ಹುಬ್ಬಳ್ಳಿ:

ಕಾನೂನು ಬಾಹಿರವಾಗಿ ಜಾನುವಾರು ಕೂಡಿಟ್ಟಿರುವುದನ್ನು ಖಂಡಿಸಿ, ಅವುಗಳ ರಕ್ಷಣೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ವಿಫಲವಾಗಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು ಬುಧವಾರ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ 20ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸಲು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.

ರಕ್ಷಿಸಿದ ಜಾನುವಾರಗಳಲ್ಲಿ ಎಷ್ಟು ಗೋಶಾಲೆಗೆ ಕಳುಹಿಸಲಾಗಿದೆ ಎಂದು ಆಯುಕ್ತರು ಲೆಕ್ಕ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ವೇಳೆ ಪಾಲಿಕೆ ಆಯುಕ್ತರು ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಳೇ ಹುಬ್ಬಳ್ಳಿ ಇಬ್ರಾಹಿಂಪುರದ ಖಾಸಗಿ ಜಾಗದಲ್ಲಿ ಕೆಲವು ದಿನಗಳ ಹಿಂದೆ ಅಕ್ರಮವಾಗಿ ಜಾನುವಾರಗಳನ್ನು ಕೂಡಿ ಹಾಕಲಾಗಿತ್ತು. ಹಿಂದೂ ಕಾರ್ಯಕರ್ತರು ಮಾಹಿತಿ ಆಧರಿಸಿ ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ದಾಳಿ ನಡೆಸಿದ ವೇಳೆ 131 ಜಾನುವಾರುಗಳಿದ್ದವು. ಅಧಿಕಾರಿಗಳು ಎಲ್ಲ ಜಾನುವಾರುಗಳನ್ನು ಗೋ ಶಾಲೆಗೆ ಕಳುಹಿಸಿಕೊಡುವುದಾಗಿ ಹೇಳಿದ್ದರು. ಆದರೆ, 62 ಜಾನುವಾರುಗಳನ್ನು ಮಾತ್ರ ಸಾಗಿಸಿದ್ದಾರೆ. ಉಳಿದ ಜಾನುವಾರುಗಳು ಎಲ್ಲಿವೆ ಎಂಬ ಮಾಹಿತಿ ನೀಡಬೇಕು ಎಂದು ಪಟ್ಟು ಹಿಡಿದರು.


ನಗರದಲ್ಲಿ 20ಕ್ಕೂ ಹೆಚ್ಚು ಕಸಾಯಿಖಾನೆಗಳಿದ್ದು, ಅದರಲ್ಲಿ ಒಂದು ಮಾತ್ರ ಅಧಿಕೃತವಾಗಿದೆ. ಪಾಲಿಕೆ ಹಾಗೂ ಪೊಲೀಸ್ ಇಲಾಖೆಗೆ ಈ ಕುರಿತು ಪರಿಶೀಲನೆ ನಡೆಸಲು ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಕ್ರಮವಿಲ್ಲ. ಪಾಲಿಕೆಯ ಪಶುವೈದ್ಯಾಧಿಕಾರಿಯಾಗಿ ಎ.ಜಿ. ಕುಲಕರ್ಣಿ ಅವರು ಔಪಚಾರಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ತಕ್ಷಣ ಅವರನ್ನು ವರ್ಗಾಯಿಸಿ ಪೂರ್ಣಾವಧಿ ವೈದ್ಯರನ್ನು ನೇಮಕಗೊಳಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಧಾರವಾಡ ವಿಭಾಗ ಕಾರ್ಯದರ್ಶಿ ರಮೇಶ ಕದಂ, ಬಜರಂಗದಳ ಮಹಾನಗರ ಸಂಯೋಜಕ ಪ್ರಶಾಂತ ನರಗುಂದ, ಮಹಾನಗರ ಸಹ ಕಾರ್ಯದರ್ಶಿ ಅರುಣ ಪ್ರಭು, ಸಚಿನ ಪಾಟೀಲ, ರಘು ಯಲ್ಲಕ್ಕನವರ, ಜೀವನ ನಾಡಿಗೇರ, ಆಶೀರ್ವಾದ ಹಂಜಗಿ, ಲಿಂಗರಾಜ ಹರಕಣಿ, ವಿಶಾಲ ತುಳಜಾರಾಮ, ನವೀನ ಜಿತೂರಿ, ರಮೇಶ ಸಾವಂತ ಸೇರಿದಂತೆ ಹಲವರಿದ್ದರು.

ಆಯುಕ್ತ ಕಚೇರಿಗೆ ಮುತ್ತಿಗೆಗೆ ಯತ್ನ

ಪ್ರತಿಭಟನಾಕಾರರ ಅಹವಾಲು ಆಲಿಸಲು ಆಗಮಿಸಿದ ಮಹಾನಗರ ಪಾಲಿಕೆ ಉಪ ಆಯುಕ್ತೆ ಅನುರಾಧ ವಸ್ತ್ರದ ಅವರೊಂದಿಗೆ ಪ್ರತಿಭಟನಾತಾರರು ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರು ಬಂದು ಸಮರ್ಪಕ ಮಾಹಿತಿ ನೀಡಬೇಕು. ಅವರು ಬರುವ ವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಪೊಲೀಸರು ಮನವೊಲಿಸಲು ಮುಂದಾದಾಗ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆಯಿತು. ಬಳಿಕ ಬ್ಯಾರಿಕೇಡ್ ತಳ್ಳಿ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಹಳೇ ಸಿಎಆರ್ ಮೈದಾನಕ್ಕೆ ಕರೆದೊಯ್ದು ಬಿಡುಗಡೆಗೊಳಿಸಿದರು.