿ ಸಮುದಾಯ ಭವನ ನಿರ್ಮಾಣದ ತೀರ್ಮಾನ ಕೈಗೊಳ್ಳಲಾಗಿದೆ. ಹಿಂದಿನ ಸಂಸದ ಎ.ನಾರಾಯಣಸ್ವಾಮಿ 50 ಲಕ್ಷ, ಜಿ.ಸಿ.ಚಂದ್ರಶೇಖರ್ 10 ಲಕ್ಷ, ವಿಪ ಸದಸ್ಯ 10 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಕಟ್ಟಡ ನಿರ್ಮಾವಾಗಿಲ್ಲ. ಈ ಸಂಬಂಧ ತಹಸೀಲ್ದಾರರು ಸ್ಥಳ ತನಿಖೆ ನಡೆಸಿ ಯಾವುದೇ ಕಟ್ಟಡ ನಿರ್ಮಾಣವಾಗಿಲ್ಲವೆಂಬ ವರದಿ ನೀಡಿದ್ದಾರೆ.

ಕಟ್ಟಡ ನಿರ್ಮಾಣಕ್ಕೆಂದು ನಿರ್ಮಿತಿ ಕೇಂದ್ರದಿಂದ 25 ಲಕ್ಷ ರು. ಕಬ್ಬಿಣ ಖರೀದಿ ಮಾಡಲಾಗಿದೆ. ಅದೆಲ್ಲಿಗೆ ಹೋಯಿತೋ ಗೊತ್ತಿಲ್ಲ. ನಿರ್ಮಿತಿ ಕೇಂದ್ರದ ಹಿಂದಿನ ಯೋಜನಾ ನಿರ್ದೇಶಕರ ಜೊತೆ ಗೂಡಿ ಹಣ ಲೂಟಿ ಮಾಡಲಾಗಿದೆ ಎಂದು ಉಮಾಪತಿ ಆರೋಪಿಸಿದರು.

ಸಂಘದ ನವೀಕರಣ ಮಾಡಬೇಕಾದರೆ ಆಡಿಟ್ ವರದಿ ತಯಾರಿಸಿ ಸರ್ವ ಸದಸ್ಯರ ಸಭೆ ಮುಂದೆ ಮಂಡಿಸಿ ಒಪ್ಪಿಗೆ ಪಡೆಯಬೇಕು. ಎಂಟು ವರ್ಷಗಳಿಂದ ಸರ್ವ ಸದಸ್ಯರ ಸಭೆ ಕರೆದಿಲ್ಲ. ಆಸ್ತಿ ಮತ್ತು ಜವಾಬ್ದಾರಿ ಪಟ್ಟಿಯಲ್ಲಿ ಸಂಘಕ್ಕೆ ಸಿ.ಎ.ನಿವೇಶನ ಖರೀದಿರಿಸುವುದ ತೋರಿಸಲಾಗಿದೆ. ಇದುವರೆಗೂ ಆ ನಿವೇಶನ ಎಲ್ಲಿದೆ ಎಂಬುದೇ ಗೊತ್ತಿಲ್ಲ. ನಿವೇಶನ ನೋಂದಣಿಯಾಗಿಲ್ಲ. ಸಂಘದ ಬಾಡಿಗೆ ನಿರ್ಧರಿಸಲು70 ಸಾವಿರ ರು. ಲೋಕೋಪಯೋಗಿ ಇಲಾಖೆಗೆ ಖರ್ಚು ಎಂದು ತೋರಿಸಲಾಗಿದೆ. ಅಲ್ಲದೇ ಅಲೆಮಾರಿ ಹಾಸ್ಟೆಲ್ ಗೆ 80 ಸಾವಿರ, ಬಿಸಿಎಂ ಕಚೇರಿ ಖರ್ಚು 60 ಸಾವಿರವೆಂದು ಇಂತಹ ಅಸಂಬದ್ದ ಲೆಕ್ಕ ತೋರಿಸಲಾಗಿದೆ ಎಂದರು.

ಇಡೀ ಹಾಸ್ಟೆಲ್ ಕಟ್ಟಡವನ್ನು 15 ಲಕ್ಷ ರು.ನಲ್ಲಿ ನಿರ್ಮಿಸಿದ್ದರೆ 27 ಲಕ್ಷ ರು. ರಿಪೇರಿ ಖರ್ಚು ನಮೂದಿಸಲಾಗಿದೆ. ಸಮ್ಮೇಳನ ನಡೆಸದೇ ಸಮ್ಮೇಳನ ಖರ್ಚು ಎಂದು 2 ಲಕ್ಷ ರು. ಹಾಗೂ ಬೆಂಗಳೂರು ಪ್ರವಾಸವೆಂದು 60 ಸಾವಿರ ರು. ಆಡಿಟ್ ನಲ್ಲಿ ತೋರಿಸಲಾಗಿದೆ. 2014-15 ರಲ್ಲಿ ಸರ್ವ ಸದಸ್ಯರ ಸಭೆ ಖರ್ಚು ಎಂದು 1.32 ಲಕ್ಷ ರು. ನಮೂದಿಸಲಾಗಿದೆ. ಸರ್ವ ಸದಸ್ಯರ ಸಭೆ ಕರೆದಿಲ್ಲ, ಸರ್ವ ಸದಸ್ಯರ ಯಾರ ವಿಳಾಸವೂ ಅವರ ಬಳಿ ಇಲ್ಲವೆಂದು ಉಮಾಪತಿ ಹೇಳಿದರು.

ಮೀಸೆ ಮಹಲಿಂಗಪ್ಪ ಅವರು ನಡೆಸಿದ ಅಕ್ರಮಗಳ ಸಹಕಾರ ಸಚಿವ ರಾಜಣ್ಣ ಅವರ ಗಮನಕ್ಕೆ ತರಲಾಗಿತ್ತು. ಜಿಲ್ಲಾ ನೋಂದಣಾಧಿಕಾರಿಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ವಿನಂತಿಸಲಾಗಿತ್ತು. ಸಂಘದಲ್ಲಿ ಮೇಲ್ನೋಟಕ್ಕೆ ಅವ್ಯವಹಾರವಾಗಿರುವುದ ಗಮನಿಸಿದ ಸರ್ಕಾರ ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿ ನೇಮಕ ಮಾಡಿದೆ ಎಂದು ಉಮಾಪತಿ ವಿವರಿಸಿದರು.

ಈ ಸಂದರ್ಭದಲ್ಲಿ ಸಂಘದ ಮಾಜಿ ಖಜಾಂಚಿ ಬಿ.ಪಿ.ಲಿಂಗಾರೆಡ್ಡಿ, ಗೊಲ್ಲರ ಸಮುದಾಯದ ಮುಖಂಡರಾದ ನಿವೃತ್ತ ಎಸಿಪಿ ಅಜ್ಜಪ್ಪ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಕೆ.ಸಿ.ರಮೇಶ್, ಸಂಪತ್ ಕುಮಾರ್, ಕೂನಿಕೆರೆ ರಾಮಣ್ಣ, ಚಿತ್ತಯ್ಯ, ಗುತ್ತಿಗಟ್ಟೆ ಪ್ರಕಾಶ್, ಮೈಲಾರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.